ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂಗೆ ಸಚಿವರ ವಿರೋಧ: ಮಾರ್ಗಸೂಚಿ ಪರಿಷ್ಕಾರ?

Last Updated 6 ಜನವರಿ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿರುವ ನಿರ್ಧಾರಕ್ಕೆ ಹಲವು ಸಚಿವರು ಸಂಪುಟ ಸಭೆಯಲ್ಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಮುಂದಿನ ವಾರವೇ ಮಾರ್ಗಸೂಚಿ ನಿಯಮಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ.

ಜನವರಿ 4ರಂದು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಜ.19 ರವರೆಗೂ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ, ಸಚಿವರ ತೀವ್ರ ವಿರೋಧದ ಕಾರಣದಿಂದ ನಿರ್ಬಂಧಗಳ ಸಡಿಲಿಕೆ ಕುರಿತು ಜ.14 ಅಥವಾ 15ರಂದೇ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ.

ಕೋವಿಡ್‌ ನಿಯಂತ್ರಣ ಸಂಬಂಧ ಕೆಲವು ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾತ್ರಿ ಕರ್ಫ್ಯೂ ಮುಂದುವರಿಕೆ ಹಾಗೂ ವಾರಾಂತ್ಯದ ಕರ್ಫ್ಯೂಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದರು. ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಕೆಲವು ಸಚಿವರು ಆರಂಭದಲ್ಲೇ ಇದನ್ನು ವಿರೋಧಿಸಿದ್ದರು.

ಗುರುವಾರ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ್ದ ಈಶ್ವರಪ್ಪ, ‘ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ. ರಾಜ್ಯದ ಎಲ್ಲ ಕಡೆಯೂ ಈ ಪರಿಸ್ಥಿತಿ ಇಲ್ಲ. ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದ್ದರು.

‘ರಾತ್ರಿ ಕರ್ಫ್ಯೂ ಆದೇಶ ಶಿವಮೊಗ್ಗ ಜಿಲ್ಲೆಯನ್ನು ಇನ್ನೂ ತಲುಪಿಲ್ಲ. ನಮ್ಮ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಇಲ್ಲ, ಸುಡುಗಾಡೂ ಇಲ್ಲ. ಕೋವಿಡ್‌ ಇರುವುದು ನಿಜ. ಹಾಗೆಂದು ಎಲ್ಲ ಕಡೆಯಲ್ಲೂ ಕರ್ಫ್ಯೂ ಜಾರಿಗೊಳಿಸಲು ಸಾಧ್ಯವಿಲ್ಲ. ನಿರ್ಧಾರ ಮರು ಪರಿಶೀಲನೆಗೆ ಸಂಪುಟ ಸಭೆಯಲ್ಲೇ ಚರ್ಚಿಸುತ್ತೇನೆ’ ಎಂದು ಅಸಮಾಧಾನ ಹೊರಹಾಕಿದ್ದರು.

ಹಲವು ಸಚಿವರ ಸಹಮತ: ಸಂಪುಟ ಸಭೆಯಲ್ಲಿ ಕಾರ್ಯಸೂಚಿ ಮೇಲಿನ ಚರ್ಚೆ ಮುಗಿದ ಬಳಿಕ ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ, ಜ.4 ರ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹಲವು ಸಚಿವರು ಅವರ ಮಾತಿಗೆ ದನಿಗೂಡಿಸಿದರು.

‘ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಜಿಲ್ಲೆಗಳಲ್ಲೂ ಈ ರೀತಿಯ ಬಿಗಿ ಕ್ರಮಗಳನ್ನು ಜಾರಿಗೊಳಿಸಿರುವುದು ಸರಿಯಲ್ಲ. ತಕ್ಷಣವೇ ಮರುಪರಿಶೀಲನೆ ನಡೆಸಿ, ನಿರ್ಬಂಧಗಳನ್ನು ಸಡಿಲಿಸಬೇಕು ಎಂಬುದಾಗಿ ಹಲವು ಸಚಿವರು ಆಗ್ರಹಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ರಾಜ್ಯದಾದ್ಯಂತ ಬಿಗಿ ಕ್ರಮಗಳ ಜಾರಿಗೆ ಹಲವು ಸಚಿವರು ಆಕ್ಷೇಪಿಸಿದರು. ಸೋಂಕಿನ ಪ್ರಮಾಣಜಾಸ್ತಿ ಇರುವೆಡೆ ಇಂತಹ ಕ್ರಮಗಳು ಇರಲಿ, ಸೋಂಕು ಇಲ್ಲದ ಕಡೆ ಬಿಗಿ ಕ್ರಮ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದರು.

ಸಚಿವರ ಅಭಿಪ್ರಾಯದಂತೆ ಜ.14 ಅಥವಾ 15ರಂದು ಉನ್ನತಮಟ್ಟದ ಸಭೆ ನಡೆಸಿ, ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಜತೆ ಚರ್ಚಿಸಿ ಮಾರ್ಗಸೂಚಿ ಸಡಿಲಿಕೆ ಕುರಿತು ತೀರ್ಮಾನ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

‘ಕಾಂಗ್ರೆಸ್‌ ಪಾದಯಾತ್ರೆಗೆ ಸಂಬಂಧವಿಲ್ಲ’

‘ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ನಡೆಸಲಿರುವ ಪಾದಯಾತ್ರೆಗೂ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗೂ ಸಂಬಂಧವಿಲ್ಲ. ಈಗ ಮೇಕೆದಾಟು ಸಂಪರ್ಕಿಸುವ ರಸ್ತೆಗೆ ಸೀಮಿತವಾಗಿ ನಿರ್ಬಂಧ ಜಾರಿಗೊಳಿಸಲಾಗಿದೆಯೇ’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು. ‘ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಆರಂಭದಲ್ಲೇ ನಿಯಂತ್ರಿಸಬೇಕು ಎಂಬುದು ಸರ್ಕಾರದ ಆಶಯ. ಕಾಂಗ್ರೆಸ್‌ನವರು ಪಾದಯಾತ್ರೆ ಮಾಡುವುದಾದರೆ ಮಾಡಲಿ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT