ಸೋಮವಾರ, ಜನವರಿ 24, 2022
29 °C
1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ

‘ವಿದ್ಯಾಗಮ’ ಮತ್ತೆ ಆರಂಭಿಸಲು ಸೂಚನೆ: ಶಿಕ್ಷಣ ಇಲಾಖೆ ಸುತ್ತೋಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನ ಮತ್ತು ಅನುದಾನರಹಿತ ಶಾಲೆಗಳ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ 1ರಿಂದ 9ನೇ ತರಗತಿಯವರೆಗೆ ಭೌತಿಕ ತರಗತಿಗಳನ್ನು ಜ.6ರಿಂದ 19ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸುವಂತೆ ಸೂಚಿಸಲಾಗಿದೆ. ಇದಕ್ಕಾಗಿ ಪೂರ್ವ ತಯಾರಿಗಳನ್ನು ಕೈಗೊಳ್ಳಬೇಕು ಮತ್ತು ಎಲ್ಲ ಜಿಲ್ಲೆಗಳಲ್ಲಿ ಅನುಷ್ಠಾನ ಅಧಿಕಾರಿಗಳು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.

ಪ್ರತಿ ಶಾಲೆಯ 20ರಿಂದ 25 ವಿದ್ಯಾರ್ಥಿಗಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಬೇಕು. ಈ ಶಿಕ್ಷಕರು ವಾರದ ವೇಳಾಪಟ್ಟಿಯನ್ನು ನೀಡಿ ಮಕ್ಕಳ ಸ್ವಯಂ ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಲಾಗಿದೆ.

ವಿದ್ಯಾಗಮ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಭೌತಿಕವಾಗಿ (ಆಫ್‌–ಲೈನ್ ತರಗತಿಗಳು) ಬೋಧನೆ ಮಾಡಬಹುದು. ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಬೋಧನೆ ಮಾಡಬಹುದಾಗಿದೆ. ಬಹುತೇಕ ಮೊಬೈಲ್‌ ದೂರವಾಣಿಗಳನ್ನು ಪೋಷಕರೇ ಹೊಂದಿರುತ್ತಾರೆ. ಹೀಗಾಗಿ, ಪೋಷಕರು ಮನೆಯಲ್ಲಿ ಲಭ್ಯವಾಗುವ ಸಮಯದಲ್ಲಿ ಸಂಪರ್ಕಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಲಾಗಿದೆ.

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಈ ಕಾರ್ಯಕ್ರಮದಿಂದ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಲಾಗಿದೆ.

ಬಿಸಿಯೂಟಕ್ಕೆ ಅವಕಾಶ: ಆಯಾ ಶಾಲೆಯ ಎಸ್‌ಡಿಎಂಸಿ ಅಥವಾ ಪೋಷಕರೊಂದಿಗೆ ಚರ್ಚಿಸಿ, ಒಪ್ಪಿಗೆ ಪಡೆದು ವಿದ್ಯಾಗಮ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ವಿತರಿಸಬಹುದು. ವಿದ್ಯಾಗಮ ಕಾರ್ಯಕ್ರಮದಲ್ಲಿ ಹಾಜರಾಗದ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳನ್ನು ಅವರ ಪೋಷಕರಿಗೆ ವಿತರಿಸಬೇಕು ಎಂದು ಸೂಚಿಸಲಾಗಿದೆ.

ಪಾಳಿ ಪದ್ಧತಿ ಅನುಸರಿಸಲು ಸಲಹೆ

ವಿದ್ಯಾಗಮ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲು ಸ್ಥಳಾವಕಾಶ ಕೊರತೆ ಎದುರಾಗಬಹುದು. ಗ್ರಾಮೀಣ ಪ್ರದೇಶದಲ್ಲಿ ಅನಗತ್ಯ ಗೊಂದಲಗಳು ಸೃಷ್ಟಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಪಾಳಿ ಪದ್ಧತಿಯಲ್ಲಿ ಪ್ರತಿ ದಿನ ನಾಲ್ಕು ಗಂಟೆಗಳ ಕಾಲಮಿತಿಯಲ್ಲಿ ವಿದ್ಯಾಗಮ ಕಾರ್ಯಕ್ರಮ ಕೈಗೊಳ್ಳಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

1ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ದಿನ ಹಾಗೂ 4ರಿಂದ 5 ತರಗತಿಗಳಿಗೆ ವಾರಕ್ಕೆ ಮೂರು ದಿನಗಳಂತೆ ತಲಾ 45 ನಿಮಿಷದ ಮೂರು ಅವಧಿಗಳಂತೆ ಒಟ್ಟು 2 ಗಂಟೆ 30 ನಿಮಿಷಗಳನ್ನು ನಿಗದಿಪಡಿಸಲಾಗಿದೆ.

6ನೇ ತರಗತಿಗೆ ವಾರಕ್ಕೆ ಮೂರು ದಿನಗಳು, 7 ಮತ್ತು 8ನೇ ತರಗತಿಗಳಿಗೆ ವಾರಕ್ಕೆ 2 ದಿನಗಳಂತೆ ತಲಾ 45 ನಿಮಿಷದ 4 ಅವಧಿಗಳಂತೆ ಒಟ್ಟು 3 ಗಂಟೆಗಳನ್ನು ನಿಗದಿಪಡಿಸಲಾಗಿದೆ.

ಪ್ರೌಢಶಾಲೆಗಳಲ್ಲಿ 8ನೇ ತರಗತಿಗೆ ವಾರಕ್ಕೆ ಎರಡು ದಿನಗಳಂತೆ ಮತ್ತು 9ನೇ ತರಗತಿಗೆ ವಾರಕ್ಕೆ 2 ದಿನಗಳಂತೆ ತಲಾ 45 ನಿಮಿಷದ 4 ಅವಧಿಗಳಂತೆ ಒಟ್ಟು 3 ಗಂಟೆಗಳನ್ನು ಬೋಧನೆ ಮಾಡಬಹುದು ಎಂದು ಸೂಚಿಸಲಾಗಿದೆ.

ಈ ಸೂಚನೆಗಳನ್ನು ಸ್ಥಳಾವಕಾಶದ ಲಭ್ಯತೆ ಅನುಸಾರ ಬದಲಾವಣೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು