ಗುರುವಾರ , ಮೇ 13, 2021
16 °C
ಬೇಡಿಕೆ ತಕ್ಕಂತೆ ಪೂರೈಕೆ ಇಲ್ಲ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಸಿಕೆ ಕೊರತೆ: ಬಂದ ಒಂದು ದಿನದಲ್ಲೇ ಖಾಲಿ‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಲಸಿಕೆ ಕೊರತೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಆಯಾ ದಿನ ಬಂದ ಲಸಿಕೆಯು ಅದೇ ದಿನವೇ ಖಾಲಿಯಾಗುತ್ತಿವೆ. ಬೇಡಿಕೆ ಹೆಚ್ಚಿದಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ ಎನ್ನುವುದು ನಾಗರಿಕರ ದೂರು.

ದಾವಣಗೆರೆ ಜಿಲ್ಲೆಗೆ ಗುರುವಾರ ಸಂಜೆ 8,000 ಕೋವಿಡ್‌ ಲಸಿಕೆ ಬಂದಿತ್ತು. ಶುಕ್ರವಾರವೇ 7,000 ಲಸಿಕೆ ಖಾಲಿಯಾಗಿತ್ತು. ಬಾಕಿ ಉಳಿದಿದ್ದ ಲಸಿಕೆ ಶನಿವಾರ ಬೆಳಿಗ್ಗೆಯೇ ಖಾಲಿಯಾಗಿವೆ. ದಿನಕ್ಕೆ 13 ಸಾವಿರ ಲಸಿಕೆ ಬೇಡಿಕೆ ಇದೆ. ಆದರೆ, ಮೂರು–ನಾಲ್ಕು ದಿನಗಳಿಗೆ ಒಮ್ಮೆ 5 ಸಾವಿರದಿಂದ 8 ಸಾವಿರದಷ್ಟು ಲಸಿಕೆ ಪೂರೈಕೆಯಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಹಲವು ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಖಾಲಿಯಾಗಿದೆ ಎಂಬ ನಾಮಫಲಕ ಹಾಕಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 100 ಲಸಿಕೆ ಹಂಚಿಕೆಯಾಗುತ್ತಿದ್ದು, ಈಗ 200ಕ್ಕೂ ಹೆಚ್ಚು ಜನ ಲಸಿಕೆ ಪಡೆಯಲು ಬರುತ್ತಿರುವುದರಿಂದ ಲಸಿಕೆ ಪೂರೈಕೆಯಾದ ದಿನವೇ ಖಾಲಿಯಾಗುತ್ತಿವೆ.

ಚಿತ್ರದುರ್ಗ ಜಿಲ್ಲೆಗೆ ಗುರುವಾರ ರಾತ್ರಿ 8,000 ಡೋಸ್‌ ಪೂರೈಕೆಯಾಗಿತ್ತು. ಬಾಕಿ ಉಳಿದಿದ್ದ 1,580 ಡೋಸ್‌ಗಳು ಶನಿವಾರ ಬೆಳಿಗ್ಗೆಯೇ ಖಾಲಿಯಾಗಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕಲಬುರ್ಗಿ ಜಿಲ್ಲೆಗೆ ನಿತ್ಯ 20 ಸಾವಿರ ಡೋಸ್‌ ಲಸಿಕೆ ಅಗತ್ಯವಿದೆ. ‘ಶುಕ್ರವಾರ 10 ಸಾವಿರ ಡೋಸ್ ಲಸಿಕೆ ಬಂದಿತ್ತು. ಅದು ಶನಿವಾರದ ವೇಳೆಗೆ ಖಾಲಿಯಾಗಿದೆ’ ಎಂದು ಜಿಲ್ಲಾ ಆರ್‌ಸಿಎಚ್‌ಒ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ ತಿಳಿಸಿದರು.

ಯಾದಗಿರಿ ಜಿಲ್ಲೆಗೆ ಶುಕ್ರವಾರ 5,000 ಕೋವಿಶೀಲ್ಡ್ ಲಸಿಕೆ ಬಂದಿದ್ದು, ಕೊರತೆ ಇಲ್ಲ. ರಾಯಚೂರು ಜಿಲ್ಲೆಯಲ್ಲಿ ಕೋವಿಶಿಲ್ಡ್ ಕೊರತೆ ಇಲ್ಲ. ಕೋವ್ಯಾಕ್ಸಿನ್ ಪೂರೈಕೆ ವಾರದಿಂದ ಸ್ಥಗಿತವಾಗಿದೆ. ಮೊದಲ ಸಲ ಕೋವ್ಯಾಕ್ಸಿನ್ ಪಡೆದವರು, ಎರಡನೇ ಲಸಿಕೆಗೆ ಕಾಯುತ್ತಿದ್ದಾರೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ₹ 2 ಸಾವಿರ ದರದಲ್ಲಿ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಬೀದರ್, ಕೊಪ್ಪಳ ಜಿಲ್ಲೆಗಳಲ್ಲಿ ಕೊರತೆಯಾಗಿಲ್ಲ.

ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರವೇ ಲಸಿಕೆ ಖಾಲಿಯಾಗಿದೆ. ಕೋವ್ಯಾಕ್ಸಿನ್‌ ಎರಡು ದಿನಗಳ ಹಿಂದೆಯೇ ಖಾಲಿಯಾಗಿದ್ದು, ಶುಕ್ರವಾರ ಸಂಜೆವರೆಗೆ ಕೋವಿಶೀಲ್ಡ್‌ ಹಾಕಿದ್ದಾರೆ. ಕಳೆದ ವಾರ ಬಂದಿದ್ದ ಎಂಟು ಸಾವಿರ ಡೋಸ್‌ ಲಸಿಕೆ ಖಾಲಿಯಾಗಿದ್ದು, ವೈದ್ಯರು ಇನ್ನೂ ಎಂಟು ಸಾವಿರ ಡೋಸ್‌ ಲಸಿಕೆಯ ನಿರೀಕ್ಷೆಯಲ್ಲಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಸದ್ಯಕ್ಕೆ 200 ಡೋಸ್‌ ಕೋವ್ಯಾಕ್ಸಿನ್‌ ಹಾಗೂ 6,000 ಡೋಸ್‌ ಕೋವಿಶೀಲ್ಡ್‌ ಲಸಿಕೆ ಲಭ್ಯವಿದೆ.

ಕೊಡಗು ಜಿಲ್ಲೆಯಲ್ಲಿ 700 ಡೋಸ್‌ ಕೋವ್ಯಾಕ್ಸಿನ್‌ ಹಾಗೂ 3,400 ಡೋಸ್ ಕೋವಿಶೀಲ್ಡ್‌ ಸೇರಿದಂತೆ ಒಟ್ಟು 4,100 ಡೋಸ್‌ ದಾಸ್ತಾನಿದೆ ಎಂದು ಡಿಎಚ್‌ಒ ಮೋಹನ್‌ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ 7,000 ಡೋಸ್‌ ಲಸಿಕೆ ಲಭ್ಯವಿದೆ.

ಮೈಸೂರು ಜಿಲ್ಲೆಯಲ್ಲಿ ಸದ್ಯಕ್ಕೆ ಲಸಿಕೆ ಕೊರತೆ ಇಲ್ಲ. ಇನ್ನೂ ಮೂರು ದಿನಗಳಿಗಾಗುವಷ್ಟು ಕೋವಿಡ್‌ ಲಸಿಕೆ ಸಂಗ್ರಹವಿದೆ. ಕೋವಿಶೀಲ್ಡ್ 30 ಸಾವಿರ ಡೋಸ್‌, ಕೋವ್ಯಾಕ್ಸಿನ್‌ 7,500 ಡೋಸ್‌ ಇದೆ ಎಂಬುದಾಗಿ ಜಿಲ್ಲಾ ಕೋವಿಡ್‌ ಲಸಿಕೆ ಅಧಿಕಾರಿ ಡಾ.ಎಲ್‌.ರವಿ ತಿಳಿಸಿದ್ದಾರೆ.

ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ 15,390 ಡೋಸ್ ಲಸಿಕೆ ಲಭ್ಯವಿದೆ. ರಾಮನಗರ ಜಿಲ್ಲೆಯಲ್ಲಿ ಶನಿವಾರದ ಅಂತ್ಯಕ್ಕೆ 3950 ಡೋಸೆಜ್ ಲಸಿಕೆ ಮಾತ್ರವೇ ಉಳಿದಿದೆ. ಇದು ಭಾನುವಾರಕ್ಕೆ ಮಾತ್ರ ಸಾಕಾಗಲಿದೆ.

ತಪ್ಪದ ಜನರ ಪರದಾಟ
ವಿಜಯಪುರ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ಲಸಿಕೆಯ ಕೊರತೆ ತೀವ್ರವಾಗಿದೆ. 

ನಿತ್ಯ ಹಾಕಿಕೊಂಡಿರುವ ಗುರಿಯ ಅರ್ಧದಷ್ಟು ಲಸಿಕೆ ಜಿಲ್ಲೆಗಳಲ್ಲಿಲ್ಲ. ಆಯಾ ದಿನ ಬಂದ ಲಸಿಕೆಯು ಅದೇ ದಿನವೇ ಖಾಲಿಯಾಗುತ್ತಿವೆ. ಕೆಲವು ಕೇಂದ್ರಗಳಲ್ಲಿ ಜನರನ್ನು ಲಸಿಕೆ ಬಂದ ನಂತರ ಬರುವಂತೆ ವಾಪಸ್‌ ಕಳುಹಿಸಲಾಗುತ್ತಿದೆ. 

ಹಾವೇರಿ ಜಿಲ್ಲೆಯಲ್ಲಿ ನಿತ್ಯ 12,250 ಮಂದಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, 4,440 ಲಸಿಕೆ ಮಾತ್ರ ಇವೆ. ಬೆಳಗಾವಿ ಜಿಲ್ಲೆಯಲ್ಲಿ 30 ಸಾವಿರ ಗುರಿ ಇದ್ದರೆ, ಕೇವಲ 7 ಸಾವಿರ ಲಸಿಕೆ ಲಭ್ಯವಿವೆ. ಇದೇ ಪರಿಸ್ಥಿತಿ ಬಹುತೇಕ ಜಿಲ್ಲೆಗಳಲ್ಲಿದೆ. ಲಸಿಕೆ ಇಲ್ಲವೆಂದು ವಾಪಸ್‌ ಕಳುಹಿಸುತ್ತಿರುವುದರಿಂದ ಕೆಲವು ಕಡೆಗಳಲ್ಲಿ ಜನರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಡುವೆ ವಾಗ್ವಾದ ಸಾಮಾನ್ಯವಾಗಿದೆ. ಒಂದೇ ಲಸಿಕೆ ತೆಗೆದುಕೊಂಡವರು, ಎರಡನೇ ಲಸಿಕೆಗಾಗಿ ಪರದಾಡುವಂತಾಗಿವೆ.

ದಕ್ಷಿಣ ಕನ್ನಡ: ಹೆಚ್ಚಿದ ಜನರ ಆಸಕ್ತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಸಿಕೆಗೆ ಕೊರತೆ ಇಲ್ಲ. ಆದರೆ, 18 ವರ್ಷ ಮೇಲಿನವರಿಗೆ ಲಸಿಕೆ ಈಗಲೇ ಆರಂಭವಾಗಿಲ್ಲ. ನಿಗದಿತ ಪ್ರಮಾಣದಲ್ಲಿ ಲಸಿಕೆಗಳು ಜಿಲ್ಲೆಗಳಿಗೆ ಬರುತ್ತಿವೆ. ಆದರೆ, ಜನರ ಆಸಕ್ತಿ ಹೆಚ್ಚಾಗಿರುವುದರಿಂದ ದಟ್ಟಣೆ ಉಂಟಾಗುತ್ತಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,47,000 ಲಸಿಕೆಗಳು ಬಂದಿದ್ದು, 3,39,297 ಲಸಿಕೆಗಳು ಖರ್ಚಾಗಿವೆ. 7,400 ಲಸಿಕೆಗಳು ಲಭ್ಯವಾಗಿವೆ. ಉಡುಪಿ ಜಿಲ್ಲೆಗೆ ಇದುವರೆಗೂ 2,44,300 ಕೋವಿಡ್ ಲಸಿಕೆಗಳು ಬಂದಿದ್ದು, 2,41,000 ಲಸಿಕೆ ಖರ್ಚಾಗಿದೆ. ಸದ್ಯ 3,300 ಲಸಿಕೆಗಳು ಮಾತ್ರ ಲಭ್ಯವಿದೆ.

ಚಿಕ್ಕಮಗಳೂರು ಜಿಲ್ಲೆಗೆ 12 ದಿನಗಳ ಹಿಂದೆ 18 ಸಾವಿರ ಲಸಿಕೆಗಳು ಪೂರೈಕೆಯಾಗಿದ್ದು, ಸದ್ಯ ಎರಡು ಸಾವಿರ ಲಸಿಕೆಗಳು ಉಳಿದಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಉಮೇಶ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು