ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಟೂಲ್‌ ಕಿಟ್‌: ಸಚಿವ ಸಂಪುಟ ಸಭೆ ಒಪ್ಪಿಗೆ

Last Updated 4 ಸೆಪ್ಟೆಂಬರ್ 2021, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13,061 ವಿದ್ಯಾರ್ಥಿಗಳಿಗೆ ₹ 17.18 ಕೋಟಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ‘ಟೂಲ್‌ ಕಿಟ್‌’ಗಳನ್ನು ಖರೀದಿಸಿ, ವಿತರಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಶನಿವಾರ ಅಂಗೀಕಾರ ನೀಡಿದೆ.

ಈ ಕುರಿತು ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ‘ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ ಅನುದಾನದಲ್ಲಿ ಈ ವಿದ್ಯಾರ್ಥಿಗಳಿಗೆ ಟೂಲ್‌ ಕಿಟ್‌ ವಿತರಿಸಲಾಗುವುದು’ ಎಂದರು.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮಗಳಲ್ಲಿ ₹ 101.97 ಕೋಟಿ ವೆಚ್ಚದಲ್ಲಿ ಸರ್ಕಾರಿ ತಾಂತ್ರಿಕ ತರಬೇತಿ ಕೇಂದ್ರ ಸ್ಥಾಪಿಸುವ ಪ್ರಸ್ತಾವಕ್ಕೂ ಒಪ್ಪಿಗೆ ದೊರಕಿದೆ. ನಬಾರ್ಡ್‌ನ ಆರ್‌ಐಡಿಎಫ್‌ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

ರಾಜ್ಯ ಬೀಜ ನಿಗಮಕ್ಕೆ ಬೀಜೋತ್ಪಾದನಾ ಕೆಲಸಗಳಿಗೆ ನೀಡಿದ್ದ ನಗದು ಸಾಲ ಸೌಲಭ್ಯದ ಖಾತರಿ ಮೊತ್ತವನ್ನು ₹ 10 ಕೋಟಿಯಿಂದ ₹ 20 ಕೋಟಿಗೆ ಹೆಚ್ಚಿಸಲಾಗಿದೆ. ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜತೆಗೆ ಬೀಜ ನಿಗಮಕ್ಕೂ ರಸಗೊಬ್ಬರದ ದಾಸ್ತಾನಿಗೆ ಅನುಮತಿ ನೀಡಿದ್ದು, ₹ 200 ಕೋಟಿ ದುಡಿಯುವ ಬಂಡವಾಳಕ್ಕೆ ಸರ್ಕಾರ ಖಾತರಿ ಒದಗಿಸಲು ನಿರ್ಧರಿಸಿದೆ ಎಂದರು.

ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಯ ಕಾಮಗಾರಿಯನ್ನು ಗುತ್ತಿಗೆದಾರರಿಂದ ಹಿಂಪಡೆದು ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ವಹಿಸುವ ಪ್ರಸ್ತಾವಕ್ಕೂ ಸಭೆ ಒಪ್ಪಿಗೆ ನೀಡಿದೆ. ಮೊದಲ ಹಂತದಲ್ಲಿ ₹ 5 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ದೊರಕಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಗಣೇಶೋತ್ಸವಕ್ಕೆ ಅನುಮತಿ: ಸಿ.ಎಂಗೆ ಅಧಿಕಾರ
ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೇ ನೀಡುವ ನಿರ್ಣಯವನ್ನು ಶನಿವಾರ ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

‘ಗಣೇಶೋತ್ಸವದ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಕೆಲವು ಜಿಲ್ಲೆಗಳಲ್ಲಿ ಇನ್ನೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದೆ. ಕೋವಿಡ್‌ ನಿಯಂತ್ರಣಕ್ಕೆ ತೊಂದರೆ ಆಗದಂತೆ ನಿರ್ಧಾರ ಕೈಗೊಳ್ಳಬೇಕಿದೆ. ಆದ್ದರಿಂದ ಗಣೇಶೋತ್ಸವಕ್ಕೆ ಅನುಮತಿ ನೀಡುವುದನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಮುಖ್ಯಮಂತ್ರಿಯವರು ರಾಜ್ಯ ಎಲ್ಲ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಕೋವಿಡ್‌ ನಿಯಂತ್ರಣ ಸ್ಥಿತಿ ಕುರಿತು ಸಂಪೂರ್ಣ ಮಾಹಿತಿ ಪಡೆದ ಬಳಿಕ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಗಣೇಶೋತ್ಸವಕ್ಕೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದ ನಿರ್ಧಾರವನ್ನು ಎರಡು ದಿನಗಳಲ್ಲಿ ಪ್ರಕಟಿಸಲಿದ್ದಾರೆ ಎಂದರು.

ಬ್ಯಾಟರಿ, ಯುಪಿಎಸ್‌ ಖರೀದಿ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ₹ 12.65 ಕೋಟಿ ವೆಚ್ಚದಲ್ಲಿ ಬ್ಯಾಟರಿ ಹಾಗೂ ಯುಪಿಎಸ್‌ ಸಾಧನಗಳನ್ನು ಅಳವಡಿಸುವ ಪ್ರಸ್ತಾವಕ್ಕೂ ಸಂಪುಟ ಸಭೆ ಸಮ್ಮತಿಸಿದೆ ಎಂದರು.

ಸಂಪುಟ ಸಭೆಯ ಇತರ ತೀರ್ಮಾನಗಳು

* ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಔಷಧಿ ಖರೀದಿಗೆ ₹ 17.72 ಕೋಟಿ ಮಂಜೂರು

* ಹೂಡಿಕೆ ಸಮಾಲೋಚಕರಾಗಿ ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಒಂದು ವರ್ಷದ ಅವಧಿಗೆ ಮುಂದುವರಿಕೆ.

* ಮೊಳಕಾಲ್ಮೂರು ಮಿನಿ ವಿಧಾನಸೌಧಕ್ಕೆ ₹ 10.97 ಕೋಟಿ ಮತ್ತು ಕುಮಟಾ ಮಿನಿ ವಿಧಾನಸೌಧಕ್ಕೆ ₹ 12.28 ಕೋಟಿ ಮಂಜೂರು

* ಭದ್ರಾ ಮೇಲ್ದಂಡೆ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ನರಸಿಂಹರಾಜಪುರ ತಾಲ್ಲೂಕಿನ 116 ಎಕರೆ ಮತ್ತು ಅಜ್ಜಂಪುರ ತಾಲ್ಲೂಕಿನ 115 ಎಕರೆ ಜಮೀನುಗಳಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ಹೆಚ್ಚಳ.

* ಮೈಸೂರಿನ ವಿದ್ಯಾರಣ್ಯಪುರ ಡಂಪಿಂಗ್‌ ಸ್ಥಳದಲ್ಲಿ ಪಾರಂಪರಿಕ ತ್ಯಾಜ್ಯದ ‘ಬಯೋ ಮೈನಿಂಗ್‌’ಗೆ ₹ 14.38 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT