ಶನಿವಾರ, ಮಾರ್ಚ್ 6, 2021
32 °C

8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸಿದ ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ 8, 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 1,000 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಗುರುವಾರ ಉಚಿತವಾಗಿ ಟ್ಯಾಬ್‌ ವಿತರಿಸಿದರು.

ಮಲ್ಲೇಶ್ವರ ಕ್ಷೇತ್ರದಲ್ಲಿರುವ ಏಳು ಪ್ರೌಢಶಾಲೆಗಳೂ ಸೇರಿ ಒಟ್ಟು 21 ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದುಕೊಂಡ ಅವರು,  ‘ಡಾ.ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್’, ‘ಆರ್‌.ವಿ.ಶಿಕ್ಷಣ ತರಬೇತಿ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಷನ್‌’ ನೆರವಿನೊಂದಿಗೆ ಮಕ್ಕಳಿಗಾಗಿ ಟ್ಯಾಬ್‌ಗಳನ್ನು ನೀಡಿದರು

‘ಡಿಜಿಟಲ್‌ ಅಂತರ ನಿವಾರಣೆ: ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ನಡುವೆ ಡಿಜಿಟಲ್‌ ಅಂತರವನ್ನು ಕಡಿಮೆ ಮಾಡುವುದು, ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಈ ಟ್ಯಾಬ್‌ಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ’ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

 ‘ಕೋವಿಡ್‌ ಕಾರಣದಿಂದ ಎಲ್ಲೆಡೆ ಡಿಜಿಟಲ್‌ ಕಲಿಕೆ ಅನಿವಾರ್ಯವಾಗಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಬೋಧನೆ ಮತ್ತು ಕಲಿಕೆಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಹಿಂದೆ ಬಿದ್ದಿದ್ದಾರೆಂಬ ಮಾತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತವಾಗುವ ಅಪಾಯವೂ ಎದುರಾಗಿತ್ತು. ಡಿಜಿಟಲ್‌ ಮತ್ತು ಸ್ಮಾರ್ಟ್‌ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ನಾವು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಕ್ಷೇತ್ರದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಈ ಟ್ಯಾಬ್‌ಗಳಿಂದ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಯಾಗಲಿದೆ’ ಎಂದರು.

ಈ ಟ್ಯಾಬ್‌ಗಳ ಉಪಯೋಗವೇನು?:

* ಉತ್ತಮ ಗುಣಮಟ್ಟದ ಈ ಟ್ಯಾಬ್‌ಗಳಲ್ಲಿ ರಾಜ್ಯಮಟ್ಟದ ಪಠ್ಯ ಇರಲಿದೆ. ಅದರಲ್ಲಿ ಫೋಟೊಗಳು, ವಿಡಿಯೊಗಳು ಸೇರಿದಂತೆ ಸಮಕಾಲೀನ ಸಂದರ್ಭದಲ್ಲಿ ಕಲಿಯಬೇಕಾದ ಎಲ್ಲ ರೀತಿಯ ಅಂಶಗಳನ್ನೂ ಮೊದಲೇ ಲೋಡ್‌ ಮಾಡಲಾಗಿರುತ್ತದೆ.

* ಶಿಕ್ಷಣ ಪೌಂಡೇಶನ್ ಅವರ ಸಹಯೋಗದೊಂದಿಗೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನು ಟ್ಯಾಬ್‌ಗಳಲ್ಲಿ ತುಂಬಲಾಗಿದೆ. ಅದರಲ್ಲಿ ವಿಡಿಯೊಗಳು ಮತ್ತು ಚಟುವಟಿಕೆಯೂ ಸೇರಿವೆ.

* ಆಫ್‌ಲೈನ್‌ನಲ್ಲಿ ಇದ್ದಾಗಲೂ ವಿದ್ಯಾರ್ಥಿಗಳು ಟ್ಯಾಬ್‌ಗಳ ಮೂಲಕ ಕಲಿಕೆ ಮುಂದುವರಿಸಬಹುದು. ತಂತ್ರಜ್ಞಾನದ ಮೂಲಕ ಕಲಿಕೆ ಮತ್ತು ಗ್ರಹಿಕೆ ಪರಿಣಾಮಕಾರಿಯಾಗಿರುತ್ತದೆ. ಈ ಮೂಲಕ ಮಕ್ಕಳ ಕಲಿಕೆಯ ಆಸಕ್ತಿ ಇಮ್ಮಡಿಗೊಳ್ಳುತ್ತದೆ. ಸಂವಹನ, ಸಹಯೋಗ, ಸೃಜನಾತ್ಮಕತೆ ಹಾಗೂ ತಾರ್ಕಿಕ ಚಿಂತನೆಗಳತ್ತ ಮಕ್ಕಳು ಹೆಚ್ಚು ಪರಿಣಾಮಕಾರಿಯಾಗಿ ತೆರೆದುಕೊಳ್ಳುತ್ತಾರೆ.

* ಮಕ್ಕಳು ಮನೆಯಲ್ಲಿದ್ದಾಗಲೂ ಕಲಿಯಬಹುದು. ಜತೆಗೆ ಆಯಾ ಮಕ್ಕಳನ್ನು ಶಿಕ್ಷಕರು ಪ್ರತ್ಯೇಕವಾಗಿ ಗಮನವಿಟ್ಟು ನೋಡಬಹುದು. ಅವರ ಕಲಿಕೆಯ ಗುಣಮಟ್ಟವನ್ನು ಪರಿಶೀಲನೆ ಮಾಡಬಹುದು. ನಿತ್ಯವೂ ತಂತ್ರಜ್ಞಾನದ ಮೂಲಕ ಕಲಿಕೆ ಸಾಗುವುದರಿಂದ ಮಕ್ಕಳಲ್ಲಿ ಹೊಸ ಕಲಿಕೆಯ ಅನ್ವೇಷಣೆಯತ್ತ ಆಸಕ್ತಿ ಉಂಟಾಗುತ್ತದೆ.

ಶಿಕ್ಷಕರಿಗೂ ತರಬೇತಿ: ‘ಡಿಜಿಟಲ್‌ ಮತ್ತು ಸ್ಮಾರ್ಟ್‌ ಶಿಕ್ಷಣಕ್ಕೆ ಶಿಕ್ಷಕರೂ ಹೊಂದಿಕೊಳ್ಳುವಂತೆ ಮಾಡಲು ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಂದ ಹೋಮ್‌ ವರ್ಕ್‌ ಮಾಡಿಸುವುದು, ಟೆಸ್ಟ್‌, ಪರೀಕ್ಷೆ ನಡೆಸುವುದು, ಮಕ್ಕಳ ಓದು ಸೇರಿ ಎಲ್ಲ ಅಂಶಗಳನ್ನು ಸೂಕ್ತವಾದ ರೀತಿಯಲ್ಲಿ ಟ್ರ್ಯಾಕ್‌ ಮಾಡಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ’ ಎಂದೂ ಡಾ.ಅಶ್ವತ್ಥನಾರಾಯಣ ಹೇಳಿದರು.

ಆರ್‌ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಾಂಡುರಂಗ ಶೆಟ್ಟಿ ಮಾತನಾಡಿ, ‘ಈ ಟ್ಯಾಬ್‌ಗಳ ಮೂಲಕ ಮಕ್ಕಳ ಕಲಿಕೆ ಇನ್ನಷ್ಟು ಉತ್ತಮವಾಗಲಿ’ ಎಂದು ಹಾರೈಸಿದರು.

ರಾಜ್ಯ ಸರ್ಕಾರದ ಸ್ಟಾರ್ಟ್‌ಅಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಹಾಗೂ ಶಿಕ್ಷಣ ಫೌಂಡೇಶನ್‌ ಮುಖ್ಯಸ್ಥ ಪ್ರಶಾಂತ್‌ ಪ್ರಕಾಶ್‌, ಶಿಕ್ಷಣ ಫೌಂಡೇಶನ್‌ ಸಿಇಒ ಪ್ರಸನ್ನ, ಬೆಂಗಳೂರು ಉತ್ತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾರಾಯಣ್‌, ಬಿಇಒ ಉಮಾದೇವಿ, ಬಿಬಿಎಂಪಿ ಮಾಜಿ ಸದಸ್ಯ ಜಯಪಾಲ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು