ಶನಿವಾರ, ಜನವರಿ 23, 2021
26 °C
ಪ್ರಥಮ–ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿ | ವರದಿ ನೀಡಲು ಕುಲಪತಿಗಳಿಗೆ ಸೂಚನೆ

‘ಸಂಕ್ರಾಂತಿ ಬಳಿಕ ಪ್ರಥಮ–ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಗತಿ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಪದವಿ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸಂಕ್ರಾಂತಿ ಬಳಿಕ ಆಫ್‌ಲೈನ್‌ ತರಗತಿಗಳು ಪ್ರಾರಂಭವಾಗಲಿವೆ.

ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಶುಕ್ರವಾರ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಈ ವಿಷಯ ಪ್ರಕಟಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಲಪತಿಗಳು ಆಫ್‌ಲೈನ್‌ ತರಗತಿಗಳನ್ನು ಆರಂಭಿಸುವಂತೆ ಸಲಹೆ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸಮಾಲೋಚಿಸಿ ವರದಿ ನೀಡುವಂತೆ ಸಚಿವರು ಕುಲಪತಿಗಳಿಗೆ ಸೂಚನೆ ನೀಡಿದರು.

‘ಈಗಾಗಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ತರಗತಿಗಳ ಅಂತಿಮ ವರ್ಷದ ಮತ್ತು ಅಂತಿಮ ಸೆಮಿಸ್ಟರ್‌ನ ಆಫ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಆ ಯಶಸ್ಸಿನ ಆಧಾರದಲ್ಲಿ ಉಳಿದ ತರಗತಿಗಳನ್ನು ಶುರು ಮಾಡಲಾಗುವುದು. ಯುಜಿಸಿ ಮತ್ತು ಕೋವಿಡ್‌ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

‘ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಉನ್ನತ ಶಿಕ್ಷಣದ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲಾಗುವುದು’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಯುಜಿಸಿ ನಿಯಮದಂತೆ ಮಾರ್ಚ್‌ನಲ್ಲಿ ಪರೀಕ್ಷೆ ಮುಗಿಯಬೇಕಾಗುತ್ತದೆ. ಆದರೆ, ಹಲವು ವಿಶ್ವವಿದ್ಯಾಲಯಗಳ ಕಾಲೇಜುಗಳಲ್ಲಿ ಪಠ್ಯಕ್ರಮಗಳು ಪೂರ್ಣಗೊಂಡಿರದ ಕಾರಣ, ಏಪ್ರಿಲ್ ಅಥವಾ ಮೇನಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ಶೀಘ್ರವೇ  ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಅತಿಥಿ ಉಪನ್ಯಾಸಕರ ನಿಯೋಜನೆ:

‘ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 15 ಸಾವಿರ ಅತಿಥಿ  ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದರು. ಆಫ್‌ಲೈನ್‌ ತರಗತಿಗಳು ಪ್ರಾರಂಭವಾಗುವ ವೇಳೆಗೆ, ಈ ಉಪನ್ಯಾಸಕರ ಸೇವೆಯನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಸ್‌ಪಾಸ್ ಗೊಂದಲ ಇತ್ಯರ್ಥ:

‘ವಿದ್ಯಾರ್ಥಿ ಬಸ್‌ ಪಾಸ್‌ ಕುರಿತು ಕೆಲವು ಗೊಂದಲಗಳಿವೆ. ಈ ಕುರಿತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಪದವಿಯ ಎಲ್ಲ ತರಗತಿಗಳು ಆರಂಭವಾದ ಮೇಲೆ ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯೂ ಸಕಾರಾತ್ಮಕವಾಗಿ ಸ್ಪಂದಿಸಿದೆ’ ಎಂದು ಅವರು ತಿಳಿಸಿದರು.

ಪದವಿಯ ಪ್ರಥಮ, ದ್ವಿತೀಯ ತರಗತಿಗಳು ಆರಂಭವಾಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ‘ಪಾಠ ಕೇಳದೆ ಪರೀಕ್ಷೆ ಬರೆಯುವ ಸವಾಲು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಗುರುವಾರ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

‘ಪರೀಕ್ಷೆಗೆ ಅವಸರ ಬೇಡ’

‘ಖಾಸಗಿ ಕಾಲೇಜುಗಳಲ್ಲಿ ಬಹುತೇಕ ಪಠ್ಯಕ್ರಮ ಮುಗಿದಿದೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಆಗಿಲ್ಲ. ಫೆಬ್ರುವರಿ–ಮಾರ್ಚ್‌ನಲ್ಲಿಯೇ ಪರೀಕ್ಷೆ ನಡೆಸಬೇಕು ಎಂದು ಕೆಲವು ಕುಲಪತಿಗಳು ಒತ್ತಾಯಿಸಿರುವುದು ಗೊತ್ತಾಗಿದೆ. ಒಂದು ಸೆಮಿಸ್ಟರ್‌ ಅವಧಿ 90 ದಿನ ಇರುತ್ತದೆ. ಈಗ ಕನಿಷ್ಠ 45 ದಿನಗಳಾದರೂ ಪಾಠ ಮಾಡಲು ಬೇಕು. ಒಂದೂವರೆ ತಿಂಗಳ ಕೆಲಸದ ದಿನಗಳ ನಂತರ ಪರೀಕ್ಷೆ ನಡೆಸುವುದು ಸೂಕ್ತ’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ. ಮಂಜುನಾಥ್ ಹೇಳಿದರು.

ಪದವಿಯ ಎಲ್ಲ ತರಗತಿಗಳನ್ನು ಆರಂಭಿಸುವ ಸರ್ಕಾರದ ನಿರ್ಧಾರವನ್ನು ಉಪನ್ಯಾಸಕರ ಸಮುದಾಯ ಸ್ವಾಗತಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು