ಶುಕ್ರವಾರ, ಜುಲೈ 30, 2021
24 °C
ಡೆಲ್ಟಾ ಪ್ಲಸ್‌ ವೈರಾಣು ಸೋಂಕಿತ ವ್ಯಕ್ತಿ ಗುಣಮುಖ

ವೈರಾಣು ಅನುಕ್ರಮಣಿಕೆ ಪರೀಕ್ಷೆಗೆ ಬಿಬಿಎಂಪಿ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೊರೊನಾ ರೂಪಾಂತರಿತ ಡೆಲ್ಟಾ ಪ್ಲಸ್‌ ವೈರಾಣು ಸೋಂಕು ದೃಢಪಟ್ಟಿದ್ದ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದಾರೆ. ಈ ನಡುವೆಯೇ, ಈ ಪ್ರಕರಣಗಳ ಪತ್ತೆಗೆ ವೈರಾಣು ಅನುಕ್ರಮಣಿಕೆ ಪರೀಕ್ಷೆಗೆ (ಜೀನೋಮ್‌ ಸೀಕ್ವೆನ್ಸಿಂಗ್‌) ಆದ್ಯತೆ ನೀಡಲು ಬಿಬಿಎಂಪಿ ಮುಂದಾಗಿದೆ.

ನಗರದ  ನಂದಿನಿ ಬಡಾವಣೆಯಲ್ಲಿರುವ 87 ವರ್ಷದ ವೃದ್ಧರೊಬ್ಬರಲ್ಲಿ ಈ ರೂಪಾಂತರಿಕ ಸೋಂಕು ಪತ್ತೆಯಾಗಿತ್ತು. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮನೆಯಲ್ಲಿಯೇ ಆರೈಕೆಗೆ ಒಳಗಾಗಿದ್ದಾರೆ. ಇವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 10 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಗುರುವಾರ ತಿಳಿಸಿದರು. 

‘ನಗರದಲ್ಲಿ ವೈರಾಣು ಅನುಕ್ರಮಣಿಕೆ ಪರೀಕ್ಷೆಗೆ ಒತ್ತು ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯಲ್ಲಿರುವ ರೂಪಾಂತರಿ ವೈರಾಣುವಿನ ವಂಶವಾಹಿ ಪತ್ತೆ ಮಾಡಲಾಗುತ್ತಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ಸೋಂಕಿನ ಗುಣಲಕ್ಷಣಗಳು, ದುಷ್ಪರಿಣಾಮಗಳ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಅವರು ನೀಡುವ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಜನರ ಆರೋಗ್ಯ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಡೆಲ್ಟಾ ಪ್ಲಸ್‌ ವೈರಾಣು ಸೋಂಕಿನ ಅಪಾಯ, ಗುಣಲಕ್ಷಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ. ಬಿಬಿಎಂಪಿಯಿಂದ ನಿತ್ಯ ಎಂಟು ಮಂದಿ ಸೋಂಕಿತರ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಪ್ರಯೋಗಾಲಯದವರೇ ಎಂಟು ಸೋಂಕಿತರ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು