ಗುರುವಾರ , ಆಗಸ್ಟ್ 18, 2022
24 °C

ರಾಜ್ಯದಲ್ಲಿ ಡೆಂಗಿ ಪ್ರಕರಣ ಮತ್ತಷ್ಟು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಈ ತಿಂಗಳು ಅದಾಗಲೇ 544 ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈವರೆಗೆ ಡೆಂಗಿ ಜ್ವರಕ್ಕೆ ಒಳಪಟ್ಟವರ ಒಟ್ಟು ಸಂಖ್ಯೆ 2,258ಕ್ಕೆ ಏರಿಕೆಯಾಗಿದೆ.

ಅಕಾಲಿಕ ಮಳೆಯಿಂದಾಗಿ ರಾಜ್ಯದಲ್ಲಿ ಈ ಜ್ವರ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ವರ್ಷ 41,618 ಡೆಂಗಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 18,348 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 1,625 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದು, 388 ಮಂದಿಯಲ್ಲಿ ಈ ಜ್ವರ ದೃಢಪಟ್ಟಿದೆ. ಈ ವರ್ಷ ಡೆಂಗಿ ಜ್ವರಕ್ಕೆ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. 2021ರಲ್ಲಿ 7,189 ಮಂದಿ ಡೆಂಗಿ ಪೀಡಿತರಾಗಿದ್ದರು. ಅವರಲ್ಲಿ ಐವರು ಮೃತಪಟ್ಟಿದ್ದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣಗಳ ಸಂಖ್ಯೆ ಐದು ಜಿಲ್ಲೆಗಳಲ್ಲಿ ಮೂರಂಕಿ, 23 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ. ಉಡುಪಿಯಲ್ಲಿ 256, ಮೈಸೂರಿನಲ್ಲಿ 203, ದಕ್ಷಿಣ ಕನ್ನಡದಲ್ಲಿ 128, ಚಿತ್ರದುರ್ಗದಲ್ಲಿ 116, ವಿಜಯಪುರದಲ್ಲಿ 96, ಕೊಪ್ಪಳದಲ್ಲಿ 95, ಶಿವಮೊಗ್ಗದಲ್ಲಿ 115, ಬಳ್ಳಾರಿಯಲ್ಲಿ 89,  ದಾವಣಗೆರೆಯಲ್ಲಿ 79, ಕಲಬುರ್ಗಿಯಲ್ಲಿ 68 ಹಾಗೂ ಹಾಸನದಲ್ಲಿ 59 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 50ಕ್ಕಿಂತ ಕಡಿಮೆ ಇವೆ.

27 ಜಿಲ್ಲೆಗಳಲ್ಲಿ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. 13 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 8 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 531 ಮಂದಿ ಈ ಜ್ವರಕ್ಕೆ ಒಳಗಾಗಿರುವುದು ದೃಢಪಟ್ಟಿದೆ.

ವಿಜಯಪುರದಲ್ಲಿ 114, ಕೋಲಾರದಲ್ಲಿ 89, ಬೆಂಗಳೂರು ಗ್ರಾಮಾಂತರದಲ್ಲಿ 49, ತುಮಕೂರಿನಲ್ಲಿ 38, ಚಿತ್ರದುರ್ಗದಲ್ಲಿ 30, ದಾವಣಗೆರೆಯಲ್ಲಿ 20, ಹಾಸನದಲ್ಲಿ 19, ಕಲಬುರ್ಗಿಯಲ್ಲಿ 16, ರಾಮನಗರದಲ್ಲಿ 14, ಶಿವಮೊಗ್ಗದಲ್ಲಿ 12, ಬಾಗಲಕೋಟೆ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ 11 ಹಾಗೂ ಮಂಡ್ಯದಲ್ಲಿ 10 ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು