ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್‌ ಪ್ರಕರಣ: ಕುತೂಹಲ ಹೆಚ್ಚಿಸಿದ ‘ಪ್ರಭಾವಿ’ ಕೈವಾಡ!

ಚಿತ್ರನಟಿ ರಾಗಿಣಿ ದ್ವಿವೇದಿ ವಿರುದ್ಧದ ಡ್ರಗ್‌ ಪ್ರಕರಣ
Last Updated 5 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವರು ಬಂಧಿತರಾಗಿರುವ ಡ್ರಗ್‌ ಪ್ರಕರಣದಲ್ಲಿ ‘ಪ್ರಭಾವಿ’ ವ್ಯಕ್ತಿಗಳ ಕೈವಾಡ ಇದೆ ಎಂಬ ಆರೋಪ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕಾರಿ ಚರ್ಚೆಗೆ ಕಾರಣವಾಗಿದೆ.

ಆಡಳಿತಾರೂಢ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಕೆಲವು ಸಚಿವರು ‘ಪ್ರಭಾವಿ’ ವ್ಯಕ್ತಿಯನ್ನೇ ಗುರಿಯಾಗಿಸಿಕೊಂಡು ಶನಿವಾರವೂ ಹೇಳಿಕೆ ನೀಡಿದ್ದಾರೆ.

‘ಡ್ರಗ್‌ ಪ್ರಕರಣದಲ್ಲಿ ನಟಿ ರಾಗಿಣಿ ಅವರ ವಿಚಾರಣೆ ಮತ್ತು ಬಂಧನ ಮಾಡದಂತೆ ಪ್ರಭಾವಿ ವ್ಯಕ್ತಿಗಳು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ’ ಎಂದು ಸಚಿವ ಸಿ.ಟಿ. ರವಿ ಅವರು ಶುಕ್ರವಾರ ಹೇಳಿಕೆ ನೀಡಿದ್ದರು.

ಸಚಿವ ರವಿ ಅವರ ಹೇಳಿಕೆ ಕುರಿತು ಶನಿವಾರ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಹೆಸರು ಕೇಳಿಬರುತ್ತಿರುವುದರಿಂದ ರವಿ ಅವರು ಹಾಗೆ ಹೇಳಿರಬಹುದು. ಆದರೆ, ಯಾರೂ ಪೊಲೀಸರ ಮೇಲೆ ಒತ್ತಡ ಹೇರಿಲ್ಲ’ ಎಂದರು.

‘ನಾವು ಯಾವುದೇ ರೀತಿಯ ಒತ್ತಡಕ್ಕೂ ಮಣಿಯುವುದಿಲ್ಲ. ಡ್ರಗ್‌ ಪೂರೈಕೆ ಜಾಲದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ತಪ್ಪು ಮಾಡದವರು ಹೆದರುವ ಅಗತ್ಯವೇ ಇಲ್ಲ’ ಎಂದು ಹೇಳಿದರು.

ನಳಿನ್‌ ಬೆಂಬಲ: ಗೃಹ ಸಚಿವರ ಹೇಳಿಕೆಗೆ ದನಿಗೂಡಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ‘ಪಕ್ಷ ಹಮ್ಮಿಕೊಂಡಿರುವ ಡ್ರಗ್ಸ್‌ ಮುಕ್ತ ಕರ್ನಾಟಕ ಅಭಿಯಾನದಂತೆ ಡ್ರಗ್ಸ್‌ ಜಾಲವನ್ನು ಬುಡಸಮೇತ ಕಿತ್ತು ಹಾಕುವವರೆಗೂ ವಿರಮಿಸುವ ಪ್ರಶ್ನೆ ಇಲ್ಲ. ಈ ಜಾಲವನ್ನು ಕೊನೆಗಾಣಿಸಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು ಎಂಬ ಗೃಹ ಸಚಿವರ ಹೇಳಿಕೆಯನ್ನು ನಮ್ಮ ಕಾರ್ಯಕರ್ತರು, ಪ್ರಜ್ಞಾವಂತ ನಾಗರಿಕರು ಸ್ವಾಗತಿಸಿದ್ದಾರೆ. ಎಷ್ಟೇ ಪ್ರಭಾವಿ ವ್ಯಕ್ತಿಯಾದರೂ ಈ ನೆಲದ ಕಾನೂನನ್ನು ಮುರಿದರೆ ಕ್ಷಮಿಸಲು ಸಾಧ್ಯವೇ ಇಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರತ್ಯೇಕ ಪತ್ರಿಕಾ ಹೇಳಿಕೆಯನ್ನೂ ನೀಡಿರುವ ಅವರು, ‘ಈ ಪಿಡುಗಿನ ವಿರುದ್ಧ ರಾಜಿಯಾಗದ ದೃಢ ನಿಲುವನ್ನು ತಳೆದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ, ಅವರ ಸಾಮಾಜಿಕ, ರಾಜಕೀಯ ಸ್ಥಾನಮಾನಗಳ ಹೊರತಾಗಿಯೂ ಅವರನ್ನು ಕಾನೂನಿನ ವ್ಯಾಪ್ತಿಗೆ ತರಬೇಕು’ ಎಂದಿದ್ದಾರೆ.

ನಂಟಿನ ಕುರಿತು ಚರ್ಚೆ: ಡ್ರಗ್‌ ಪ್ರಕರಣದಲ್ಲಿ ‘ಪ್ರಭಾವಿ’ ವ್ಯಕ್ತಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಹೇಳಿಕೆಗಳ ನಡುವೆಯೇ ಪ್ರಕರಣದ ಎರಡನೇ ಆರೋಪಿಯಾಗಿರುವ ರಾಗಿಣಿ ಅವರ ರಾಜಕೀಯ ನಂಟಿನ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆಯಾಗುತ್ತಿದೆ. ಬಿಜೆಪಿಯ ಪ್ರಚಾರ ಸಭೆಗಳಲ್ಲಿ ನಟಿ ಭಾಗಿಯಾಗಿದ್ದ ಚಿತ್ರ, ವಿಡಿಯೊ ತುಣುಕುಗಳನ್ನು ಹಂಚಿಕೊಂಡಿರುವ ಹಲವರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ‘ಡ್ರಗ್ಸ್‌ ಸೇವಿಸುವಂತೆ ರಾಗಿಣಿ ಅವರಿಗೆ ಬಿಜೆಪಿ ಹೇಳಿರಲಿಲ್ಲ. ಅವರ ಬಂಧನದಿಂದ ಬಿಜೆಪಿಗೆ ಮುಜುಗರವಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT