ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊಗೆ ಉತ್ತರ ಭಾರತದ ಹಾದಿ ಬಂದ್: ಮಳೆಯಿಂದ ಗುಣಮಟ್ಟ, ಬೆಲೆ ಕುಸಿತ

ಮಾರುಕಟ್ಟೆಯಲ್ಲಿ ಬೇಡಿಕೆ ಕುಂಠಿತ * ಸಾಗಾಣಿಕೆ ಇಳಿಕೆ
Last Updated 2 ಸೆಪ್ಟೆಂಬರ್ 2021, 21:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಉತ್ತಮ ಮಳೆಯು ಟೊಮೆಟೊ ಬೆಳೆಗಾರರನ್ನು ಉಸಿರುಗಟ್ಟಿಸಿದೆ. ಮಳೆಯಿಂದ ಗುಣಮಟ್ಟ ಮತ್ತು ಬೆಲೆ ಕಳೆದುಕೊಂಡಿರುವ ಟೊಮೆಟೊ ಹೊರರಾಜ್ಯಗಳಿಗೆ ಪೂರೈಕೆ ಆಗುತ್ತಿಲ್ಲ. ಜಿಲ್ಲೆಯ ಟೊಮೆಟೊಗೆ ಉತ್ತರ ಭಾರತದ ರಾಜ್ಯಗಳೇ ಪ್ರಮುಖ ಮಾರುಕಟ್ಟೆಗಳಾಗಿವೆ.

ಚಿಂತಾಮಣಿ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಟೊಮೆಟೊವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಜೂನ್‌ನಿಂದ ಆರಂಭವಾಗುವ ಟೊಮೆಟೊ ಸುಗ್ಗಿ ಸೆಪ್ಟೆಂಬರ್‌ನಲ್ಲಿ ಕೊನೆಯಲ್ಲಿ ಅಂತ್ಯವಾಗುತ್ತದೆ. ಈ ಅವಧಿಯಲ್ಲಿ ಒಡಿಶಾ, ಗುಜರಾತ್, ನವದೆಹಲಿ, ಹರಿಯಾಣ, ಛತ್ತೀಸಗಡ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ಜಿಲ್ಲೆಯಿಂದ ನಿತ್ಯ 250ಕ್ಕೂ ಹೆಚ್ಚು ಲಾರಿಗಳಲ್ಲಿ ಟೊಮೆಟೊ ಸಾಗಾಣಿಕೆ ಆಗುತ್ತದೆ.

ಕೋಲಾರ ಹೈಬ್ರೀಡ್‌ ಟೊಮೆಟೊಗೆ ದೊಡ್ಡ ಮಾರುಕಟ್ಟೆಯಾದರೆ, ಚಿಂತಾಮಣಿ ನಾಟಿ ತಳಿಯ ಟೊಮೆಟೊಗೆ ಪ್ರಸಿದ್ಧಿ. ಉತ್ತರ ಭಾರತದ ರಾಜ್ಯಗಳಲ್ಲಿ ನಾಟಿ ಟೊಮೆಟೊಗೆ ಹೆಚ್ಚು ಬೇಡಿಕೆ ಇದೆ.

ಸುಗ್ಗಿಯಲ್ಲಿ ಚಿಂತಾಮಣಿ ಎಪಿಎಂಸಿಯಿಂದ ನಿತ್ಯ ಸರಾಸರಿ 160, ಬಾಗೇಪಲ್ಲಿಯಿಂದ 60 ಮತ್ತು ಚಿಕ್ಕಬಳ್ಳಾಪುರದಿಂದ 40 ಲಾರಿಗಳಲ್ಲಿ ಟೊಮೆಟೊ ಉತ್ತರಭಾರತಕ್ಕೆ ಸಾಗಾಣಿಕೆ ಆಗುತ್ತದೆ. ಜೂನ್ ಮತ್ತು ಜುಲೈನಲ್ಲಿ ಇದೇ ಸರಾಸರಿಯಲ್ಲಿ ಸಾಗಾಣಿಕೆ ಇತ್ತು. ಆದರೆ ಆಗಸ್ಟ್‌ನಲ್ಲಿ ಹಂತ ಹಂತವಾಗಿ ಸಾಗಾಣಿಕೆ ಕುಸಿದಿದೆ. ಈಗ 40ರಿಂದ 50 ಲಾರಿಗಳಲ್ಲಿ ಮಾತ್ರ ಟೊಮೆಟೊ ಉತ್ತರಭಾರತಕ್ಕೆ ಸಾಗಾಣಿಕೆ ಆಗುತ್ತಿದೆ.

ಮಳೆಯ ಕಾರಣಕ್ಕೆ ಟೊಮೆಟೊ ಬೆಳೆ ನಿರ್ವಹಣೆ ಸಹ ಕಷ್ಟವಾಗಿದೆ. ಉತ್ತರಭಾರತದ ರಾಜ್ಯಗಳಲ್ಲಿ ಮಾರುಕಟ್ಟೆ ಇಲ್ಲದ ಕಾರಣ ಜಿಲ್ಲೆಯಲ್ಲಿ ‌ಆವಕ ಹೆಚ್ಚಿದೆ. ಈ ಎಲ್ಲ ಕಾರಣದಿಂದ ಬೆಲೆ ಕುಸಿದಿದೆ. 14 ಕೆ.ಜಿ (ಒಂದು ಕ್ರೇಟ್) ನಾಟಿ ಟೊಮೆಟೊ ಬೆಲೆ ₹ 40ರಿಂದ 120 ಇದೆ. ಹೈಬ್ರೀಡ್ ಟೊಮೆಟೊಗೂ ಇದೇ ಬೆಲೆ ಇದೆ.

‘ಜೂನ್, ಜುಲೈನಲ್ಲಿ ನಿತ್ಯ 150ಕ್ಕೂ ಹೆಚ್ಚು ಲೋಡ್ ಟೊಮೆಟೊವನ್ನು ಉತ್ತರಭಾರತಕ್ಕೆ ಕಳುಹಿಸಲಾಗುತ್ತಿತ್ತು. ಸದ್ಯ ತಮಿಳುನಾಡು ಮತ್ತು ಛತ್ತೀಸಗಡಕ್ಕೆ 40 ಲಾರಿಗಳಲ್ಲಿ ಸಾಗಾಣಿಕೆ ಆಗುತ್ತಿದೆ. ಕಳೆದ ವರ್ಷ ಸಮಸ್ಯೆ ಇರಲಿಲ್ಲ. ಈ ಬಾರಿ ಮಳೆ ಕಾರಣದಿಂದ ಈ ಸ್ಥಿತಿ ಎದುರಾಗಿದೆ’ ಎಂದು ಚಿಂತಾಮಣಿ ಎಪಿಎಂಸಿ ಕಾರ್ಯದರ್ಶಿ ಉಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತಮ ಇಳುವರಿ ಬರುತ್ತಿದೆ. ಆದರೆ ಮಳೆಯ ಕಾರಣ ನಿರ್ವಹಣೆ ಕಷ್ಟವಾಗಿದೆ. ಮಳೆಯಲ್ಲಿ ನೆನೆದ ಟೊಮೆಟೊವನ್ನು ವ್ಯಾಪಾರಿಗಳು ಖರೀದಿಸುತ್ತಿಲ್ಲ. ಬೆಲೆಯೂ ಕುಸಿದಿದೆ’ ಎಂದು ರೈತ ಪೆರೇಸಂದ್ರದ ಶಾಮಣ್ಣ ಬೇಸರ ವ್ಯಕ್ತಪಡಿಸಿದರು.

‘ಮಳೆಯಲ್ಲಿ ನೆನೆದ ಟೊಮೆಟೊವನ್ನು ಲಾರಿಯಲ್ಲಿ ಎರಡು ಮೂರು ದಿನಗಳ ಕಾಲ ಹೊರರಾಜ್ಯಗಳಿಗೆ ಕಳುಹಿಸಲು ಸಾಧ್ಯವಿಲ್ಲ. ಒಂದು ವೇಳೆ ಕಳುಹಿಸಿದರೆ ಅಲ್ಲಿಗೆ ತಲುಪುವ ವೇಳೆಗೆ ಹಣ್ಣು ಡ್ಯಾಮೇಜ್ ಆಗಿರುತ್ತದೆ. ಮತ್ತೆ ವಾಪಸ್ ಕಳುಹಿಸುವರು’ ಎಂದು ಚಿಕ್ಕಬಳ್ಳಾಪುರ ಎಪಿಎಂಸಿ ಟೊಮೆಟೊ ವ್ಯಾಪಾರಿ ಸುರೇಶ್ ತಿಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT