ಗುರುವಾರ , ಅಕ್ಟೋಬರ್ 21, 2021
22 °C
*ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ *ಹಾವೇರಿಯಲ್ಲಿ ಆತ್ಮಹತ್ಯೆಯ ಯತ್ನ

ರಾಜ್ಯದಾದ್ಯಂತ ಅನ್ನದಾತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸೋಮವಾರ ರಾಜ್ಯದೆಲ್ಲೆಡೆ ಜನಾಕ್ರೋಶ ವ್ಯಕ್ತವಾ ಯಿತು. ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದ್ದ ಭಾರತ ಬಂದ್‌ ಬೆಂಬಲಿಸಿ ಎಲ್ಲೆಡೆ ರಸ್ತೆಗಿಳಿದ ಅನ್ನದಾತರು, ಕೇಂದ್ರದ ವಿರುದ್ಧ ತಮ್ಮ ಸಿಟ್ಟು ಪ್ರದರ್ಶಿಸಿದರು.

ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಎಡ ಪಕ್ಷಗಳು, ಕಾಂಗ್ರೆಸ್‌, ಜೆಡಿಎಸ್‌, ಎಸ್‌ಡಿಪಿಐ ಕಾರ್ಯಕರ್ತರು ಬಂದ್‌ ಕರೆಯನ್ನು ಬೆಂಬಲಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದರು.

ರಾಜ್ಯದ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಬೃಹತ್‌ ಪ್ರತಿಭಟನೆಗಳು ನಡೆದವು. ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಬಂದ್‌ ಬೆಂಬಲಿಸಿ ಪ್ರತಿಭಟನೆಗಳು ನಡೆದಿದ್ದು, ಕೆಲಕಾಲ ಸಂಚಾರ ದಟ್ಟಣೆಯೂ
ಸೃಷ್ಟಿಯಾಗಿತ್ತು.

ಹೋಬಳಿ ಕೇಂದ್ರಗಳು, ನಗರ, ಪಟ್ಟಣಗಳು, ಗ್ರಾಮಗಳಲ್ಲೂ ವ್ಯಾಪಕ ಪ್ರತಿಭಟನೆಗಳನ್ನು ನಡೆಸಲಾಯಿತು. ಹಲವೆಡೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ ಹೋರಾಟ ನಡೆಸಲಾಯಿತು.

ಶೃಂಗೇರಿ, ಗುಂಡ್ಲುಪೇಟೆ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ರೈತ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಹಲವೆಡೆ ಪ್ರತಿಭಟನೆಗಳು ನಡೆದಿವೆ.

ಚಿಕ್ಕಮಗಳೂರು, ಮೈಸೂರು, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಬಸ್‌ ನಿಲ್ದಾಣಗಳ ಎದುರು ಪ್ರತಿಭಟನೆ ನಡೆಸಿದ ರೈತರು, ಬೆಳಿಗ್ಗೆ ಕೆಲಕಾಲ ಬಸ್‌ಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಕಲಬುರ್ಗಿ ನಗರದಲ್ಲಿ ಐದು ಗಂಟೆಗಳ ಕಾಲ ಬಸ್‌ ಸಂಚಾರ ಸ್ಥಗಿತವಾಗಿತ್ತು. ಮೈಸೂರಿನಲ್ಲೂ ಒಂದು ಗಂಟೆಗೂ ಹೆಚ್ಚು ಸಮಯ ಬಸ್‌ ನಿಲ್ದಾಣ ಬಂದ್‌ ಆಗಿತ್ತು.

ಮಂಡ್ಯ, ರಾಮನಗರ, ಬಾಗಲಕೋಟೆ, ಹಾವೇರಿ, ಶಿಗ್ಗಾವಿ, ಬೆಳಗಾವಿ, ಚೆನ್ನಮ್ಮನ ಕಿತ್ತೂರು, ವಿಜಯಪುರ, ಹೊನ್ನಾವರ ಮತ್ತಿತರ ಕಡೆಗಳಲ್ಲಿ ಹೆದ್ದಾರಿ ಮೇಲೆ ಕುಳಿತು ರೈತರು ಪ್ರತಿಭಟನೆ ನಡೆಸಿದರು. ಇದರಿಂದ ಹಲವು ಕಡೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.

ಆತ್ಮಹತ್ಯೆಗೆ ಯತ್ನ: ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಹೊಸಮನಿ ಸಿದ್ದಪ್ಪ ಪ್ರತಿಮೆ ಎದುರು ಹಗ್ಗ ಹಿಡಿದು ನೇಣು ಹಾಕಿಕೊಳ್ಳಲು ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.

ಬಳ್ಳಾರಿಯಲ್ಲಿ ಕೃಷಿ ಸಂಬಂಧಿ ಕಾಯ್ದೆಗಳ ಪ್ರತಿಗಳಿಗೆ ಬೆಂಕಿ ಹಚ್ಚಿದ ರೈತರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಹೊಸಪೇಟೆ ನಗರದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲು ಯತ್ನಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು. ಕೊಡಗು ಜಿಲ್ಲೆಯಲ್ಲೂ ಪ್ರತಿಭಟನಾಕಾರರು ಮತ್ತು ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಈರುಳ್ಳಿ ಹಾರ: ಚಿತ್ರದುರ್ಗದಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ಪ್ರತಿಭಟನೆ ನಡೆಸಿದರು. ಹೊಸದುರ್ಗದಲ್ಲಿ ಈರುಳ್ಳಿಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕಿದರು.

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ರೈತರ ಸಂಘ ಮತ್ತು ಎಡ ಪಕ್ಷಗಳ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದರು. ಯಾದಗಿರಿಯಲ್ಲಿ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ಸಾವಿರಾರು ರೈತರ ಬಂಧನ, ಬಿಡುಗಡೆ

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನಾನಿರತ ರೈತರು, ರೈತ ಸಂಘಟನೆಗಳ ಮುಖಂಡರನ್ನು ಪೊಲೀಸರು ಬಂಧಿಸಿದರು. ಕೆಲಕಾಲ ಅವರನ್ನು ವಶದಲ್ಲಿರಿಸಿಕೊಂಡು ಬಿಡುಗಡೆ ಮಾಡಲಾಯಿತು. ಕೆಲವು ಕಡೆಗಳಲ್ಲಿ ಪ್ರತಿಭಟನಾ ಸ್ಥಳಕ್ಕೆ ಬರುವ ಮುನ್ನವೇ ವಶಕ್ಕೆ ಪಡೆದು ಕರೆದೊಯ್ಯಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು