ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ಹೂಳೆತ್ತಿದ್ದ ಕೆರೆಗಳು ಭರ್ತಿ

ಸಂಕಷ್ಟದಲ್ಲಿದ್ದವರಿಗೆ ನೆರವಾಯಿತು ‘ಉದ್ಯೋಗ ಖಾತ್ರಿ’: ತುಂಬಿ ತುಳುಕುತ್ತಿವೆ ಬ್ರಹ್ಮಾವರದ ಮದಗ
Last Updated 29 ಆಗಸ್ಟ್ 2020, 21:48 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌, ಲಾಕ್‌ಡೌನ್‌ ಸಂಕಷ್ಟದ ಸರಮಾಲೆಗಳ ನಡುವೆ ಈ ದುಡಿಯುವ ವರ್ಗದವರು ತಮ್ಮೂರುಗಳಿಗೆ ಮರಳಿದರು. ಆದರೆ ಅವರು ಕೈಕಟ್ಟಿ ಕುಳಿತು ಕೊಳ್ಳಲಿಲ್ಲ. ಊರಿಗೆ ಉಪಕಾರವಾಗುವಂಥ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾದರು. ಮಾದರಿಯೂ ಆದರು.

ಕೆಲವರು ಪಾಳು ಬಿದ್ದಿದ್ದ ಕೆರೆಗಳನ್ನು ದುರಸ್ತಿಪಡಿಸಿ ಊರಿನ ದಾಹ ತಣಿಸಿದರೆ, ಇನ್ನೂ ಕೆಲವರು ಹಿರಿಯರಿಗೆ ಆರೋಗ್ಯ ಕಾರ್ಡ್‌ಗಳನ್ನು ಮಾಡಿಸಿದ್ದಾರೆ. ಬಸ್‌ ತಂಗುದಾಣ ನಿರ್ಮಿಸಿಕೊಟ್ಟಿದ್ದಾರೆ. ಹಳ್ಳಿಯ ಜನರಿಗೆ ಕೆಲವರು ಹೊಸ ವೃತ್ತಿಯನ್ನು ಕಲಿಸಿದ್ದಾರೆ. ಕೆಲಸ ಕಳೆದುಕೊಂಡವರು ಕಂಗೆಡದೇ ಪ್ರೇರಣೆ ಮೂಡಿಸಿದ ಕಥೆಗಳು ರಾಜ್ಯದ ಕೆಲವು ಭಾಗಗಳಿಂದ ಬೆಳಕಿಗೆ ಬಂದಿವೆ.

ಕೆಲಸ ಕಳೆದುಕೊಂಡು ಊರಿಗೆ ಮರಳಿದವರಲ್ಲಿ ಕೂಲಿ ಕಾರ್ಮಿಕರು ಮಾತ್ರವಲ್ಲ, ಬೇರೆ ಬೇರೆ ವೃತ್ತಿಗಳ ಜನರಿದ್ದರು. ಲಾಕ್‌ಡೌನ್‌ ಅವಧಿ ವಿಸ್ತರಣೆಯಾಗುತ್ತಿದ್ದಂತೆ ಇವರಲ್ಲಿ ಕೆಲವರು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುವಂಥ ಸಂದರ್ಭ ಬಂದಿತ್ತು. ಇಂಥ ಸಂದರ್ಭದಲ್ಲೇ ಕೆಲವರಿಗೆ ‘ಊರಿಗೆ ಉಪಕಾರಿ’ಯಾಗುವ ಯೋಚನೆ ಮೂಡಿತ್ತು.

ಕಂಪ್ಯೂಟರ್‌ ಕೀಲಿಮಣೆಯಲ್ಲೇ ಕೆಲಸ ಮಾಡಿದ್ದ ಕೈಗಳಿಗೆ ಹಾರೆ, ಗುದ್ದಲಿ, ಪಿಕಾಸಿ ಹಿಡಿಯುವುದು ಸುಲಭವಾಗಿರಲಿಲ್ಲ. ಆದರೆ ಹುಟ್ಟೂರಿಗೆ ಏನಾದರೂ ಮಾಡಬೇಕೆಂಬ ಹಂಬಲ ಅವರಿಂದ ಒಳ್ಳೆಯ ಕೆಲಸಗಳನ್ನು ಮಾಡಿಸಿದೆ. ಉದ್ಯೋಗ ಖಾತ್ರಿ ಯೋಜನೆ ಇಂಥವರಿಗೆ ನೆರವಾಗಿದೆ.ಕೆಲವು ಹಳ್ಳಿಗಳಲ್ಲಿ ಸ್ಥಳೀಯ ಸಂಘಟನೆಗಳು, ಕ್ರೀಡಾ ಕ್ಲಬ್‌ಗಳ ಸದಸ್ಯರು ಸಹ ಇಂಥ ಕೆಲಸಗಳನ್ನು ಮಾಡಿದ್ದಾರೆ.

ಮೈದಳೆದ ಕೆರೆಗಳು: ಉಡುಪಿ ಜಿಲ್ಲೆಯಲ್ಲಿ ತವರಿಗೆ ಮರಳಿದ್ದ ಯುವಕರ ತಂಡವು ಕೆರೆಗಳ ಹೂಳೆತ್ತಿದೆ. ಸಕಾಲದಲ್ಲಿ ಮಳೆಯಾಗಿ, ಈ ಕೆರೆಗಳು ಈಗ ತುಂಬಿ ತುಳುಕುತ್ತಿವೆ. ಅಂತರ್ಜಲ ಹೆಚ್ಚಿದೆ. ಮಳೆಗಾಲದ ಬೆಳೆಗೆ ಸೀಮಿತವಾಗಿದ್ದ ಇಲ್ಲಿಯ ರೈತರು, ಬೇಸಿಗೆ ಬೆಳೆ ತೆಗೆಯುವ ಉತ್ಸಾಹದಲ್ಲಿದ್ದಾರೆ.

ಮುಂಬೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ದುಡಿಯುತ್ತಿದ್ದ ಕರಾವಳಿಯ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಂಡು ತವರಿಗೆ ಮರಳಿದ್ದರು. ಹೀಗೆ ಬಂದವರಲ್ಲಿ ಬ್ರಹ್ಮಾವರ ತಾಲ್ಲೂಕಿನ ಕಾಡೂರು–ನಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸೇರಿದ 50ಕ್ಕೂ ಹೆಚ್ಚು ಜನರಿದ್ದರು. ಇವರಲ್ಲಿಬಹುಪಾಲು ಮಂದಿಗೆ ನರೇಗಾ ಯೋಜನೆಯಡಿ ಉದ್ಯೋಗ ದೊರೆಯಿತು ಎಂದು ಕೆಲಸ ಕಳೆದುಕೊಂಡು ದುಬೈನಿಂದ ಬಂದಿದ್ದದಿಲೀಪ್ ಶೆಟ್ಟಿ ಪುಟ್ಟಗುಡ್ಡೆ ಹೇಳಿದರು.

ಯೋಜನೆ ಸಾಕಾರವಾಗಿದ್ದು ಹೇಗೆ?: ಉದ್ಯೋಗವಿಲ್ಲದೆ ಮನೆಯಲ್ಲಿದ್ದ 36 ಜನರ ತಂಡ ಕಟ್ಟಿಕೊಂಡು, ಕಾಡೂರು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಹಾಕಲಾಯಿತು. ಪಿಡಿಒ ಮಹೇಶ್ ಅವರು ಯೋಜನೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ, ಪಾಳುಬಿದ್ದ ಕೆರೆಗಳ ಜೀರ್ಣೋದ್ದಾರಕ್ಕೆ ಒಪ್ಪಿಗೆ ನೀಡಿದರು.

18 ಜನರ ಎರಡು ತಂಡಗಳಾಗಿ ನಡೂರಿನ ಪುಟ್ಟುಗುಡ್ಡೆಯ ಸಣ್ಣ ಕೆರೆ ಹಾಗೂ ಇಸ್ರೋಳಿ ಮನೆ ಆವಡೆ ಕೆರೆಗಳ ಹೂಳೆತ್ತಿದೆವು. ಮಳೆಗೆ ಕೆರೆಗಳು ಈಗ ಭರ್ತಿಯಾಗಿವೆ. ಭತ್ತದ ಕೃಷಿಗೆ ನೀರು ಬಳಕೆಯಾಗುತ್ತಿದೆ ಎಂದು ಯೋಜನೆ ಸಕಾರಗೊಂಡ ಬಗೆಯನ್ನು ವಿವರಿಸಿದರು ದಿಲೀಪ್‌ ಶೆಟ್ಟಿ.

ಪಟ್ಟಣಗಳಲ್ಲಿ ದುಡಿದವರಿಗೆ ಹಾರೆ, ಗುದ್ದಲಿ ಹಿಡಿದು ಕೆಲಸ ಮಾಡುವಾಗ ಕಷ್ಟವಾಯಿತು. ಕೆಲವರು ಕೆಲಸಕ್ಕೆ ಬಾರದಿರಲು ನಿರ್ಧರಿಸಿದರು. ಹುಟ್ಟಿದ ಊರಿನ ಅಭಿವೃದ್ಧಿಗೆ ಸಿಕ್ಕಿರುವ ಅವಕಾಶ ಬಳಸಿಕೊಳ್ಳುವಂತೆ ಗ್ರಾಮದ ಮುಖಂಡರಾದ ಜಲಂಧರ್‌ ಹಾಗೂ ಪಿಡಿಒ ಮಹೇಶ್ ಎಲ್ಲರನ್ನೂ ಹುರಿದುಂಬಿಸಿದರು. ಮತ್ತೆ ಗುದ್ದಲಿ ಹಿಡಿದ ತಂಡ ಕೆಲವೇ ದಿನಗಳಲ್ಲಿ ಕೆರೆಗಳ ಹೂಳು ತೆಗೆಯಿತು.

‘ಕೂಲಿ ಮಾಡಿದವರಲ್ಲಿ ಎಂಜಿನಿಯರಿಂಗ್, ಎಂಬಿಎ ಪದವೀಧರರು, ಹೋಟೆಲ್‌ ಕಾರ್ಮಿಕರು, ಮಾಲೀಕರೂ ಇದ್ದರು. ಎಲ್ಲರಿಗೂ ಊರಿಗಾಗಿ ಕೆಲಸ ಮಾಡಿದ ತೃಪ್ತಿ ಇದೆ. ಲಾಕ್‌ಡೌನ್‌ ಖಿನ್ನತೆಗೆ ಸಿಲುಕಿದ್ದವರು ಅದರಿಂದ ಹೊರಬರಲು ಸಾಧ್ಯವಾಗಿದೆ. ಒಂದೂವರೆ ತಿಂಗಳು ಕೂಲಿ ಹಣ ಸಿಕ್ಕಿದೆ.ನಾವೇ ಹೂಳೆತ್ತಿದ ಕೆರೆಗಳಲ್ಲಿ ಊರಿನ ಮಕ್ಕಳು ಈಜುವಾಗ ಹೆಮ್ಮೆಯಾಗುತ್ತದೆ’ ಎಂದರು ದಿಲೀಪ್‌.

‘ಬೊಜ್ಜು ಕರಗಿತು; ಕೂಲಿಯೂ ಸಿಕ್ಕಿತು’

‘ದುಬೈನಲ್ಲಿ ತಿಂಗಳಿಗೆ ₹ 1.5 ಲಕ್ಷ ವೇತನ ಸಿಗುತ್ತಿತ್ತು. ಕೆಲಸ ಕಳೆದುಕೊಂಡು ತವರಿಗೆ ಬಂದಾಗ ಮಾನಸಿಕವಾಗಿ ಕುಗ್ಗಿದ್ದೆ. ಈ ಸಂದರ್ಭ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಯಿತು. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದ ನನಗೆ, ಕೂಲಿ ಕೆಲಸದಿಂದ 6 ರಿಂದ 7 ಕೆ.ಜಿ ತೂಕ ಇಳಿಸಿಕೊಳ್ಳಲು ಸಾಧ್ಯವಾಯಿತು. ಜೀವನ ನಿರ್ವಹಣೆಗೆ ಹಣವೂ ಸಿಕ್ಕಿತು’ ಎಂದರು ದಿಲೀಪ್‌ ಶೆಟ್ಟಿ ಪುಟ್ಟಗುಡ್ಡೆ.

***

ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯ ನೆರವೇರಿದಂತಾಗಿದೆ. ಕೊರೊನಾ ನೆಪದಲ್ಲಿ ಕಾಲ ವ್ಯರ್ಥಮಾಡುವಬದಲು ಖಾತ್ರಿ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು.
–ಮಹೇಶ್‌, ಕಾಡೂರು ಪಂಚಾಯಿತಿ ಪಿಡಿಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT