ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬಿಕ್ಕಟ್ಟು: ಗುತ್ತಿಗೆದಾರರಿಗೆ ₹ 15 ಸಾವಿರ ಕೋಟಿ ಬಿಲ್‌ ಬಾಕಿ

Last Updated 11 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ₹ 15 ಸಾವಿರ ಕೋಟಿಗೂ ಹೆಚ್ಚು ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಅತಿ ಹೆಚ್ಚು ಬಿಲ್‌ ₹ 4,500 ಕೋಟಿ ಲೋಕೋಪಯೋಗಿ ಇಲಾಖೆಯಲ್ಲಿ ಬಾಕಿ ಇದೆ. ಉಳಿದಂತೆ, ಜಲ ಸಂಪನ್ಮೂಲ ಇಲಾಖೆ ಮತ್ತು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯಲ್ಲಿ (ಬಿಬಿಎಂಪಿ) ಅಂದಾಜು ತಲಾ ₹ 3,000 ಕೋಟಿ ಬಾಕಿ ಇದೆ.

ರಾಜ್ಯ ಗುತ್ತಿಗೆದಾರರ ಸಂಘದ ಪ್ರತಿನಿಧಿಗಳ ಪ್ರಕಾರ, ಹಿಂದೆಂದೂ ಇಷ್ಟೊಂದು ದೊಡ್ಡ ಮೊತ್ತ ಬಾಕಿ ಇರಲಿಲ್ಲ. ‘ಬಿಲ್‌ ಬಾಕಿ ಸಾಮಾನ್ಯವಾಗಿದ್ದು, ಪಾವತಿಗೆ ಉಳಿದುಕೊಂಡಿರುವ ಮೊತ್ತವನ್ನು ಪಾವತಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. 2018–19 ರಿಂದಲೇ ಬಿಲ್‌ ಬಾಕಿ ಉಳಿದುಕೊಂಡಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.

ಎಚ್‌.ಡಿ. ಕುಮಾರಸ್ವಾಮಿ ನೇತೃತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ವೇಳೆಗೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರ ಬಾಕಿ ಮೊತ್ತ ₹ 4,500 ಕೋಟಿಯಿಂದ ₹ 5,000 ಕೋಟಿಯಷ್ಟಿತ್ತು. ನಂತರದ ದಿನಗಳಲ್ಲಿ ಈ ಮೊತ್ತ ಹೆಚ್ಚುತ್ತಲೇ ಹೋಗಿದೆ. ಅಲ್ಲದೆ, ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣ ವರಮಾನದಲ್ಲಿ ಕುಸಿತ ಉಂಟಾಗಿದೆ. ಅದರಲ್ಲೂ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಭಾರಿ ಕೊರತೆ ಆಗಿದೆ. ಹೀಗಾಗಿ, ಬಿಲ್‌ ಪಾವತಿಗೆ ಉಳಿದ ಮೊತ್ತವೂ ಏರಿಕೆ ಆಗಿದೆ ಎಂದೂ ಮೂಲಗಳು ತಿಳಿಸಿವೆ.

ಗುತ್ತಿಗೆದಾರರಿಗೆ 2019 ರ ಜುಲೈ ತಿಂಗಳಲ್ಲಿ ಲೋಕೋಪಯೋಗಿ ಇಲಾಖೆ ಪಾವತಿಸಬೇಕಾದ ಮೊತ್ತ ಸುಮಾರು ₹ 1,300 ಕೋಟಿಯಿಂದ ₹ 1,500 ಕೋಟಿಯಷ್ಟಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಮೊತ್ತ ಮೂರು ಪಟ್ಟು ಹೆಚ್ಚಿದೆ. ಹೆಚ್ಚಿನ ಇಲಾಖೆಗಳಲ್ಲಿ ಬಿಲ್‌ಗಳು ಬಾಕಿ ಉಳಿದುಕೊಂಡಿದೆ. ಅತೀ ಹೆಚ್ಚು ಮೊತ್ತ ಪಾವತಿಗೆ ಬಾಕಿ ಇರುವ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಕೂಡಾ ಸೇರಿದೆ.

‘ಈ ಹಿಂದಿನ ವರ್ಷಗಳಲ್ಲಿ ಬಿಲ್‌ ಪಾವತಿ ವಿಳಂಬವಾಗುತ್ತಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣಕ್ಕೆ ತಲುಪಿದ ಬಗ್ಗೆ ನನಗಂತೂ ಗೊತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಬಿಲ್‌ಗಳು ಪಾವತಿಗೆ ಬಾಕಿ ಇದ್ದರೂ, ಇದು ಸಹಜ ಪ್ರಕ್ರಿಯೆ. ಪಾವತಿಗೆ ಬಾಕಿ ಇರುವ ₹ 15 ಸಾವಿರ ಕೋಟಿಯಲ್ಲಿ ಬಹುತೇಕ ಬಿಲ್‌ಗಳು ಹಿಂದಿನ ಸರ್ಕಾರದ ಅವಧಿಯದ್ದು. ಎಲ್ಲ ಬಾಕಿ ಬಿಲ್‌ಗಳನ್ನು ನಾವು ಪಾವತಿಸುತ್ತಿದ್ದೇವೆ’ ಎಂದರು.

‘ವಿವಿಧ ಮೂಲಗಳಿಂದ ಬರಬೇಕಾಗಿದ್ದ ರಾಜ್ಯದ ವರಮಾನದಲ್ಲಿ ಕುಂಠಿತವಾಗಿದೆ. ಇದು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು, ಬಿಲ್‌ ಪಾವತಿಯ ಮೇಲೆಯೂ ಪರಿಣಾಮ ಬೀರಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT