ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಸ್ವಾರಸ್ಯಕರ ಅಂಶಗಳು

Last Updated 30 ಡಿಸೆಂಬರ್ 2020, 11:26 IST
ಅಕ್ಷರ ಗಾತ್ರ

ರಾಜ್ಯದ 5,728 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತಗಳ ಎಣಿಕೆ ಭರದಿಂದ ಸಾಗುತ್ತಿದೆ. ವಿವಿಧ ರಾಜಕೀಯ ಪಕ್ಷಗಳು, ಸ್ವತಂತ್ರರು ಸೇರಿದಂತೆ ಮೂರು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗುತ್ತಿದೆ. ಮತ ಏಣಿಕೆ ಪ್ರಕ್ರಿಯೆ ಮುಂದುವರಿಯುತ್ತಿದ್ದು, ಹಲವಾರು ಸ್ವಾರಸ್ಯಕರ ಅಂಶಗಳ ಬಗ್ಗೆ ವರದಿ ಬರುತ್ತಿದೆ. ಈ ಸಂಬಂಧ ಪ್ರಮುಖ ಹೈಲೈಟ್ಸ್‌ಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

ಅತ್ತೆ–ಸೊಸೆ ಗೆಲುವು

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ‌ ಗ್ರಾ.ಪಂ.ನಲ್ಲಿ ಅತ್ತೆ-ಸೊಸೆ ಇಬ್ಬರೂ ಗೆಲುವು ದಾಖಲಿಸಿದ್ದಾರೆ.

ಗ್ರಾ.ಪಂ.ನ ಬಿ.ವಿ. ಪಾಳ್ಯದ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಪಾರ್ವತಮ್ಮ ಹಾಗೂ ಬಿಸಿಎಂ-ಎ ಕ್ಷೇತ್ರದಿಂದ ಅವರ ಸೊಸೆ ಲಕ್ಷ್ಮಿ ಸ್ಪರ್ಧಿಸಿದ್ದು, ಇಬ್ಬರೂ ಗೆಲುವಿನ‌ ನಗೆ ಬೀರಿದರು. ಅತ್ತೆ-ಸೊಸೆ ಸ್ಪರ್ಧೆಯಿಂದ ಈ ಕ್ಷೇತ್ರ ಗಮನ ಸೆಳೆದಿತ್ತು.

ಮರು ಎಣಿಕೆಯಲ್ಲಿ ಗೆದ್ದವರು ಸೋತರು, ಸೋತವರು ಗೆದ್ದರು

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಗೋಳ ಗ್ರಾಮ ಪಂಚಾಯ್ತಿಯ ಒಂದು ಮತ ಅಂತರದ ಗೆಲುವು ಸಾಧಿಸಿದ್ದ ಗಡಾದ ರೇಣುಕಮ್ಮ ಮರುಎಣಿಕೆಯಲ್ಲಿ ಒಂದು ಮತದ ಅಂತರದಲ್ಲಿ ಸೋಲುಂಡರು.

ಮರು ಎಣಿಕೆಗೆ ಯಶೋಧಮ್ಮ ಪರ ಏಜೆಂಟರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಬಿ.ಎಂ.ದಿನೇಶ್ ಮನವಿ ಪುರಸ್ಕರಿಸದರು. ಮರು ಎಣಿಕೆಯಲ್ಲಿ ಪೂಜಾರ ಯಶೋಧಮ್ಮ 335 ಮತ ಪಡೆದು ಗೆಲುವಿನ ನಗೆ ಬೀರಿದರು. ಗಡಾದ ರೇಣುಕಮ್ಮ 334 ಮತಗಳನ್ನು ಪಡೆದರು. ಗಡಾದ ರೇಣುಕಮ್ಮ ಗೆಲುವಿನ ಖುಷಿ ಕೇವಲ ಒಂದು ಗಂಟೆ ಮಾತ್ರ ಇತ್ತು.

ಗೋಕಾಕ: 21ರ ಹರೆಯದ ಅಭ್ಯರ್ಥಿಗೆ ಗೆಲುವು

ಬೆಳಗಾವಿ ಜಿಲ್ಲೆಗೋಕಾಕತಾಲ್ಲೂಕಿನ ಕೌಜಲಗಿ ಗ್ರಾಮ ಪಂಚಾಯಿತಿ5ನೇವಾರ್ಡ್ಚುನಾವಣೆಯಲ್ಲಿ 21 ವರ್ಷದ ಈಶ್ವರಯ್ಯ ಕೆ ಸತ್ತಿಗೇರಿಮಠಆಯ್ಕೆಯಾಗಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಲು

ಹೊಳಲ್ಕೆರೆ: ತಾಲ್ಲೂಕಿನ ಬಿ.ದುರ್ಗ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಪರಾಭವಗೊಂಡಿದ್ದಾರೆ. ಇವರ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಮುಖಂಡ ರುದ್ರೇಶ್ ಗೌಡ 135 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಆಗ ಗೃಹ ರಕ್ಷಕ, ಈಗ ಪಂಚಾಯತಿ ಸದಸ್ಯ

ಗುರುಮಠಕಲ್ (ಯಾದಗಿರಿ ಜಿಲ್ಲೆ): ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗೃಹ ರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದ ಉಷಪ್ಪ ಅವರು ಕೇಶ್ವಾರ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಕೇಶ್ವಾರ ಗ್ರಾಮದ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅವರು ಆಯ್ಕೆಯಾಗಿದ್ದಾರೆ.

ಕೂಡ್ಲಿಗಿ: 2 ಮತಗಳ ಅಂತರದ ಗೆಲುವು

ಕೂಡ್ಲಿಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ಕ್ಷೇತ್ರ ಸಂಖ್ಯೆ 3ರಲ್ಲಿ ಜಿ. ಚಂದ್ರಮ್ಮ 2ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಚಂದ್ರಮ್ಮ ಅವರು 230 ಮತ ಪಡೆದಿದ್ದು, ಅವರ ಸಮೀಪ ಪ್ರತಿ ಸ್ಪರ್ಧಿ ಸೌಭಾಗ್ಯಮ್ಮ 228ಮತ ಪಡೆದಿದ್ದಾರೆ. ಕ್ಷೇತ್ರ ಎಸ್ಸಿ ಮಹಿಳೆಗೆ ಮೀಸಲಾಗಿತ್ತು.

ಕೂಡ್ಲಿಗಿ ತಾಲ್ಲೂಕಿನ ಸೂಲದಹಳ್ಳಿ ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 2ರಲ್ಲಿ ಕೆ. ಲಕ್ಷ್ಮೀ 2 ಮತಗಳ ಅಂತರದಲ್ಲಿ ವಿಜಯಿಯಾಗಿದ್ದಾರೆ. ಲಕ್ಷ್ಮೀ ಅವರಿಗೆ 349ಮತ ಪಡೆದಿದ್ದು, ಎದುರಾಳಿ ರೇಣುಕಮ್ಮ 347 ಮತ ಪಡೆದಿದ್ದಾರೆ.

3 ಮತಗಳ ಅಂತರದ ಗೆಲುವು

ಹೊಸಪೇಟೆ (ಬಳ್ಳಾರಿ): ಮೂರು ಮತಗಳ ಅಂತರದಿಂದ ಗೆದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ. ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾ.ಪಂಯ ಎರಡನೇ ಕ್ಷೇತ್ರದ ಅಭ್ಯರ್ಥಿ ಎನ್. ಗೀತಾಗೆ ಗೆಲುವು.

ಒಂದು ಮತದ ಗೆಲುವು
ತುಮಕೂರು:
ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾ.ಪಂ. ಹನುಮಂತಪುರ ಕ್ಷೇತ್ರದ ಟಿ.ವಿ.ಶಿವಕುಮಾರ್ 163 ಮತ ಪಡೆದರೆ ಪ್ರತಿಸ್ಪರ್ಧಿ ಕೃಷ್ಣಪ್ಪ 162 ಮತ ಪಡೆದಿದ್ದಾರೆ.‌ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದರು.

ಸಂಪೂರ್ಣ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಂಗಾವತಿ:ತಾಲ್ಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜಿನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ.

ಚಿತ್ರದುರ್ಗ: ತಾಲ್ಲೂಕಿನ ಯಳಗೋಡು ಗ್ರಾಮ ಪಂಚಯಿತಿಯ ಬಸ್ತಿಹಳ್ಳಿ ಗ್ರಾಮದ ಅಭ್ಯರ್ಥಿ ಶಾಂತಕುಮಾರ್ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದರು.

ಚಾಮರಾಜನಗರ: ಹನೂರು ತಾಲ್ಲೂಕಿನ ಮಂಗಲ ಗ್ರಾಮ ಪಂಚಾಯಿತಿಯ ಅಭ್ಯರ್ಥಿ ಪ್ರಮೀಳಾ ಅವರು ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲ್ಲೂಕಿನ ಗೋಲಭಾವಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂ 2ರಲ್ಲಿ ಸ್ಪರ್ಧಿಸಿದ್ದ ಕಲಾವತಿ ಮಾಂಗ ಒಂದು ಮತದ ಅಂತರದಿಂದ ಜಯ ಗಳಿಸಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಲಾವತಿ 297 ಮತಗಳ ಪಡೆದರೆ ಅವರ ಪ್ರತಿ ಸ್ಲರ್ಧಿ ಚಂದ್ರವ್ವ ಮಾಂಗ ಅವರಿಗೆ 296 ಮತಗಳು ಬಿದ್ದಿವೆ.

ಟಾಸ್ ಮಾಡಿ ಫಲಿತಾಂಶ ಪ್ರಕಟ
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಎರಡನೇ ವಾರ್ಡಿನ ಇಬ್ಬರು ಅಭ್ಯರ್ಥಿಗಳಿಗೆ 311 ಸಮನಾದ ಮತಗಳು ಬಂದ ಕಾರಣ ಟಾಸ್ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಟಾಸ್ ಗೆದ್ದ ಶ್ರೀಶೈಲ ಹಿಪ್ಪರಗಿ ಆಯ್ಕೆಯಾದರು. ಸಮಮತ ಪಡೆದು, ಟಾಸ್ ನಲ್ಲಿ ಸೋತ ಅಭ್ಯರ್ಥಿ ರಾವುತಪ್ಪ ಆಲೂರಗೆ ಸೋಲಾಯಿತು.

ಮಂಡ್ಯ: ಬೂಕನಕೆರೆ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಲಾಟರಿ ಮೂಲಕ ಜಯ

ಲಾಟರಿ ಮೂಲಕ ಗೆದ್ದ ಓಂಕಾರ ಮೂರ್ತಿ
ತಿಪಟೂರು : ತಾಲ್ಲೂಕಿನ ಕರಡಿ ಪಂಚಾಯಿತಿಯ ರಾಮೇನಹಳ್ಳಿ ೨ ಕ್ಷೇತ್ರದ ಹಿಂದುಳಿದ ವರ್ಗ ಅಭ್ಯರ್ಥಿ ಓಂಕಾರಮೂರ್ತಿ ಹಾಗೂ ಪಾಲಕ್ಷಯ್ಯ ನಡುವೆ ಡ್ರಾ ಅಗಿದ್ದು ಇಬ್ಬರು 194 ಮತಗಳನ್ನು ತೆಗೆದುಕೊಂಡಿದ್ದರು. ನಂತರ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಓಂಕಾರಮೂರ್ತಿ ಜಯಗಳಿಸಿದ್ದಾರೆ.

ಬಾಗಲಕೋಟೆ: ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಪಶಾನಿ ಗ್ರಾಮದ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಮಹಾಂತೇಶ ಲಾಟರಿ ಬಲದಿಂದ ಗೆಲುವು ಸಾಧಿಸಿದರು.

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಡ ಗ್ರಾಮಪಂಚಾಯಿತಿಯ 241 ಮತಗಟ್ಟೆಯಲ್ಲಿ ಅಂಜು ಎಂ. ಮತ್ತು ಬಿ.ಎ.ಕ್ಷಿತಿಜಾ ತಲಾ 375 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದಾರೆ. ಅಂತಿಮವಾಗಿ ಲಾಟರಿ ಮೂಲಕ ಅಂಜು.ಎಂ. ಗೆಲುವು ದಾಖಲಿಸಿದ್ದಾರೆ.

ಶಿರಾ: ತಾಲ್ಲೂಕಿನ ಹೆಂದೊರೆ ಗ್ರಾಮ ಪಂಚಾಯಿತಿಯ ಸಿದ್ದನಹಳ್ಳಿ ಕ್ಷೇತ್ರದಲ್ಲಿ ಗಿರಿಜಮ್ಮ ಅವರಿಗೆ ಲಾಟರಿಯಲ್ಲಿ ಅದೃಷ್ಟ ಒಲಿದು ಬಂತು. ಗಿರಿಜಮ್ಮ ಮತ್ತು ಸುಧಾ ಇಬ್ಬರು ತಲಾ 283 ಮತಗಳನ್ನು ಪಡೆದು ಸಮಬಲ ಸಾಧಿಸಿದಾಗ ನಂತರ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ರಾಜ್ಯದ ಹಲವೆಡೆ ಫಲಿತಾಂಶ ಡ್ರಾ; ಲಾಟರಿ ಮೂಲಕ ವಿಜೇತರ ಘೋಷಣೆ

ನಿಂಬೆಹಣ್ಣು ವಶ
ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನಡೆಯುತ್ತಿರುವ ಮತ ಎಣಿಕೆಗೆ ಅಭ್ಯರ್ಥಿಗಳು, ಎಜೆಂಟರ್ ತಂದಿದ್ದ ನಿಂಬೆ ಹಣ್ಣುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮರು ಎಣಿಕೆಯಲ್ಲಿ ಗೆದ್ದವರು ಸೋತರು, ಸೋತವರು ಗೆದ್ದರು
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಗೋಳ ಗ್ರಾಮ ಪಂಚಾಯ್ತಿಯ ಒಂದು ಮತ ಅಂತರದ ಗೆಲುವುಸಾಧಿಸಿದ್ದ ಗಡಾದ ರೇಣುಕಮ್ಮ ಮರುಎಣಿಕೆಯಲ್ಲಿ ಒಂದು ಮತದ ಅಂತರದಲ್ಲಿ ಸೋಲುಂಡರು. ಮರು ಎಣಿಕೆಗೆ ಯಶೋಧಮ್ಮ ಪರ ಏಜೆಂಟರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಬಿ.ಎಂ.ದಿನೇಶ್ ಮನವಿ ಪುರಸ್ಕರಿಸದರು. ಮರು ಎಣಿಕೆಯಲ್ಲಿ ಪೂಜಾರ ಯಶೋಧಮ್ಮ 335 ಮತ ಪಡೆದು ಗೆಲುವಿನ ನಗೆ ಬೀರಿದರು. ಗಡಾದ ರೇಣುಕಮ್ಮ 334 ಮತಗಳನ್ನು ಪಡೆದರು. ಗಡಾದ ರೇಣುಕಮ್ಮ ಗೆಲುವಿನ ಖುಷಿ ಕೇವಲ ಒಂದು ಗಂಟೆ ಮಾತ್ರ ಇತ್ತು.

ಗಂಡನಿಗೆ ಗೆಲುವು, ಹೆಂಡತಿಗೆ ಸೋಲು
ಕೂಡ್ಲಿಗಿ: ಗುಂಡುಮುಣು ಗ್ರಾಮ ಪಂಚಾಯ್ತಿಯ ಕ್ಷೇತ್ರ ಸಂಖ್ಯೆ 1ರಲ್ಲಿ ಗಂಡ ಗೆದ್ದು ಹೆಂಡತಿ ಸೋತಿದ್ದಾರೆ. ಎರಡು ಸ್ಥಾನಗಳಿದ್ದ ಕ್ಷೇತ್ರದಲ್ಲಿ ಒಂದು ಸಾಮಾನ್ಯಕ್ಕೆ ಹಾಗೂ ಒಂದು ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಇದರಲ್ಲಿ ಶ್ರೀಕಾಂತ 314 ಪಡೆದು ಗೆಲವು ಕಂಡಿದ್ದು, ಅವರ ಪತ್ನಿ ಲಕ್ಷ್ಮೀದೇವಿ 283 ಸೋತಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ಚಂದ್ರಗೌಡ 314 ಮತ ಪಡೆದು ಗೆಲವು ಪಡೆದಿದ್ದಾರೆ. ಅಜ್ಜಯ್ಯ 279 ಚಂದ್ರಗೌಡ ವಿರುದ್ದ ಸೋತಿದ್ದಾರೆ.

ಸೊಸೆಯ ಸೋಲಿಸಿದ ಅತ್ತೆ
ಹಾಸನ: ತಾಲ್ಲೂಕಿನ ಹೆರಗು ಗ್ರಾಮ ಪಂಚಾಯಿತಿಯ ಎಚ್. ಭೈರಾಪುರ ಗ್ರಾಮದಿಂದ ಸ್ಪರ್ಧಿಸಿದ್ದ ಅತ್ತೆ ಸೊಂಬಮ್ಮ ಅವರು ಮೂರು ಮತಗಳ ಅಂತರದಿಂದ ಸೊಸೆ ಪವಿತ್ರರನ್ನ ಸೋಲಿಸಿದ್ದಾರೆ.

ಈ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಯಿ-ಮಗ ಗೆಲುವು
ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಯಿ-ಮಗ ಇಬ್ಬರೂ ಗೆಲುವಿನ ನಗೆ ಬೀರಿದರು. ಇಳಕಲ್ ತಾಲ್ಲೂಕಿನ ಓತಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋನಾಳ ಗ್ರಾಮದ ಹನಮವ್ವ ಕುರಿ ಹಾಗೂ ದೊಡ್ಡಪ್ಪ ಕುರಿ ಗೆಲುವು ಸಾಧಿಸಿದವರು. ನಾವಿಬ್ಬರೂ ಬಿಜೆಪಿ ಬೆಂಬಲಿತರು ಎಂದು ಗೆಲುವಿನ ನಂತರ ಅಮ್ಮ- ಮಗ ಹೇಳಿಕೊಂಡರು.

ಮಡಿಕೇರಿ: ಪತಿ, ಪತ್ನಿಗೆ ಜಯ
ಮಡಿಕೇರಿ: ಹಾಕತ್ತೂರು ಪಂಚಾಯ್ತಿ ವ್ಯಾಪ್ತಿಯ ಬಿಳಿಗೇರಿ 2ರಿಂದ ಸ್ಪರ್ಧಿಸಿದ್ದ ಪತಿ-ಪತ್ನಿ ಗೆಲುವು ದಾಖಲಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ದುಲ್ ಖಾದರ್, ಬಿಜೆಪಿ ಬೆಂಬಲಿತ ದರ್ಶನ ಅವರನ್ನು ಪರಾಭವಗೊಳಿಸಿದ್ದಾರೆ. ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಕೀರ 220 ಮತ ಪಡೆದು, ಎದುರಾಳಿ ಜಯಂತಿ ಅವರನ್ನು ಸೋಲಿಸಿದ್ದಾರೆ. ಪತಿ‌ ಅಬ್ದುಲ್ ಖಾದರ್ 2ನೇ ಬಾರಿ ಗೆಲುವು ಪಡೆದರೆ, ಪತ್ನಿ ಸಾಕೀರ ಮೊದಲ ಬಾರಿ ಜಯಶಾಲಿಯಾಗಿದ್ದಾರೆ.

ಜೈಲಿನಿಂದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಗೆಲುವು
ಮಡಿಕೇರಿ: ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದ ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಎಮ್ಮೆಗುಂಡಿ ಕ್ಷೇತ್ರದ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿದ್ದಾರೆ.

ಬಿಎಸ್‌ವೈ ತವರು ಬೂಕನಕೆರೆ ಫಲಿತಾಂಶ ಡ್ರಾ
ಮುಖ್ಯಮಂತ್ರಿ ಯಡಿಯೂರಪ್ಪ ತವರು ಬೂಕನಕೆರೆ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ ಸರಿಸಮನಾದ ಮತ ಪಡೆದಿದ್ದರಿಂದ ಫಲಿತಾಂಶ ಡ್ರಾ ಆಗಿತ್ತು. ಬಳಿಕ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲಾಟರಿ ಮೂಲಕ ಜಯ ಸಾಧಿಸಿದ್ದಾರೆ.

ಈ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎರಡು ಮತದ ಅಂತರದಿಂದ ಗೆಲುವು
ಚಿತ್ರದುರ್ಗ: ತಾಲ್ಲೂಕಿನ ಯಳಗೋಡು ಗ್ರಾಮ ಪಂಚಯಿತಿಯ ಬಸ್ತಿಹಳ್ಳಿ ಗ್ರಾಮದ ಅಭ್ಯರ್ಥಿ ಶಾಂತಮ್ಮ ಎಂಬುವರು ಮರು ಮತ ಎಣಿಕೆಯಲ್ಲಿ ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಕೇವಲ ಒಂದು ಮತ ಗಳಿಸಿದ ಅಭ್ಯರ್ಥಿ
ಹಡಗಲಿ: ದೇವಲಾಪುರ 2ನೇ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಬೇರಪ್ಪ ಸಾಲಿ ಕೇವಲ ಒಂದು ಮತ ಗಳಿಸಿ ಪರಾಭವಗೊಂಡಿದ್ದಾರೆ.

ಶಿರಸಿ: ತಿರಸ್ಕೃತ ಮತ ಪರಿಶೀಲನೆಯಲ್ಲಿ ಗೆದ್ದ ಅಭ್ಯರ್ಥಿ
ಶಿರಸಿ: ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯ್ತಿಯ ಗೋಣಸರ ವಾರ್ಡಿನಲ್ಲಿ ವೀಣಾ ಗೌಡ ತಿರಸ್ಕೃತ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದರು. ಹಿಂದುಳಿದ ಅ ವರ್ಗ ಮಹಿಳೆ ಮೀಸಲು ಸ್ಥಾನಕ್ಕೆ ನಡೆದಿದ್ದ ಸ್ಪರ್ಧೆಯಲ್ಲಿ ಪಾರ್ವತಿ ಗೌಡ ಹಾಗೂ ವೀಣಾ ಗೌಡ 127 ಮತ ಪಡೆದಿದ್ದರು. ಈ ವೇಳೆ ತಿರಸ್ಕೃತಗೊಂಡಿದ್ದ ಮತಗಳನ್ನು ಮರುಪರಿಶೀಲಿಸಲಾಯಿತು. ವೀಣಾ ಗೌಡ ಅವರು ಪಡೆದಿದ್ದ ಆಟೊ ಚಿಹ್ನೆಗೆ ಮತದ ಮುದ್ರೆಯ ಅಲ್ಪ ಭಾಗ ತಾಗಿಕೊಂಡಿದ್ದರಿಂದ ಅದನ್ನು ಗೆಲುವಿಗೆ ಪರಿಗಣಿಸಲಾಯಿತು.

ಹನಸಿ ಕ್ಷೇತ್ರ: ಗಂಗಾಧರಯ್ಯ ನಾಲ್ಕನೆ ಬಾರಿಗೆ ಗೆಲವು.
ಹಗರಿಬೊಮ್ಮನಹಳ್ಳಿ: ತಾಲೂಕಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಹನಸಿ ಗ್ರಾಪಂ ನಾಲ್ಕನೇಯ ಕ್ಷೇತ್ರ ದಿಂದ ಹಿರಿಯ ನಾಯಕ ಎಎಂ.ಗಂಗಾಧರಯ್ಯ ನಾಲ್ಕನೆ ಬಾರಿಗೆ ವಿಜಯದ ನಗೆ ಬೀರಿದ್ದಾರೆ. ಈ ಕ್ಷೇತ್ರದಲ್ಲಿ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಭಾರೀ ಹಣಾಹಣಿಯಲ್ಲಿ ಅಂತಿಮವಾಗಿ ಗಂಗಾಧರಯ್ಯ 251 ಮತಗಳನ್ನು ಗಳಿಸಿ ತಮ್ಮ ಎದುರಾಳಿ ಶಿವಕುಮಾರಗೌಡರನ್ನು 36 ಮತಗಳಿಂದ ಸೋಲಿಸಿದರು. ಪರಾಜಿತ ಅಭ್ಯರ್ಥಿ ಶಿವಕುಮಾರಗೌಡರಿಗೆ 215 ಮತ ಹಾಗೂ 14 ಮತಗಳು ತಿರಸ್ಕರಿಸಲ್ಪಟ್ಟವು.

ಚಿಕ್ಕೋಡಿ: ತಾಲ್ಲೂಕಿನ ಶಿರಗಾಂವ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸತತ ನಾಲ್ಕನೇ ಬಾರಿಗೆ ಪ್ರಕಾಶ ಮಾನೆ ಆಯ್ಕೆ

8,074 ಸ್ಥಾನಗಳಿಗೆ ಅವಿರೋಧ ಆಯ್ಕೆ
ಒಟ್ಟು 226 ತಾಲ್ಲೂಕುಗಳ 91,339 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಇದರಲ್ಲಿ 8,074 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದೆ. ಉಳಿದ ಸ್ಥಾನಗಳಿಗೆ 3,11,887 ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT