ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಅಧಿಸೂಚನೆ ಬಳಿಕ ಮೀಸಲಾತಿಗೆ ಪ್ರಸ್ತಾವ

ಸಮಾಜ ಕಲ್ಯಾಣ ಇಲಾಖೆಗೆ ಹಂಪಿ ಕನ್ನಡ ವಿ.ವಿ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ
Last Updated 21 ನವೆಂಬರ್ 2021, 21:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಎರಡೂ ವರೆ ತಿಂಗಳ ಹಿಂದೆಯೇ 17 ಬೋಧಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಮೀಸಲಾತಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಈಗ ಪ್ರಸ್ತಾವ ಸಲ್ಲಿಸಿದೆ.

2021ರ ಸೆಪ್ಟೆಂಬರ್‌ 3ರಂದು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ನ.15ರಂದು ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿಯಾಗಿತ್ತು. ಎರಡು ದಿನ ಇರುವಾಗ ಪರೀಕ್ಷೆ ಮುಂದೂಡಲಾಗಿತ್ತು. ಅಷ್ಟೇ ಅಲ್ಲ, ಪರೀಕ್ಷೆ ನಡೆಯಬೇಕಿದ್ದ ನ.15ರಂದೇ ಸಮಾಜ ಕಲ್ಯಾಣ ಇಲಾಖೆಗೆ ಮೀಸಲಾತಿ ಅನುಮತಿ ಕೋರಿ ಕುಲಸಚಿವರು ಪ್ರಸ್ತಾವ ಸಲ್ಲಿಸಿದ್ದಾರೆ. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆಗೆ ಮೀಸಲಾತಿ ಸಂಬಂಧ ಪ್ರಸ್ತಾವ ಸಲ್ಲಿಸಿ, ಒಪ್ಪಿಗೆ ಪಡೆಯ ಬೇಕೆಂಬ ನಿಯಮ ಇದೆ. ಆದರೆ, ಅದನ್ನು ಪಾಲಿಸಿಲ್ಲ.

2017–18 ರಲ್ಲಿ ಬಾಕಿ ಉಳಿದ ಹುದ್ದೆಗಳನ್ನು ‘ಮಿಸ್ಸಿಂಗ್‌ ರೋಸ್ಟರ್‌’ ಎಂದು ಪ್ರಸ್ತಾವ ದಲ್ಲಿ ತಿಳಿಸಿದ್ದಾರೆ. ಆದರೆ, ಅಧಿಸೂಚನೆಯಲ್ಲಿ ಈ ವಿಷಯ ಉಲ್ಲೇಖಿಸಿರಲಿಲ್ಲ.

2017–18ರಲ್ಲಿ 21 ಹುದ್ದೆಗಳಲ್ಲಿ 11 ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ–4, ಪರಿಶಿಷ್ಟ ಪಂಗಡ–1, ಪ್ರವರ್ಗ–1ಕ್ಕೆ 2 ಹುದ್ದೆ, ಪ್ರವರ್ಗ–2ಎಗೆ 2 ಹುದ್ದೆ, ಪ್ರವರ್ಗ–2ಬಿ 1 ಹುದ್ದೆ ಮೀಸಲಿಡಲಾಗಿತ್ತು. ಒಟ್ಟು ಹುದ್ದೆಗಳಲ್ಲಿ 9 ಹುದ್ದೆ ತುಂಬಲಾಗಿತ್ತು. ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯಾಗದ ಕಾರಣ ಅವುಗಳನ್ನು ತುಂಬಿರ ಲಿಲ್ಲ.

ಒಂದುವೇಳೆ ಅರ್ಜಿ ಬರದೇ ಹುದ್ದೆಗಳು ಭರ್ತಿ ಯಾಗದಿದ್ದಲ್ಲಿ 2015ರ ಸರ್ಕಾರದ ಆದೇಶದ ಪ್ರಕಾರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಹುದ್ದೆಗಳನ್ನು ಬ್ಯಾಕ್‌ಲಾಗ್‌ ಎಂದು ಘೋಷಿಸಬೇಕು. ಹಾಗೆ ಮಾಡದೇ ಹುದ್ದೆ ಪುನಃ ವರ್ಗೀಕರಣ ಮಾಡುವಂತಿಲ್ಲ. ಆದರೆ, ಅದನ್ನು ಉಲ್ಲಂಘಿಸಲಾಗಿದೆ.

ಗೆಜೆಟ್‌ ನೋಟಿಫಿಕೇಶನ್‌ 1995 ಕಂಡಿಕೆ 9, ಅನುಬಂಧ 2 ಹಾಗೂ 2015ರ ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಮಿಸ್ಸಿಂಗ್‌ ರೋಸ್ಟರ್‌ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗಷ್ಟೇ ಅನ್ವಯವಾಗುತ್ತದೆ. ಆದರೆ, ಇಲ್ಲಿ ಸಾಮಾನ್ಯ ವರ್ಗದವರಿಗೆ ಮಿಸ್ಸಿಂಗ್‌ ರೋಸ್ಟರ್‌ ಎಂದು ದಿಕ್ಕು ತಪ್ಪಿಸುವ ಪ್ರಯತ್ನಗಳಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ.

5 ಕ್ಯಾಲೆಂಡರ್‌ ವರ್ಷದವರೆಗೆ ಮಿಸ್ಸಿಂಗ್‌ ರೋಸ್ಟರ್‌ ಮುಂದುವರೆಯುತ್ತದೆ. ಈಗ 25 ವರ್ಷ ಕಳೆದಿದೆ. ಆದರೆ, ಹಳೆಯ ಮಿಸ್ಸಿಂಗ್‌ ರೋಸ್ಟರ್‌ ತೋರಿಸಲಾಗಿದೆ. ಮಿಸ್ಸಿಂಗ್‌ ರೋಸ್ಟರ್‌ ಇಲ್ಲದಕ್ಕೆ 2018ರ ನೇಮಕಾತಿಯಲ್ಲಿ ತೋರಿಸಿರಲಿಲ್ಲ.

‘ಮೀಸಲಾತಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅರ್ಜಿದಾರರು ಅನಗತ್ಯ ದಾವೆ ಹೂಡಿ ತೊಡಕು ಮಾಡಬಹುದು’ ಎಂದು ಪ್ರಸ್ತಾವದಲ್ಲಿ ಕೋರಿದ್ದಾರೆ. ಆದರೆ, ಈಗಾಗಲೇ ಶಂಕರಪ್ಪ ಬಡಿಗೇರ್‌, ವೈಶಾಲಿ, ಎ.ಶಿವಮ್ಮ, ಪ್ರಕಾಶ್‌ ಬಿ. ಹುಗ್ಗಿ ಸೇರಿ 7 ಜನ ಕೋರ್ಟ್‌ ಮೊರೆ ಹೋಗಿದ್ದು, ವಿಶ್ವವಿದ್ಯಾಲಯಕ್ಕೆ ನೋಟಿಸ್‌ ನೀಡಲಾಗಿದೆ. ಆದರೆ, ಈ ವಿಷಯ ಮುಚ್ಚಿಟ್ಟು ತರಾತುರಿಯಲ್ಲಿ ನೇಮಕ ಪ್ರಕ್ರಿಯೆ ಮುಗಿಸಲು ಯತ್ನಿಸ ಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಹಲವು ಸಲ ಸಂಪರ್ಕಿಸಿದರೂ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಕುಲಪತಿ ಅವಧಿ 6 ತಿಂಗಳಿದ್ದಾಗ ನೇಮಕ ಮಾಡುವಂತಿಲ್ಲ

2016 ಜುಲೈ 15ರ ಸುತ್ತೋಲೆ ಪ್ರಕಾರ, ಕುಲಪತಿ ಅಧಿಕಾರದ ಅವಧಿ ಆರು ತಿಂಗಳಿದ್ದಾಗ ಯಾವುದೇ ನೇಮಕಾತಿ, ಪ್ರಮುಖ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಸರ್ಕಾರ ಅದನ್ನು ಪರಿಷ್ಕರಿಸಿ 2021ರ ಸೆ. 28ರಂದು ಮತ್ತೊಂದು ಸುತ್ತೋಲೆ ಹೊರಡಿಸಿ, ಅದನ್ನು ಎರಡು ತಿಂಗಳಿಗೆ ಇಳಿಸಿದೆ. ಆದರೆ, ಬೋಧಕ ಹುದ್ದೆಗಳ ನೇಮಕಾತಿಗೆ 2021ರ ಸೆ. 3ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಸರ್ಕಾರದ ಹಳೆಯ ಆದೇಶವೇ ಜಾರಿಯಲ್ಲಿತ್ತು. ಹೀಗಾಗಿ ಅಧಿಸೂಚನೆ ಹೊರಡಿಸಿರುವುದು ಕಾನೂನುಬಾಹಿರ ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT