ಶನಿವಾರ, ಸೆಪ್ಟೆಂಬರ್ 26, 2020
22 °C
ಆರೋಗ್ಯ ಸ್ಥಿತಿ ಮೌಲ್ಯಮಾಪನ

50 ವರ್ಷ ಮೇಲ್ಪಟ್ಟವರಿಗೂ ಮನೆ ಆರೈಕೆ; ಪರಿಷ್ಕೃತ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೀವಕ್ಕೆ ಅಪಾಯವಿಲ್ಲ ಎನ್ನುವುದು ವೈದ್ಯಕೀಯ ವಿಶ್ಲೇಷಣೆಯಿಂದ ದೃಢಪಟ್ಟಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವ 60 ವರ್ಷದವರೆಗಿನ ಕೋವಿಡ್‌ ಪೀಡಿತರು ಕೂಡ ಮನೆ ಆರೈಕೆಗೆ ಒಳಪಡಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಈ ಸಂಬಂಧ ಆರೋಗ್ಯ ಇಲಾಖೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

ಈ ಹಿಂದೆ ಕೊರೊನಾ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಹಂತದ ಲಕ್ಷಣಗಳು ಕಾಣಿಸಿಕೊಂಡ 50 ವರ್ಷದೊಳಗಿನವರಿಗೆ ಮಾತ್ರ ಮನೆ ಆರೈಕೆಗೆ ಅವಕಾಶ ನೀಡಲಾಗಿತ್ತು. ಈಗ ವಯೋಮಿತಿಯನ್ನು 60 ವರ್ಷಕ್ಕೆ ಏರಿಕೆ ಮಾಡ
ಲಾಗಿದೆ. ಅದೇ ರೀತಿ ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‌ಐವಿ, ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿದ್ದು, ಕೋವಿಡ್ ರೋಗ ಲಕ್ಷಣ ಅಷ್ಟಾಗಿ ಗೋಚರಿಸದಿದ್ದಲ್ಲಿ ಕೂಡ ಮನೆ ಆರೈಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾ
ಗಿದೆ. ಆದರೆ, ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹಾಗೂ ಅಧಿಕಾರಿಗಳು ವ್ಯಕ್ತಿಯ ಆರೋಗ್ಯದ ಸ್ಥಿತಿಗತಿಯನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಿ, ಅವಕಾಶ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಈ ಹಿಂದೆ ಮನೆ ಆರೈಕೆಗೆ ಒಳಗಾದವರಿಗೆ ಕೊರೊನಾ ಸೋಂಕು ಲಕ್ಷಣಗಳು 17 ದಿನಗಳವರೆಗೆ ಗೋಚರಿಸದಿದ್ದಲ್ಲಿ ಹಾಗೂ 10 ದಿನಗಳಿಂದ ಜ್ವರ ರಹಿತರಾಗಿದ್ದಲ್ಲಿ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಿ, ಆರೈಕೆಯನ್ನು ಮುಕ್ತಾಯಗೊಳಿಸಲಾಗುತ್ತಿತ್ತು. ಆದರೆ, ಇನ್ನುಮಂದೆ ಸೋಂಕಿನ ಲಕ್ಷಣಗಳು ಪ್ರಾರಂಭವಾದಾಗಿನಿಂದ 10 ದಿನಗಳು ಅಥವಾ ಗಂಟಲ ದ್ರವದ ಪರೀಕ್ಷೆ ನಡೆಸಿದ 10 ದಿನಗಳ ಬಳಿಕ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದಿದ್ದಲ್ಲಿ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಪರಿಗಣಿಸಲಾಗುತ್ತದೆ. ಮುಂದಿನ 7 ದಿನಗಳು ಮನೆ ಕ್ವಾರಂಟೈನ್‌ಗೆ ಒಳಪಡಬೇಕು. ಗರ್ಭಿಣಿಯರಿಗೆ ಈ ಮೊದಲು ಹೆರಿಗೆ ದಿನಾಂಕದಿಂದ ನಾಲ್ಕು ವಾರದ ಮೊದಲು ಸೋಂಕಿತರಾದಲ್ಲಿ ಮನೆ ಆರೈಕೆಗೆ ಅವಕಾಶ ಇರಲಿಲ್ಲ. ಆದರೆ, ಈಗ ಆ ಅವಧಿಯನ್ನು ಎರಡು ವಾರಗಳಿಗೆ ಇಳಿಕೆ ಮಾಡಲಾಗಿದೆ.

ಲಕ್ಷಣವಿದ್ದಲ್ಲಿ ಅವಕಾಶವಿಲ್ಲ: ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿದವರಿಗೆ ಮನೆ ಆರೈಕೆಗೆ ಅವಕಾಶವಿಲ್ಲ. ಕೋವಿಡ್ ಪೀಡಿತ ವ್ಯಕ್ತಿಗೆ ಮನೆ ಆರೈಕೆಗೆ ಅವಕಾಶ ನೀಡುವ ಮೊದಲು ಜಿಲ್ಲಾ ಆರೋಗ್ಯ ಪ್ರಾಧಿಕಾರ ಅಥವಾ ಬಿಬಿಎಂಪಿ ಆರೋಗ್ಯ ತಂಡವು ಮನೆಗೆ ಭೇಟಿ ನೀಡಿ, ವ್ಯವಸ್ಥೆ ಪರಿಶೀಲಿಸಲಿದೆ. ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಅಗತ್ಯ ವ್ಯವಸ್ಥೆ ಇದ್ದಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ. ಆರೈಕೆಗೆ ಒಳಪಡುವವರು ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್ ಹಾಗೂ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಹೊಂದಿರಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಮನೆಗೆ ತೆರಳುವಾಗ ಪರೀಕ್ಷೆಯಿಲ್ಲ
ಲಕ್ಷಣ ರಹಿತ, ಪ್ರಾರಂಭಿಕ ಲಕ್ಷಣಗಳಿರುವ ಕೊರೊನಾ ಸೋಂಕಿತರು ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚೇತರಿಸಿಕೊಂಡು, ಮನೆಗೆ ತೆರಳುವಾಗ ಮತ್ತೊಮ್ಮೆ ಕೋವಿಡ್ ‍ಪರೀಕ್ಷೆ ನಡೆಸುವುದಿಲ್ಲ. ಅದೇ ರೀತಿ, ಮನೆ ಆರೈಕೆಗೆ ಒಳಪಟ್ಟವರು ಕೂಡ ನಿಗದಿತ ಅವಧಿಯ ಬಳಿಕ ಲಕ್ಷಣ ರಹಿತರಾದಲ್ಲಿ ಪರೀಕ್ಷೆಯ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಸೋಂಕಿತರ ಬಿಡುಗಡೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಪರಿಷ್ಕರಿಸಿದೆ. ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚೇತರಿಸಿಕೊಂಡು ಮನೆಗೆ ಹೋದವರು ಕಡ್ಡಾಯವಾಗಿ 14 ದಿನಗಳು ಮನೆ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಸೂಚಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು