ಧಾರಾಕಾರ ಮಳೆ: ತುಂಗಾ, ಭದ್ರಾ, ನೇತ್ರಾವತಿ, ಫಲ್ಗುಣಿ ನದಿ ಹರಿವು ಏರಿಕೆ

ಹುಬ್ಬಳ್ಳಿ/ಶಿವಮೊಗ್ಗ/ಮಂಗಳೂರು: ಉತ್ತರ ಕರ್ನಾಟಕ, ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದೆ. ಶಿರಸಿ ತಾಲ್ಲೂಕಿನ ಮುಂಡಿಗೆಹಳ್ಳಿಯಲ್ಲಿ ಗೋಡೆ ಬಿದ್ದು ಯಶೋದಾ ಬಂಗಾರ್ಯ ಗೌಡ (31) ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ಅಲ್ಲಲ್ಲಿ ಮನೆಗಳ ಚಾವಣಿ ಕುಸಿದಿದ್ದು, ಹಲವೆಡೆ ಮರಗಳು ಉರುಳಿವೆ. ಅಂಕೋಲಾದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ ಬೈಲಹೊಂಗಲ, ಹಿರೇಬಾಗೇವಾಡಿ, ಸವದತ್ತಿ, ಎಂ.ಕೆ. ಹುಬ್ಬಳ್ಳಿ ಭಾಗದಲ್ಲೂ ಮಳೆಯಾಯಿತು. ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಲ್ಲೂ ಮಳೆಯಾಗಿದೆ.
ನೇತ್ರಾವತಿ, ಫಲ್ಗುಣಿ ನದಿ ಹರಿವು ಏರಿಕೆ: ಕರಾವಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದೆ. ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಫಲ್ಗುಣಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಮಂಗಳೂರು ನಗರ ಮತ್ತು ಹೊರವಲಯದ ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ. ನಾಲ್ಕು ಮನೆಗಳಿಗೆ ಭಾಗಶಃ, ಒಂದು ಮನೆಗೆ ಸಂಪೂರ್ಣ ಹಾನಿಯಾಗಿದೆ. ನಗರದ ಜೆಪ್ಪಿನಮೊಗರು ಬಳಿ ಮನೆಗೆ ನೀರು ನುಗ್ಗಿದೆ. ಉಡುಪಿ ತಾಲ್ಲೂಕಿನ ಉದ್ಯಾವರದಲ್ಲಿ ಮೂರು, ಬ್ರಹ್ಮಾವರ ತಾಲ್ಲೂಕಿನ ವಡ್ಡರ್ಸೆಯಲ್ಲಿ 3 ಸೇರಿದ್ದು, ವಿವಿಧೆಡೆ ಸುಮಾರು 15 ಮನೆಗಳು ಭಾಗಶಃ ಕುಸಿದಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಗಾ, ಭದ್ರಾ ನದಿಗಳಲ್ಲಿಯೂ ನೀರಿನ ಹರಿವು ಜಾಸ್ತಿಯಾಗಿದೆ. ಕಳಸ, ಕೊಪ್ಪ, ಶೃಂಗೇರಿ ಸುತ್ತಮುತ್ತ ಜೋರು ಮಳೆಯಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ, ಮೂಡಿಗೆರೆಯಲ್ಲಿ ಸಾಧಾರಣ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹಲವೆಡೆ ಬೆಳಿಗ್ಗೆಯಿಂದಲೇ ಮಳೆ ಸುರಿಯಿತು. ಹೊಸನಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಶಿವಮೊಗ್ಗ ತಾಲ್ಲೂಕಿನಲ್ಲಿ ಮಳೆಯಾಗಿದೆ. ದಾವಣಗೆರೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಜಿಲ್ಲೆಯ ಹರಿಹರ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಸಂತೇಬೆನ್ನೂರು, ಸಾಸ್ವೇಹಳ್ಳಿಗಳಲ್ಲಿ ಜಿಟಿಜಿಟಿ ಮಳೆ ಸುರಿದಿದೆ.
ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ದಿನವಿಡೀ ಸೋನೆ ಮಳೆ ಸುರಿದಿದೆ.
ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ನಾಪೋಕ್ಲು, ಕಕ್ಕಬ್ಬೆ, ಕುಂಜಿಲ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ. ಜಿಲ್ಲೆಯಲ್ಲಿ ಭತ್ತದ ನಾಟಿ ಕಾರ್ಯ ಚುರುಕಾಗಿದೆ.
ಹಾಸನ ಜಿಲ್ಲೆಯಲ್ಲಿ ಹೆತ್ತೂರು, ಸಕಲೇಶಪುರ, ಹೊಳೆನರಸೀಪುರದಲ್ಲಿ ಸಾಧಾರಣ ಮಳೆ ಸುರಿದಿದೆ. ಮೈಸೂರು ನಗರದಲ್ಲಿ ತುಂತುರು ಮಳೆಯಾಯಿತು.
ಬಿರುಸಿನ ಮಳೆ (ಕಲಬುರ್ಗಿ ವರದಿ): ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕೆಲ ಹೊತ್ತು ಬಿರುಸಿನ ಮಳೆಯಾಗಿದೆ.
ಕಲಬುರ್ಗಿ ನಗರ, ಸೇಡಂ, ಕಾಳಗಿ, ಚಿತ್ತಾಪುರ, ಆಳಂದ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಉತ್ತಮ ಮಳೆಯಾಯಿತು.
ರಾಯಚೂರು ಜಿಲ್ಲೆಯ ಕವಿತಾಳ, ಮಾನ್ವಿ, ದೇವದುರ್ಗ, ಲಿಂಗಸುಗೂರು, ಸಿಂಧನೂರು, ಮಸ್ಕಿ, ಹಾಗೂ ಸಿರವಾರ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದಲೂ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ವಿವಿಧೆದೆ ಜಿಟಿಜಿಟಿ ಮಳೆಯಾಗಿದೆ.
ಗರಿಷ್ಠ ಮಳೆ (ಸೆ.ಮೀ.ಗಳಲ್ಲಿ)
ಗೋಳಿಹೊಳೆ (ಉಡುಪಿ);16.2
ಕೊಕ್ಕಡ (ದಕ್ಷಿಣ ಕನ್ನಡ);10
ಕಿಗ್ಗಾ (ಚಿಕ್ಕಮಗಳೂರು)5.6
ಅಂಕೋಲಾ;6.2
ಕಾರವಾರ;5.8
ಹೊನ್ನಾವರ;5.7
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.