ಗುರುವಾರ , ಸೆಪ್ಟೆಂಬರ್ 23, 2021
24 °C

ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆಯೇ?: ಸಿ.ಟಿ.ರವಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಕಾಂಗ್ರೆಸ್‌ನವರು ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1989- 94, 1999-2006, 2013ರಿಂದ 2017ರ ನಡುವೆ ಕಾಂಗ್ರೆಸ್ ಸರ್ಕಾರ ಇದ್ದರೂ ಯಾಕೆ ಇಂದಿರಾ ಕ್ಯಾಂಟೀನ್ ತೆರೆದಿಲ್ಲ ಎಂದು ಪ್ರಶ್ನಿಸಿದರು. ಇಂದಿರಾ ಗಾಂಧಿ ಅವರ ಎಲ್ಲ ನಿರ್ಧಾರಗಳನ್ನು ವಿರೋಧಿಸುವ ಪೂರ್ವಗ್ರಹ ಪೀಡಿತ ಮನಸ್ಥಿತಿ ನಮ್ಮದಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ. ಸ್ವಾತಂತ್ರ್ಯ ಲಭಿಸಲು ಅವರು ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಮೂರ್ಖರು ಮತ್ತು ಗುಲಾಮರು ಮಾತ್ರ ಒಪ್ಪಿಕೊಳ್ಳುತ್ತಾರೆ. ಆದರೆ, ನಾವು ಮೂರ್ಖರು ಮತ್ತು ಗುಲಾಮರಲ್ಲ’ ಎಂದು ನುಡಿದರು.

217 ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ ಎಂದು ಕೇಳಿದ ಅವರು, ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ, ದುರ್ಭಿಕ್ಷ ಬಂದಾಗ ಅನ್ನ ಕೊಡುವ ತಾಯಿ ಅವಳು. ಅದಕ್ಕೇ ಅನ್ನಪೂರ್ಣೇಶ್ವರಿ ಹೆಸರು ಇಡಲು ಹೇಳಿದ್ದೇನೆ. ನಾನೇನಾದರೂ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಹೆಸರು ಇಡಲು ಹೇಳಿದರೆ ಅದು ರಾಜಕಾರಣ ಆಗುತ್ತಿತ್ತು ಎಂದರು.

ಬಡವರಿಗೆ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಅನ್ನ ಕೊಟ್ಟರೇನು? ಇಂದಿರಾ ಹೆಸರಲ್ಲಿ ಅನ್ನ ಕೊಟ್ಟರೇನು? ಜನರ ತೆರಿಗೆಯಿಂದ ಅನ್ನ ಕೊಡುವುದಲ್ಲವೇ ಎಂದರು. ಕಾಂಗ್ರೆಸ್ ಕಾರ್ಯಾಲಯದಲ್ಲಿ ನೆಹರೂ ಅಥವಾ ಇಂದಿರಾ ಹೆಸರಿನಲ್ಲಿ ಕ್ಯಾಂಟೀನ್ ತೆರೆದರೆ ನಮ್ಮ ಅಡ್ಡಿ ಇಲ್ಲ ಎಂದು ತಿಳಿಸಿದರು. ಅನ್ನಪೂರ್ಣೇಶ್ವರಿ ಹೆಸರು ಸಲಹೆ ಮಾತ್ರ. ಆ ಕುರಿತು ಚರ್ಚೆ ನಡೆಯಲಿ ಎಂದು ತಿಳಿಸಿದರು.

ಇದನ್ನೂ ಓದಿ... ಸೆಪ್ಟೆಂಬರ್‌ನಲ್ಲಿ 1ರಿಂದ 8ನೇ ತರಗತಿ ಆರಂಭಿಸಲು ತೀರ್ಮಾನ: ಬಿ.ಸಿ.ನಾಗೇಶ್‌

‘ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜಕೀಯ ಬೇಡ’
ಮೇಕೆದಾಟು ಯೋಜನೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು. ರಾಜಕೀಯವಾಗಿ ಯಾವುದೇ ಪಕ್ಷ ಇದರ ದುರ್ಬಳಕೆ ಮಾಡಬಾರದು. ಎರಡು ದೇಶಗಳ ನೀರಿನ ಹಂಚಿಕೆ ಸುಗಮವಾಗಿ ನಡೆಯುತ್ತದೆ. ಎರಡು ರಾಜ್ಯಗಳ ನಡುವಿನ ನೀರಿನ ಹಂಚಿಕೆ, ಅದರಲ್ಲೂ ಕುಡಿಯುವ ನೀರಿನ ಹಂಚಿಕೆಯ ಸಮಸ್ಯೆ ಪರಿಹಾರ ಕಷ್ಟವೇನಲ್ಲ ಎಂದು ಸಿ.ಟಿ.ರವಿ ತಿಳಿಸಿದರು.

‘ಕರ್ನಾಟಕದ ಹೊರಗಿನಿಂದ ಬಂದ ಶೇ 72ರಷ್ಟು ಜನ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶೇ 70ಕ್ಕಿಂತ ಹೆಚ್ಚು ಜನ ಮಹಾರಾಷ್ಟ್ರದಿಂದ ಹೊರಗಿನವರು ಮುಂಬೈಯಲ್ಲೂ ವಾಸವಿದ್ದಾರೆ. ಚೆನ್ನೈಯಲ್ಲಿ ಶೇ 50ಕ್ಕೂ ಹೆಚ್ಚು ಹೊರರಾಜ್ಯಗಳ ಜನರು ನೆಲೆಸಿದ್ದಾರೆ. ಕುಡಿಯುವ ನೀರಿನ ವಿಚಾರವನ್ನು ಎರಡು ರಾಜ್ಯಗಳ ನಡುವಿನ ಸಂಘರ್ಷ ಎಂಬಂತೆ ಭಾವನಾತ್ಮಕವಾಗಿ ನೋಡಬಾರದು. ಅದನ್ನು ವಾಸ್ತವಿಕ ನೆಲೆಯಲ್ಲಿ ನೋಡಬೇಕು’ ಎಂದು ಅಭಿಪ್ರಾಯಪಟ್ಟರು.

ಕುಡಿಯುವ ನೀರು ಎಲ್ಲರಿಗೂ ಅವಶ್ಯಕ. ಈ ವಿಷಯದಲ್ಲಿ ರಾಜಕಾರಣ ಸಲ್ಲದು. ಬೆಂಗಳೂರಿನಲ್ಲಿ ಶೇ 15ರಿಂದ 16 ಮಂದಿ ತಮಿಳುನಾಡಿನಿಂದ ಬಂದವರು ಇದ್ದಾರೆ. ಅವರಿಗೆ ಕುಡಿಯುವ ನೀರು ಕೊಡುವುದಿಲ್ಲ ಎನ್ನಲಾದೀತೇ ಎಂದು ಅವರು ಪ್ರಶ್ನಿಸಿದರು. ಈ ನೆಲೆಗಟ್ಟಿನಲ್ಲಿ ವಿಷಯ ಮನವರಿಕೆ ಮಾಡಬೇಕು ಎಂದು ಆಶಿಸಿದರು. ಕುಡಿಯುವ ನೀರಿನ ವಿಚಾರದಲ್ಲಿ ಬೆಂಕಿ ಹಚ್ಚುವ ರಾಜಕಾರಣಕ್ಕೆ ಅವಕಾಶವಿಲ್ಲ. ಇದು ಸೌಹಾರ್ದಯುತವಾಗಿ ಬಗೆಹರಿಯಬೇಕಾದ ವಿಚಾರ ಎಂದು ಹೇಳಿದರು.

ಕಾವೇರಿ ನೀರಿನ ಹಂಚಿಕೆಗೆ ಸಂಬಂಧಿಸಿ ಹಲವು ತೀರ್ಪುಗಳು ಬಂದಿವೆ. ಆ ತೀರ್ಪಿನ ವ್ಯಾಪ್ತಿಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ ಪಾಲನ್ನು ಉಪಯೋಗಿಸಲು ಯಾವುದೇ ಅಡ್ಡಿ ಇಲ್ಲ. ಆ ತೀರ್ಪನ್ನು ಮೀರಿದರೆ ವ್ಯಾಜ್ಯ ಆಗುತ್ತದೆ. ಕರ್ನಾಟಕವು ತೀರ್ಪಿನನ್ವಯ ಯೋಜನೆ ರೂಪಿಸಿದರೆ ಅದರಿಂದ ಏನೂ ಸಮಸ್ಯೆ ಆಗಲಾರದು. ಈ ಮಾತನ್ನು ತಮಿಳುನಾಡಿನಲ್ಲೂ ಹೇಳುತ್ತೇನೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು