ತಂದೆಗೆ ಲಸಿಕೆ ಕೊಡಿಸಿದ ಕಲಬುರ್ಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ

ಕಲಬುರ್ಗಿ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಶುಕ್ರವಾರ ಇಲ್ಲಿನ ಜಿಮ್ಸ್ ಲಸಿಕಾ ಕೇಂದ್ರದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು. ಅಲ್ಲದೇ ತಮ್ಮ ತಂದೆಗೂ ಮೊದಲ ಡೋಸ್ ಕೊಡಿಸುವ ಮೂಲಕ ಪ್ರೇರಣೆ ನೀಡಿದರು.
ಫೆಬ್ರುವರಿ 8ರಂದು ಮೊದಲ ಡೋಸ್ ಪಡೆದಿದ್ದ ಜಿಲ್ಲಾಧಿಕಾರಿ ನಾಲ್ಕು ವಾರಗಳ ನಂತರ ಎರಡನೇ ಡೋಸ್ ಪಡೆದು ತಮ್ಮ ಕೋವಿಡ್ ವ್ಯಾಕ್ಸಿನ್ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದರು.
ನಂತರ ಮಾತನಾಡಿದ ಜ್ಯೋತ್ಸ್ನಾ, ‘60 ವರ್ಷ ಮೇಲ್ಪಟ್ಟವರಿಗೆ ಮತ್ತು ದೀರ್ಘ ಕಾಯಿಲೆಯಿಂದ ಬಳಲುತ್ತಿರುವ 45 ರಿಂದ 59 ವರ್ಷದೊಳಗಿನವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅದರಂತೆ ನಾನು ನನ್ನ ತಂದೆಯವರಿಗೆ ಕೋವಿಡ್ ಲಸಿಕೆ ಕೊಡಿಸಿದ್ದು, ನನಗೆ ಸಂತಸ ತಂದಿದೆ. ನಾನು ಚಿಕ್ಕವಳಿದ್ದಾಗ ನನ್ನ ತಂದೆಯವರು ನನಗೆ ಬಿಸಿಜಿ ಲಸಿಕೆ ಕೊಡಿಸಿದ್ದು ನೆನಪಿಸಿಕೊಂಡೆ. ಪಾಲಕರಿಗೆ ಕೋವಿಡ್ ಲಸಿಕೆ ಕೊಡಿಸುವಲ್ಲಿ ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
‘ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆಯಬಹುದು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತವಾಗಿ ಪ್ರತಿಯೊಬ್ಬರು ತಮ್ಮ ತಂದೆ-ತಾಯಿ ಹಾಗೂ ಮನೆಯಲ್ಲಿರುವ ಹಿರಿಯರಿಗೆ ಕೋವಿಡ್ ಲಸಿಕೆ ಕೊಡಿಸಲು ಮುಂದಾಗಬೇಕು. ಬಾಲ್ಯದಲ್ಲಿ ವಿವಿಧ ರೋಗಗಳಿಂದ ನಿಮ್ಮನ್ನು ಕಾಪಾಡಲು ಪಾಲಕರು ನಿಮಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಈಗ ನೀವು ಅವರ ಬಗ್ಗೆ ಕಾಳಜಿ ವಹಿಸುವ ಸಮಯ ಬಂದಿದೆ. ಪ್ರತಿಯೊಬ್ಬರೂ ಹಿರಿಯರ ಸುರಕ್ಷತೆಗೆ ಗಮನ ಕೊಡಬೇಕು’ ಎಂದರು.
ಲಸಿಕೆ ಪಡೆದ ಜಿಲ್ಲಾಧಿಕಾರಿ ಜ್ಯೋತ್ಸ್ನಾ ಅವರ ತಂದೆ 72 ವರ್ಷದ ಜೋಷಿ ಅವರು ಮಾತನಾಡಿ, ‘ಲಸಿಕೆ ಸುರಕ್ಷಿತವಾಗಿದ್ದು 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪಡೆಯುವ ಅವಶ್ಯತೆ ಇದೆ. ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಿರಿ’ ಎಂದರು.
ಲಸಿಕೆ ಪಡೆದ ನಂತರ ಜಿಲ್ಲಾಧಿಕಾರಿ ಹಾಗೂ ಅವರ ತಂದೆ ಲಸಿಕಾ ಕೇಂದ್ರದಲ್ಲಿ ಅರ್ಧ ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿ ಇದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ ಸೇರಿದಂತೆ ನರ್ಸಿಂಗ್ ಸಿಬ್ಬಂದಿ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.