ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಿಕ್ಷಣಕ್ಕಾಗಿ ರಾಜ್ಯದತ್ತ ಮುಖ ಮಾಡುವ ಹೊರನಾಡ ಕನ್ನಡಿಗ ವಿದ್ಯಾರ್ಥಿಗಳು

ಗಡಿ ವಿವಾದ ಎದ್ದಾಗ ಬಸ್‌ ಸಂಚಾರ ಬಂದ್‌
Last Updated 27 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕದಲ್ಲಿ ಕನ್ನಡದೊಂದಿಗೆ ಮರಾಠಿ ಮಾಧ್ಯಮ ಶಾಲೆಗಳಿಗೂ ಸರ್ಕಾರ ಸಮಾನ ಸೌಲಭ್ಯ ಕಲ್ಪಿಸುತ್ತಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಈ ವಿಚಾರದಲ್ಲಿ ಇಬ್ಬಗೆ ನೀತಿ ಅನುಸರಿಸುತ್ತಿದೆ.

ರಾಜ್ಯದ ಗಡಿಯಿಂದ ಐದೇ ಕಿ.ಮೀ. ಅಂತರದಲ್ಲಿ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣವಿದೆ. ಉದ್ಯೋಗ ಅರಸಿ ಹೋಗಿ, ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ನೆಲೆಸಿದ್ದಾರೆ. ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ತೆರೆಯಲಾಗಿದೆ. ಆದರೆ, ಪ್ರೌಢಶಿಕ್ಷಣಕ್ಕಾಗಿ ಹೊರನಾಡ ಕನ್ನಡಿಗರ ಮಕ್ಕಳು ಕರ್ನಾಟಕದತ್ತಲೇ ಮುಖಮಾಡುವುದು ಅನಿವಾರ್ಯವಾಗಿದೆ.

13 ಕಿ.ಮೀ ಪ್ರಯಾಣ: ‘ನಾವೂ 1ರಿಂದ 7ನೇ ತರಗತಿಯವರೆಗೆ ಇಚಲಕರಂಜಿಯಲ್ಲೇ ಓದುತ್ತೇವೆ. ಮುಂದೆ 8ರಿಂದ 10ನೇ ತರಗತಿಗಾಗಿ ನಿತ್ಯ 13 ಕಿ.ಮೀ. ಕ್ರಮಿಸಿ, ನಿಪ್ಪಾಣಿ ತಾಲ್ಲೂಕಿನ ಬೋರಗಾಂವಕ್ಕೆ ಹೋಗುತ್ತಿದ್ದೇವೆ. ಗಡಿ ವಿವಾದದಿಂದಾಗಿ ಶನಿವಾರ ಉಭಯ ರಾಜ್ಯಗಳ ಮಧ್ಯೆ ಬಸ್‌ ಸಂಚಾರ ಸ್ಥಗಿತಗೊಂಡು ತರಗತಿಗೆ ಹೋಗಲಾಗಲಿಲ್ಲ. ಇಂಥ ಸಮಸ್ಯೆ ಆಗಾಗ ತಲೆದೋರುತ್ತಲೇ ಇವೆ. ನಿಯಮಿತವಾಗಿ ಶಾಲೆಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ. ನಮ್ಮೂರಿನಲ್ಲೇ ಪ್ರೌಢಶಾಲೆ ಆರಂಭಿಸಿದರೆ ಅನುಕೂಲ’ ಎಂದು ವಿದ್ಯಾರ್ಥಿಗಳಾದ ಓಂಕಾರ ಪಾಟೀಲ, ಮಹೇಶ ಮುತ್ನಾಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಾವು ಮೂಲತಃ ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯವರು. ಉದ್ಯೋಗಕ್ಕಾಗಿ ಇಲ್ಲಿ ಬಂದು ನೆಲೆಸಿದ್ದೇವೆ. ನನ್ನ ಮಗ ಎಸ್ಸೆಸ್ಸೆಲ್ಸಿ ವ್ಯಾಸಂಗಕ್ಕಾಗಿ ಬೋರಗಾಂವಗೆ ಹೋಗುತ್ತಾನೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಪ್ರಯಾಣದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾನೆ. ಇದರಿಂದ ಕಲಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಹಾರಾಷ್ಟ್ರ ಸರ್ಕಾರ ಇಚಲಕರಂಜಿಯಲ್ಲೇ ಕನ್ನಡ ಮಾಧ್ಯಮ ಪ್ರೌಢಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ರಾಮಗೌಡ ಪಾಟೀಲ.

40 ಮಕ್ಕಳು: ‘ನಮ್ಮ ಶಾಲೆ ಗಡಿ ಭಾಗದಲ್ಲಿದೆ. ಇಲ್ಲಿ ಪ್ರೌಢಶಿಕ್ಷಣ ಪಡೆಯಲು ಮಹಾರಾಷ್ಟ್ರದ ಇಚಲಕರಂಜಿಯಿಂದ 35 ಮಕ್ಕಳು, ಉಪರಿಯಿಂದ ಇಬ್ಬರು, ಕುರಂದವಾಡದಿಂದ ಮೂವರು ಮಕ್ಕಳು ಬರುತ್ತಾರೆ’ ಎಂದು ಕೆ.ಎಸ್‌.ಪಾಟೀಲ ಪ್ರೌಢಶಾಲೆ ಮುಖ್ಯಶಿಕ್ಷಕ ಎ.ಎ.ಧೂಳಸಾವಂತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT