ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಗಾಂಧಿ ಹೆಸರಿನ ಕಾರಣಕ್ಕೆ ಕ್ಯಾಂಟೀನ್ ಬಂದ್ ಮಾಡಲಾಗುತ್ತಿದೆ: ಸಿದ್ದರಾಮಯ್ಯ

Last Updated 15 ಮಾರ್ಚ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾ ಗಾಂಧಿ ಅವರ ಹೆಸರಿದೆ ಎನ್ನುವ ಏಕೈಕ ಕಾರಣಕ್ಕೆ ಎಲ್ಲಾ ಕ್ಯಾಂಟೀನ್‌ಗಳನ್ನೇ ಬಂದ್ ಮಾಡುತ್ತಿರುವುದು ಅಕ್ಷಮ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇಂದಿರಾ ಕ್ಯಾಂಟೀನ್ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಈಗಾಗಲೇ 50ಕ್ಕೂ ಹೆಚ್ಚು ಕ್ಯಾಂಟೀನ್‌ ಗಳನ್ನು ಗಿರಾಕಿಗಳಿಲ್ಲ ಎನ್ನುವ ಕಾರಣ ನೀಡಿ ಮುಚ್ಚಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 35 ಕ್ಯಾಂಟೀನ್‌ಗಳನ್ನು ಮುಚ್ಚಲು ನಿರ್ಧರಿಸಿರುವುದು ಅಕ್ಷಮ್ಯ’ ಎಂದು ಹೇಳಿದ್ದಾರೆ.

‘ಇಂದಿರಾ ಕ್ಯಾಂಟೀನ್‌ಗಳನ್ನು ಮೊದಲ ದಿನದಿಂದಲೇ ವಿರೋಧಿಸುತ್ತ ಬಂದಿದ್ದ ಬಿಜೆಪಿ ಸರ್ಕಾರ ಈಗ ಅವುಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿರುವುದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ರಾಕ್ಷಸಿ ಕೃತ್ಯ. ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾದೀತು’ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
‘ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಬೇರೆ ಊರುಗಳಿಂದ ನಗರ-ಪಟ್ಟಣಕ್ಕೆ ಬಂದವರ ಹಸಿದ ಹೊಟ್ಟೆ ತಣಿಸಲು ನಮ್ಮ ಸರ್ಕಾರ ರಾಜ್ಯದಾದ್ಯಂತ 400 ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಿತ್ತು. ಜನರಿಗೆ ಕೈಗೆಟಕುವ ದರದಲ್ಲಿ ಇವು ಮೂರು ಹೊತ್ತು ಆಹಾರ ನೀಡುತ್ತಿದ್ದವು’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 195 ಕ್ಯಾಂಟೀನ್ ಪ್ರಾರಂಭಿಸಿದ್ದೆವು. ಇದರ ಜೊತೆಗೆ 25 ಮೊಬೈಲ್ ಕ್ಯಾಂಟೀನ್‌ಗಳನ್ನೂ ತೆರೆಯಲಾಗಿತ್ತು. 2017-18ರ ಬಜೆಟ್‌ನಲ್ಲಿಯೇ ಇದಕ್ಕಾಗಿ ₹145 ಕೋಟಿ ಒದಗಿಸಿದ್ದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಇಂಥಾ ಜನಪರ ಕಾರ್ಯಕ್ರಮದ ತಲೆಯ ಮೇಲೆ ಚಪ್ಪಡಿ ಎಳೆಯುವ ದುಷ್ಟಬುದ್ದಿ ನಿಮಗೆ ಯಾಕೆ ಬಂತು’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಕಳಪೆ ಗುಣಮಟ್ಟದ ಆಹಾರ ನೀಡಿ, ಸ್ವಚ್ಚತೆಯನ್ನು ಕಾಪಾಡದೆ ಗಲೀಜು ಮಾಡಿ, ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು, ಹೀಗೆ ನಾನಾ ರೀತಿಯ ಹುನ್ನಾರದ ಮೂಲಕ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲಾಗುತ್ತಿದೆ. ಬಿಜೆಪಿಗೆ ಬಡವರನ್ನು ಕಂಡರೆ ಯಾಕಿಷ್ಟು ಹೊಟ್ಟೆಯುರಿ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ನಮ್ಮ ಕಾಲದ ಕ್ಯಾಂಟೀನ್‌ಗಳ ಆಹಾರದ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ನೋಡಿ ಬಡವರು ಮಾತ್ರವಲ್ಲ, ಶ್ರೀಮಂತರು ಕೂಡಾ ಕ್ಯಾಂಟೀನ್‌ಗೆ ಬರುತ್ತಿದ್ದರು. ಈಗ ಬಡವರನ್ನು ಕೂಡಾ ಕ್ಯಾಂಟೀನ್‌ಗಳಿಂದ ದೂರ ಓಡಿಸಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

‘ತಮಿಳುನಾಡಿನಲ್ಲಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ಅಮ್ಮ ಕ್ಯಾಂಟೀನ್‌ಗಳನ್ನು ಸ್ಥಾಪಿಸಿದ್ದರು. ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಕ್ಯಾಂಟೀನ್‌ಗಳನ್ನು ಇನ್ನಷ್ಟು ಸುಧಾರಿಸಿ ವಿಸ್ತರಿಸಲಾಗುತ್ತಿದೆ. ಆದರೆ ಇಲ್ಲಿನ ಬಿಜೆಪಿ ಸರ್ಕಾರ ಅವುಗಳು ಕಾಂಗ್ರೆಸ್‌ನ ಯೋಜನೆ ಎನ್ನುವ ಕಾರಣಕ್ಕೆ ಮುಚ್ಚುತ್ತಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಜಿಲ್ಲಾ ಕೇಂದ್ರಗಳಲ್ಲಿ ಮೂರು ಮತ್ತು ಪ್ರತಿ ತಾಲೂಕು ಕೇಂದ್ರದಲ್ಲಿ ಒಂದು ಹೀಗೆ 300ಕ್ಕಿಂತಲೂ ಹೆಚ್ಚು ‘ಮುಖ್ಯಮಂತ್ರಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಹೊಸ ಕ್ಯಾಂಟೀನ್ ತೆರೆಯುವುದು ಬಿಡಿ, ಹಳೆಯ ಕ್ಯಾಂಟೀನ್‌ಗಳನ್ನು ಕೂಡಾ ಮುಚ್ಚಿ ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯಲು ಹೊರಟಿದೆ. ಶೇ 40 ಕಮಿಷನ್ ದಂಧೆಯಲ್ಲಿ ಸಾವಿರಾರು ಕೋಟಿ ಲೂಟಿ ಮಾಡುವವರಿಗೆ ಬಡವರ ಹಸಿವು ನೀಗಿಸಲು ನೂರಿನ್ನೂರು ಕೋಟಿ ಖರ್ಚು ಮಾಡಲಾಗದ್ದು ದುರಂತ’ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT