ಶನಿವಾರ, ಏಪ್ರಿಲ್ 1, 2023
23 °C

ಪ್ರಭು ಚೌಹಾಣ್ ಒಬ್ಬ ಪೆದ್ದ, ಮೇಕೆ –ದನಗಳಿಗೆ ವ್ಯತ್ಯಾಸ ಗೊತ್ತಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಒಬ್ಬ ಪೆದ್ದ, ಆತನಿಗೆ ಮೇಕೆ –ದನಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಚಿವ ಪ್ರಭು ಚೌಹಾಣ್‌ಗೆ ಕನ್ನಡವೂ ಸೇರಿದಂತೆ ಯಾವ ಭಾಷೆಯೂ ಸರಿಯಾಗಿ ಬರೋದಿಲ್ಲ. ಇಂತಹವರು ಶಾಸಕನಾಗಲು ನಾಲಾಯಕ್’ ಎಂದು ಕಿಡಿಕಾರಿದ್ದಾರೆ. 

ಜನವರಿ 15ರೊಳಗೆ ರಾಜ್ಯದ ಎಲ್ಲಾ ಜಾನುವಾರುಗಳಿಗೆ ಚರ್ಮಗಂಟು ರೋಗಕ್ಕೆ ಲಸಿಕೆ ಹಾಕಿಸುತ್ತೇವೆ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದರು, ಆದರೆ ಇನ್ನೂ 10 ರಿಂದ 15 ಲಕ್ಷ ಜಾನುವಾರಿಗಳಿಗೆ ಲಸಿಕೆ ಹಾಕಿಲ್ಲ. ಇಂಥಾ ಹಸಿ ಸುಳ್ಳು ಹೇಳೋರು ಶಾಸಕರಾಗಲು ಅನರ್ಹರು ಎಂದಿದ್ದಾರೆ. 

ಓದಿ... ಕಾಂಗ್ರೆಸ್‌ನ ತಪ್ಪು ನಿರ್ಧಾರಗಳಿಗೆ ಅಡಿಪಾಯ ಹಾಕಿದವರು ನೆಹರೂ: ಬಿಜೆಪಿ ಟೀಕೆ

ಸಚಿವ ಪ್ರಭು ಚೌಹಾಣ್ ಸದನದಲ್ಲಿ ನೀಡಿದ್ದ ಉತ್ತರದಲ್ಲಿ 15 ಲಕ್ಷ ಜಾನುವಾರುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇತ್ತು, ಇಷ್ಟು ಜಾನುವಾರುಗಳನ್ನು ನೀನೇ ತಿಂದ್ಯನಪ್ಪಾ ಎಂದು ಕೇಳಿದ್ದೆ. ತಪ್ಪು ಉತ್ತರ ನೀಡಿದ್ದರೂ ಪೆದ್ದ ಎನ್ನುವ ಕಾರಣಕ್ಕೆ ಹಕ್ಕುಚ್ಯುತಿ ಮಂಡಿಸಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಇಂತಹ ಅನರ್ಹರೇ ಸಚಿವರು ಎಂದು ಲೇವಡಿ ಮಾಡಿದ್ದಾರೆ. 

ರಾಜ್ಯ ಬಿಜೆಪಿ ಸರ್ಕಾರ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿದ್ದಲ್ಲ, 113 ಸ್ಥಾನಗಳಲ್ಲಿ ಗೆದ್ದರೆ ಮಾತ್ರ  ಜನಾಶೀರ್ವಾದ ಇದೆ ಎಂದರ್ಥ. ಬಿಜೆಪಿ 104, ಜೆಡಿಎಸ್‌ 37 ಮತ್ತು ಕಾಂಗ್ರೆಸ್‌ 80 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್‌ ಪಕ್ಷ ಶೇ. 38.18ರಷ್ಟು ಮತ, ಬಿಜೆಪಿ ಶೇ 36.42ರಷ್ಟು ಮತಗಳನ್ನು ಪಡೆದಿತ್ತು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದೆಂಬ ಕಾರಣಕ್ಕೆ ನಾವು ಜೆಡಿಎಸ್ ಪಕ್ಷಕ್ಕೆ  ಬೆಂಬಲ ನೀಡಿದ್ದೆವು. ಸಮ್ಮಿಶ್ರ ಸರ್ಕಾರವನ್ನು ಕುಮಾರಸ್ವಾಮಿ ಅವರಿಂದ ಉಳಿಸಿಕೊಳ್ಳಲಾಗಲಿಲ್ಲ. ಅವರು ವೆಸ್ಟೆಂಡ್‌ ಹೋಟೆಲ್‌ನಲ್ಲಿ ಉಳಿದುಕೊಂಡು ಶಾಸಕರು, ಸಚಿವರ ಭೇಟಿಗೆ ಅವಕಾಶ ನೀಡದೆ ನಿರ್ಲಕ್ಷ್ಯ ಮಾಡಿ ಅಧಿಕಾರ ಕಳೆದುಕೊಂಡರು ಎಂದು ಸಿದ್ದು ಗುಡುಗಿದ್ದಾರೆ. 

ಅಲ್ಲಮಪ್ರಭು ಅವರು ಹೇಳಿದಂತೆ ‘ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ’. ಕುಮಾರಸ್ವಾಮಿಯವರಿಗೆ ಕೊಟ್ಟ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ತಮ್ಮ ತಪ್ಪಿಗೆ ಉಳಿದವರನ್ನು ದೂರಿ ಏನು ಫಲ? ಎಂದು ಪ್ರಶ್ನಿಸಿದ್ದಾರೆ. 

‘ನಾಯಿ ಕಾದಿತ್ತು, ಅನ್ನ ಹಳಸಿತ್ತು’ ಎಂಬ ಗಾಧೆ ಮಾತಿನಂತೆ ಈ ಸಂದರ್ಭವನ್ನು ಕಾಯುತ್ತಿದ್ದ ಬಿಜೆಪಿ ನಾಯಕರು ಒಬ್ಬೊಬ್ಬ ಶಾಸಕರಿಗೆ ₹15 ರಿಂದ ₹20 ಕೋಟಿ ಹಣ ನೀಡಿ ಖರೀದಿಸಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆಪರೇಷನ್‌ ಕಮಲದ ಮೂಲಕ ಸರ್ಕಾರ ರಚನೆ ಮಾಡಿದರು ಎಂದಿದ್ದಾರೆ. 

2013ರಲ್ಲಿ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿ, ಅದರ ಜೊತೆಗೆ 30 ಹೊಸ ಕಾರ್ಯಕ್ರಮಗಳನ್ನು ಕೂಡ ಜಾರಿ ಮಾಡಿದ್ದೆವು. ಇದು ಬಸವಾದಿ ಶರಣರ ಕರ್ಮಭೂಮಿ, ನಾವು ಕೂಡ ಬಸವಾದಿ ಶರಣರ ಹಾಗೆ ನುಡಿದಂತೆ ನಡೆದಿದ್ದೇವೆ. ಬಿಜೆಪಿ 2018ರಲ್ಲಿ 600 ಭರವಸೆಗಳನ್ನು ನೀಡಿ ಅವುಗಳಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಬೇರೆಯವರ ಧಮ್‌, ತಾಕತ್‌ ಪ್ರಶ್ನೆ ಮಾಡುವ ಸಿಎಂ ಬೊಮ್ಮಾಯಿ ಅವರು ಒಂದೇ ವೇದಿಕೆಯ ಮೇಲೆ ಚುನಾವಣಾ ಪ್ರಣಾಳಿಕೆ ಮತ್ತು ಅವುಗಳ ಈಡೇರಿಕೆ ಬಗ್ಗೆ ಚರ್ಚೆಗೆ ಬರಲಿ. ಸ್ಥಳವನ್ನು ಕೂಡ ಬೊಮ್ಮಾಯಿ ಅವರೇ ನಿಗದಿ ಮಾಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. 

‘ಪೆನ್ನು, ಪೆನ್ಸಿಲ್‌, ಬುಕ್‌, ಮಂಡಕ್ಕಿ, ಮೊಸರಿನ ಮೇಲೆ ಶೇ 18 ತೆರಿಗೆ ಹಾಕಿ ಬಡವರು ಬದುಕದಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ₹2000ದಂತೆ ವರ್ಷಕ್ಕೆ ₹24,000 ಮತ್ತು ಪ್ರತೀ ಮನೆಗೆ ತಿಂಗಳಿಗೆ 200 ಯುನಿಟ್‌ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ತೀರ್ಮಾನ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು, ಆಗಿದೆಯಾ? ಮನಮೋಹನ್‌ ಸಿಂಗ್‌ ಅವರ ಸರ್ಕಾರ ಇದ್ದಾಗ 50 ಕೆ.ಜಿ ಡಿಎಪಿ ಬೆಲೆ ₹450 ಇತ್ತು, ಇಂದು ₹1350ರಿಂದ ₹1400 ಆಗಿದೆ. ಇಂತಹ ಸರ್ಕಾರ ರೈತ ವಿರೋಧಿ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ ಕಾಮಗಾರಿಗೆ ಅನುಮೋದನೆ ನೀಡಲು, ಬಡ್ತಿ, ನೇಮಕಾತಿ, ವರ್ಗಾವಣೆ ಹೀಗೆ ಎಲ್ಲಾ ಕಡೆ ಲಂಚದಿಂದ ತುಂಬಿ ಹೋಗಿದೆ. ನಾನು 12 ವರ್ಷ ಹಣಕಾಸು ಸಚಿವನಾಗಿ ಕೆಲಸ ಮಾಡಿದ್ದೇನೆ. ಎನ್‌ಒಸಿ ಕೊಡಲು ನಾನು 1 ಪೈಸೆ ಲಂಚ ಪಡೆದಿದ್ದೆ ಎಂದು ಯಾರಾದರೂ ಹೇಳಿದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದಿದ್ದಾರೆ. 

ಅತ್ಯಂತ ಕೆಟ್ಟ, ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಲ್ಲಿದೆ. ಇದನ್ನು ನೀವು ಇಷ್ಟು ಕಾಲ ಸಹಿಸಿಕೊಂಡಿದ್ದೀರಿ. ಮುಂದೆ ಮೇ ತಿಂಗಳಿನಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಹಿತ ಕಿತ್ತು, ಕಾಂಗ್ರೆಸ್‌ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸುವ ಕೆಲಸ ರಾಜ್ಯದ ಜನತೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು