ಶನಿವಾರ, ಡಿಸೆಂಬರ್ 3, 2022
28 °C
‘ಕೈ’ ನಾಯಕರ ಒಗ್ಗಟ್ಟಿಗೆ ವೇದಿಕೆಯಾದ ಸಮಾವೇಶ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಹುದ್ದೆಗಳೂ ಭರ್ತಿ: ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇನ್ನು ಕೇವಲ ಆರು ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಎದುರಾಗಲಿದೆ. ಅದಕ್ಕೆ ಸಾಕಷ್ಟು ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್‌ ನಾಯಕರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಭಾನುವಾರ ಆಯೋಜಿಸಿದ್ದ ‘ಸರ್ವೋದಯ ಸಮಾವೇಶ’ವನ್ನೂ ಪಕ್ಷ ಸಂಘಟನೆ, ಚುನಾವಣಾ ಪ್ರಚಾರ, ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯನ್ನಾಗಿ ಬಳಸಿಕೊಂಡರು.‌

ಎಐಸಿಸಿ ಅಧ್ಯಕ್ಷರಾದ ನಂತರ ಖರ್ಗೆ ಇದೇ ಮೊದಲ ಬಾರಿ ರಾಜ್ಯಕ್ಕೆ ಬಂದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ‘ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಎಲ್ಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

‘ಕರ್ನಾಟಕದ ಚುನಾವಣೆ ಪಕ್ಷದ ಪಾಲಿಗೆ ಬಹಳ ಮಹತ್ವದ್ದು. ನನಗೆ ನಿಜವಾದ ಗೌರವ ಸಲ್ಲಬೇಕಾದರೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಬೇಡಿಕೆ ಇಟ್ಟರು. ‌ಆಗ ಕಾರ್ಯಕರ್ತರು ಚಪ್ಪಾಳೆ, ಹರ್ಷೋದ್ಗಾರಗಳ ಮೂಲಕ ಸ್ಪಂದಿಸಿ, ಸಂಭ್ರಮಿಸಿದರು.

‘ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಎಲ್ಲ ನಾಯಕರು ಒಂದಾಗಿ ಕೆಲಸ ಮಾಡಬೇಕು. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ‌ಇನ್ನು ರಾಜ್ಯದಲ್ಲೇ ಹೆಚ್ಚು ಕಾಲ ಇರುತ್ತಾರೆ. ಪಕ್ಷದಲ್ಲಿ ಎಲ್ಲೆಲ್ಲಿ ಬಿರುಕು ಇರುತ್ತೋ ಅದನ್ನು ಮುಚ್ಚಬೇಕು. ಮುನಿಸಿಕೊಂಡಿರುವ ಮತ್ತು ಪಕ್ಷದಿಂದ ದೂರ ಸರಿದಿರುವವರನ್ನು ಜೊತೆಯಲ್ಲಿ ಕರೆದುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇದೆ. ನಮ್ಮನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಹೋದರೆ ಗೆಲುವು ಸಾಧ್ಯವಾಗಲಿದೆ’ ಎಂದು ಪಕ್ಷದ ನಾಯಕರಿಗೆ ಖರ್ಗೆ ಕಿವಿ‌ಮಾತು ಹೇಳಿದರು.

ತಳಮಟ್ಟದಿಂದ ಎಐಸಿಸಿ ಅಧ್ಯಕ್ಷ ಸ್ಥಾನವರೆಗೆ ಬೆಳೆದ ರಾಜಕೀಯ ದಿನಗಳನ್ನು ನೆನಪಿಸಿಕೊಂಡ ಖರ್ಗೆ, ‘ಏಕಾಏಕಿ ಈ ಸ್ಥಾನಕ್ಕೆ ಬಂದಿಲ್ಲ. ಹಂತ ಹಂತವಾಗಿ ಪಕ್ಷದಲ್ಲಿ ಬೆಳೆದು ಬಂದಿದ್ದೇನೆ. ಆದರೆ, ಈಗ ದಿಢೀರ್‌ ಆಗಿ ಶಾಸಕ, ಸಚಿವ, ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಾರೆ. ಸೇವೆ ಮಾಡಬೇಕು, ಗುರಿ ತಲುಪಬೇಕೆಂಬ ಉದ್ದೇಶ ಹೊಂದಿರಬೇಕು. ಆಗ ಮಾತ್ರ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯ. ಪಕ್ಷ ಎಲ್ಲರ ಕೈ ಹಿಡಿಯುತ್ತದೆ. ಕೆಲವರು ನನಗೆ ಅವಕಾಶ ನೀಡಲಿಲ್ಲವೆಂದು ಬೇಸರ ಮಾಡಿಕೊಳ್ಳುತ್ತಾರೆ. ಪಕ್ಷದ ತತ್ವ, ಸಿದ್ಧಾಂತ ನಂಬಿಕೊಂಡು, ಬದ್ಧರಾಗಿ ಕೆಲಸ ಮಾಡಬೇಕು‌. ಪಕ್ಷ ಸಿದ್ಧಾಂತ ನಂಬಿದವರು ಎಂದೂ  ಪಕ್ಷವನ್ನು ಬಿಡುವುದಿಲ್ಲ. ‌ಏನೇ ಬೇಸರ, ನೋವು ಇದ್ದರೂ ಪಕ್ಷಕ್ಕೆ ಧಕ್ಕೆಯಾಗುವ ಕೆಲಸ ಮಾಡಬಾರದು’ ಎಂದು ಸಲಹೆ ನೀಡಿದರು.

‘ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೇ ಕಿರುಕುಳ ಕೊಡುತ್ತಿದ್ದಾರೆ. ಸೋನಿಯಾ ಗಾಂಧಿ ಬಗ್ಗೆ ಮಾತನಾಡುವುದನ್ನು ಅವರು ಬಿಡುತ್ತಿಲ್ಲ. ಅವರಿಗೆ ನಮ್ಮ ಚಿಂತೆ ಯಾಕೆ? ಅವರು ಇಷ್ಟೆಲ್ಲ ಮಾತನಾಡುತ್ತಿದ್ದರೂ ನಮ್ಮ ಯುವಕರು ತುಟಿ ಬಿಚ್ಚುತ್ತಿಲ್ಲ. ಇದು ಯುವಕರಿಗೆ ಯಾಕೆ ಅರ್ಥವಾಗುತ್ತಿಲ್ಲವೋ ನನಗೆ ತಿಳಿಯುತ್ತಿಲ್ಲ’ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದರು.

‘ರಾಜ್ಯ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮನಬಂದಂತೆ ನಡೆದುಕೊಳ್ಳುತ್ತಿವೆ. ಈ‌ ಹಿಂದೆ ಯಾವುದೇ ಸರ್ಕಾರ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ನಾವು (ಕಾಂಗ್ರೆಸ್‌) 70 ವರ್ಷಗಳಲ್ಲಿ ದೇಶದಲ್ಲಿ ಏನೂ ಮಾಡಿಲ್ಲ ಎಂದು ಬಿಜೆಪಿಯವರು ಆರೋಪಿಸುತ್ತಾರೆ. ಕಾಂಗ್ರೆಸ್ ಇಷ್ಟೆಲ್ಲ ಮಾಡದೇ ಇದ್ದಿದ್ದರೆ ದೇಶ ಇಷ್ಟು ಗಟ್ಟಿಯಾಗಿ ಉಳಿಯುತ್ತಿರಲಿಲ್ಲ. ಅಂಬೇಡ್ಕರ್ ಬರೆದಿರುವ ಸಂವಿಧಾನ ಉಳಿಯಬೇಕು. ಎಲ್ಲರೂ ಎದ್ದು ನಿಂತು ಹೋರಾಟ ಮಾಡಬೇಕು. ಹೆದರಿ ಮನೆಯಲ್ಲಿ ಕುಳಿತರೆ ಏನೂ ಪ್ರಯೋಜನ ಇಲ್ಲ’ ಎಂದರು.

ಖರ್ಗೆ ನೀಡಿದ ಎಚ್ಚರಿಕೆಯಂತೆ ನಡೆದುಕೊಳ್ಳುತ್ತೇವೆ: ಸಿದ್ದರಾಮಯ್ಯ
‘ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂತೋಷ ಆಗಬೇಕಾದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕು. ನನ್ನ ಪ್ರಕಾರ, ಭ್ರಷ್ಟ, ದುರಾಡಳಿತದ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕೆಂದು ಜನ ಈಗಾಗಲೇ ಸಂಕಲ್ಪ ಮಾಡಿದ್ದಾರೆ. ಇದರಲ್ಲಿ ಯಾವ ಸಂಶಯವೂ ಬೇಡ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಆದರೆ, ಕರ್ನಾಟಕದಲ್ಲಿ ಕೋಮುವಾದಿ, ಬಡವರ ವಿರೋಧಿ, ರೈತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಸರ್ಕಾರವನ್ನು ಕಿತ್ತುಹಾಕಬೇಕು ಎಂಬುದು ನಮಗಿರುವ ಸವಾಲು’ ಎಂದ ಸಿದ್ದರಾಮಯ್ಯ, ‘ನಾನು ಕಂಡಂತೆ ಕರ್ನಾಟಕದಲ್ಲಿ ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿ ಇದ್ದರೆ ಅದು ಖರ್ಗೆ. ಅವರು ನೀಡಿರುವ ಎಚ್ಚರಿಕೆಯ ಮಾತುಗಳಂತೆ ನಾವು ನಡೆದುಕೊಳ್ಳುತ್ತೇವೆ’ ಎಂದರು.

*
ಖರ್ಗೆ ಅವರು ಜಾತಿ, ಧರ್ಮದ ಮೇಲೆ ನಂಬಿಕೆ ಇಟ್ಟವರಲ್ಲ. ಪರಿಶಿಷ್ಟ ಜಾತಿ ಆಧಾರದ ಮೇಲೆ ಅಧಿಕಾರ ಸಿಗಬೇಕು ಎಂದು ಬಯಸಿದವರಲ್ಲ. ಅವರು ಇಡೀ ರಾಷ್ಟ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಿದ್ದಾರೆ
–ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

*
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೂಡಾ ಒಂದು ದಿನ ಎಐಸಿಸಿ ಅಧ್ಯಕ್ಷ ಆಗಬಹುದು ಎಂಬುದಕ್ಕೆ ಖರ್ಗೆಯವರೇ ಸಾಕ್ಷಿ. ಅವರು ಕೇವಲ ಕಾರ್ಯಕರ್ತರ ಮಾತು ಕೇಳುವುದಿಲ್ಲ. ಅವರ ಪರವಾಗಿ ಕೆಲಸ ಮಾಡುತ್ತಾರೆ
–ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು