ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಅಖಾಡಕ್ಕೆ ರೌಡಿಗಳು: ಬೆನ್ನುಬಿದ್ದ ಪೊಲೀಸರು

ಬೆನ್ನುಬಿದ್ದ ಪೊಲೀಸರು: ಜಿಲ್ಲಾವಾರು ಪಟ್ಟಿಗೆ ತಯಾರಿ
Last Updated 20 ಮಾರ್ಚ್ 2023, 18:44 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಯಲು ರಾಜ್ಯದ ಹಲವು ರೌಡಿಗಳು ತಯಾರಿ ನಡೆಸುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಅಪರಾಧ ಹಿನ್ನೆಲೆಯುಳ್ಳ ಇಂಥ ರೌಡಿಗಳ ಬೆನ್ನು ಬಿದ್ದಿರುವ ಪೊಲೀಸರು, ಜಿಲ್ಲಾವಾರು ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ನೀಡಿದಾಗ, ಬೆಂಗಳೂರಿನ ವೈಯಾಲಿಕಾವಲ್ ಠಾಣೆ ರೌಡಿ ಪಟ್ಟಿಯಲ್ಲಿ ಹೆಸರಿರುವ ಬಿ.ಎಂ. ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿಗೆ ಕೈ ಮುಗಿದಿದ್ದ ಫೋಟೊ ಎಲ್ಲೆಡೆ ಹರಿದಾಡಿತ್ತು. ರೌಡಿಯಾಗಿದ್ದ ಸೈಲೆಂಟ್ ಸುನೀಲ್ ಬಿಜೆಪಿ ಸದಸ್ಯತ್ವ ಪಡೆದಿರುವುದು ಸುದ್ದಿಯಾಗಿತ್ತು.

ಕೆಲ ರೌಡಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳೆಂದು ಸ್ವಯಂ ಘೋಷಿತವಾಗಿ ಹೇಳಿಕೊಂಡು ಪ್ರಚಾರದಲ್ಲಿ ತೊಡಗಿರುವುದು ಚುನಾವಣಾ ಆಯೋಗ ಹಾಗೂ ಪೊಲೀಸರ ಗಮನಕ್ಕೆ ಬಂದಿದೆ.

ಎಲ್ಲ ಬೆಳವಣಿಗೆ ಗಮನಿಸುತ್ತಿರುವ ಆಯೋಗದ ಅಧಿಕಾರಿಗಳು, ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹೇಳಿರುವುದಾಗಿ ಗೊತ್ತಾಗಿದೆ. ಅದರಂತೆ, ರಾಜ್ಯದ ಎಲ್ಲ ಕಮಿಷನರ್ ಹಾಗೂ ಜಿಲ್ಲಾ ಎಸ್ಪಿಗಳಿಗೆ ತುರ್ತು ಸಂದೇಶ ಕಳುಹಿಸಿರುವುದಾಗಿ ಮೂಲಗಳು ಹೇಳಿವೆ.

‘ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಗಳೂರು, ಹುಬ್ಬಳ್ಳಿ– ಧಾರವಾಡ, ಕಲಬುರಗಿ, ಮೈಸೂರು ಹಾಗೂ ಇತರೆಡೆ ಕೆಲ ರೌಡಿಗಳು ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಅವರಲ್ಲಿ ಬಹುತೇಕರು, ಜಾಮೀನಿನ ಮೇಲೆ ಹೊರಬಂದವರು. ಎಲ್ಲ ರೌಡಿಗಳ ವಿವರವನ್ನು ಪ್ರಕರಣಗಳ ಸಮೇತ ನೀಡುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊ ಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಠಾಣೆಗಳಲ್ಲಿ ರೌಡಿಗಳ ಭಾವಚಿತ್ರ ಅಂಟಿಸಲಾಗಿದೆ. ಅಂಥ ಕೆಲ ರೌಡಿಗಳು, ತಾವು ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ಭಾವಚಿತ್ರಗಳ ಸಮೇತ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರು ಠಾಣೆಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಈ ಎಲ್ಲ ಸಂಗತಿಗಳನ್ನು ಪರಿಗಣಿಸಿ, ರೌಡಿಗಳ ಚಟುವಟಿಕೆ ಮೇಲೆ ನಿಗಾ ಇರಿಸಲಾಗಿದೆ’ ಎಂದು ಹೇಳಿದರು.

‘ರೌಡಿಗಳು ಸಹಚರರನ್ನು ಮುಂದಿ ಟ್ಟುಕೊಂಡು ತೆರೆಮರೆಯಲ್ಲಿ ಚುನಾವಣೆ ಪ್ರಚಾರ ಶುರು ಮಾಡಿದ್ದಾರೆ. ಬಾಡೂಟ ಆಯೋಜನೆ, ಪಡಿತರ ವಿತರಣೆ, ಸೀರೆ ಹಾಗೂ ಗೃಹೋಪಯೋಗಿ ವಸ್ತುಗಳ ಹಂಚಿಕೆಯಲ್ಲೂ ತೊಡಗಿರುವ ಮಾಹಿತಿ ಇದೆ. ಈ ವಿಷಯವನ್ನು ಆಯೋಗದ ಗಮನಕ್ಕೆ ತರಲಾಗುವುದು’ ಎಂದರು.

ನಿಗಾ ಇರಿಸಲು ನಿರ್ದೇಶನ: ‘ಕೆಲ ರೌಡಿಗಳು, ಸಹಚರರ ಮೂಲಕ ಜನರನ್ನು ಹೆದರಿಸಿ ಮತ ಸೆಳೆಯುವ ಸಾಧ್ಯತೆಗಳಿವೆ. ಇಂಥ ರೌಡಿಗಳ ಬಗ್ಗೆ ನಿಗಾ ಇರಿಸಿ, ಕೇಂದ್ರ ಕಚೇರಿಗೆ ಮಾಹಿತಿ ರವಾನಿಸುವಂತೆ ಜಿಲ್ಲಾ ಎಸ್ಪಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಅಧಿಕಾರಿ ಹೇಳಿದರು. ‘ರೌಡಿ ಪಟ್ಟಿಯಿಂದ ತಮ್ಮ ಹೆಸರು ತೆಗೆಸಲು ಕೆಲ ರೌಡಿಗಳು, ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದ್ದಾರೆ. ವಿಚಾರಣೆ ನಡೆಯುತ್ತಿದೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ರೌಡಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆಂಬ ಸಂಗತಿ ಶೀಘ್ರ ತಿಳಿಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT