ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ಅವರೇ, ಬಿಜೆಪಿ ಫ್ಯಾಮಿಲಿ ಪಾಲಿಟಿಕ್ಸ್ ಪಟ್ಟಿ ಇಲ್ಲಿದೆ ನೋಡಿ: ಎಚ್‌ಡಿಕೆ

Last Updated 31 ಡಿಸೆಂಬರ್ 2022, 10:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಅಮಿತ್‌ ಶಾ ಅವರು, ‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕರ್ನಾಟಕ ದೆಹಲಿಯ ಎಟಿಎಂ ಆಗಲಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಒಂದು ಕುಟುಂಬದ ಎಟಿಎಂ ಆಗಲಿದೆ. ಪದೇ ಪದೇ ಈ ಪಕ್ಷಗಳು ಭ್ರಷ್ಟಾಚಾರದಿಂದ ರಾಜ್ಯವನ್ನು ಹೊಲಸೆಬ್ಬಿಸಿವೆ. ರಾಜ್ಯವನ್ನು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು, ಮಂಡ್ಯದಿಂದಲೇ ಬಿಜೆಪಿ ವಿಜಯಯಾತ್ರೆ ಆರಂಭವಾಗಲು‌, ಪ್ರಧಾನಿಯವರ ಕೈಗಳನ್ನು ಬಲಪಡಿಸಿ’ ಎಂದು ಕೋರಿದ್ದರು.

ಅಮಿತ್‌ ಶಾ ಹೇಳಿಕೆ ಕುರಿತು ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ’ನಿಮ್ಮ ಪಕ್ಷದ ಕುಟುಂಬ ರಾಜಕಾರಣದ ಲೆಕ್ಕ ಗೊತ್ತಿಲ್ಲವೇ? ನಿಮ್ಮ ಸುಪುತ್ರ ಜಯ ಶಾ ಯಾವ ಸೀಮೆ ಕ್ರಿಕೆಟ್ ಪಂಡಿತರು ಎಂದು ಬಿಸಿಸಿಐನಲ್ಲಿ ಕೂತಿದ್ದಾರೆ? ಬಿಸಿಸಿಐನಲ್ಲಿ ಯಾರು ಇರಬೇಕು, ಇರಬಾರದೆಂದು ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶವಿದೆ. ಆ ಆದೇಶಕ್ಕೆ ನಿಮ್ಮ ಮಗ ಅತೀತರೇ? ಈಗ ಹೇಳಿ, ಬಿಸಿಸಿಐ ಯಾರ ಪಾಲಿನ ಎಟಿಎಂ? ಎಂದು ಪ್ರಶ್ನಿಸಿದ್ದಾರೆ.


ಬೆಂಗಳೂರಿನಿಂದ ಹೊರಡುವ ಮುನ್ನ ಇದಕ್ಕೆಲ್ಲಾ ಉತ್ತರ ಕೊಡಿ

1. ಯಡಿಯೂರಪ್ಪ ಮತ್ತು ಮಕ್ಕಳು
2. ರವಿಸುಬ್ರಮಣ್ಯ - ತೇಜಸ್ವಿ ಸೂರ್ಯ
3. ಆರ್. ಅಶೋಕ್ -ರವಿ
4. ವಿ.ಸೋಮಣ್ಣ ಮತ್ತು ಮಗ
5. ಅರವಿಂದ ಲಿಂಬಾವಳಿ -ರಘು
6. ಎಸ್.ಆರ್.ವಿಶ್ವನಾಥ್ - ವಾಣಿ ವಿಶ್ವನಾಥ್
7. ಜಗದೀಶ್ ಶೆಟ್ಟರ್ - ಪ್ರದೀಪ್ ಶೆಟ್ಟರ್
8. ಮುರುಗೇಶ್ ನಿರಾಣಿ - ಹನುಮಂತ ನಿರಾಣಿ
9. ಜಿ.ಎಸ್. ಬಸವರಾಜು - ಜ್ಯೋತಿ ಗಣೇಶ್
10. ಜಾರಕಿಹೊಳಿ ಮತ್ತು ಸಹೋದರರು
11. ಜೊಲ್ಲೆ & ಜೊಲ್ಲೆ
12. ಸುರೇಶ್ ಅಂಗಡಿ ಕುಟುಂಬ
13. ಉದಾಸಿ ಕುಟುಂಬ
14. ಶ್ರೀರಾಮುಲು ಕುಟುಂಬ
15. ರೆಡ್ಡಿ ಕುಟುಂಬ

ಇದು ಕೂಡ ಅಪೂರ್ಣ ಪಟ್ಟಿಯೇ. ರಾಷ್ಟ್ರೀಯ ಪಟ್ಟಿ ಬೇಕಿದ್ದರೆ ಹೇಳಿ, ಇದರ ಹತ್ತರಷ್ಟಿದೆ ಎಂದು ಕುಮಾರಸ್ವಾಮಿ ಕೀಚಾಯಿಸಿದ್ದಾರೆ.

‘ಇವತ್ತು ಬೆಂಗಳೂರಿನಿಂದ ಹೊರಡುವ ಮುನ್ನ ಇದಕ್ಕೆಲ್ಲಾ ಉತ್ತರ ಕೊಡಿ ಅಮಿತ್ ಶಾ ಅವರೇ, ಎಷ್ಟಾದರೂ ನೀವು ಸ್ವಯಂ ಘೋಷಿತ ಸಾಚಾ ಅಲ್ಲವೇ? ಉತ್ತರ ಹೇಳಿ ಹೋದರೆ ನಾವೂ ಧನ್ಯರಾಗುತ್ತೇವೆ. ಸತ್ಯ ಅಜರಾಮರ, ಅಸತ್ಯ ನಿಮ್ಮ ಹಣೆಬರ. ಸತ್ಯದ ಮುಂದೆ ದಮ್ಮು ತಾಕತ್ತು ದುರ್ಬಲ’ ಎಂದು ಎಚ್‌ಡಿಕೆ ಗುಡುಗಿದ್ದಾರೆ.

‘ಜೆಡಿಎಸ್‌ ಪಂಚರತ್ನ ರಥಯಾತ್ರೆ ನಿಮ್ಮ ಕಣ್ಣು ಕುಕ್ಕಿದೆ. ಸಾಲಮನ್ನಾ ನಿಮ್ಮ ನಿದ್ದೆಗೆಡಿಸಿದೆ. ಎಷ್ಟೇ ಆದರೂ ಕೇಂದ್ರದ ಸಹಕಾರ ಸಚಿವರಾದ ನಿಮಗೆ ಸಾಲಮನ್ನಾ ದುಃಸ್ವಪ್ನದಂತೆ ಕಾಡುತ್ತಿದೆ ಎನ್ನುವುದು ಗೊತ್ತು. ಎಚ್.ಡಿ.ದೇವೇಗೌಡರು ಮತ್ತು ನನ್ನ ಸಾಧನೆಗಳು ನಿಮ್ಮ ಚಿಂತೆ ಹೆಚ್ಚಿಸಿವೆ. ಇನ್ನಾದರೂ ಸುಳ್ಳಿನ ಜಾಗಟೆ ಬಾರಿಸುವುದು ನಿಲ್ಲಿಸಿ’ ಎಂದು ಅಮಿತ್‌ ಶಾಗೆ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT