ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಸೆಪ್ಟೆಂಬರ್‌ನಲ್ಲಿ ಅಧಿವೇಶನಕ್ಕೆ ಸಿದ್ಧತೆ: ಅಧಿಕಾರಿಗಳ ಜತೆ ಸಭಾಧ್ಯಕ್ಷರ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಮಂಡಲ ಅಧಿವೇಶನ ನಡೆಸುವ ಸಂಬಂಧ ವಿಧಾನಸಭೆ ಸಭಾಂಗಣವನ್ನು ಅಧಿಕಾರಿಗಳ ಜತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲಿಸಿದರು. ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಇದ್ದರು

ಬೆಂಗಳೂರು: ಕೋವಿಡ್ ಹರಡುತ್ತಿರುವ ಮಧ್ಯೆಯೂ ಸೆಪ್ಟೆಂಬರ್‌‌ 23 ರೊಳಗೆ ವಿಧಾನಮಂಡಲದ ಅಧಿವೇಶನ ನಡೆಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ಧತೆ ನಡೆಸುತ್ತಿದ್ದಾರೆ.

ಈ ಸಂಬಂಧ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಸಭಾಧ್ಯಕ್ಷ ಕಾಗೇರಿ ಅವರು, ಅಧಿವೇಶನ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತಯಾರಿರಬೇಕು ಎಂದು ಸೂಚಿಸಿದರು.

‘ಮಾರ್ಚ್‌ನಲ್ಲಿ ಅಧಿವೇಶನ ನಡೆದಿತ್ತು. ಇದಾದ ಆರು ತಿಂಗಳಲ್ಲಿ ಅಧಿವೇಶನ ಕರೆಯಬೇಕಾಗಿರುವುದರಿಂದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. ಸಚಿವರು, ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಕೊರೊನಾ ಸೋಂಕು ಹರಡದಂತೆ ಆರೋಗ್ಯ ಕಾಪಾಡಿಕೊಂಡು ಸದನ ನಡೆಸುವ ಸಂಬಂಧ ವಿಧಾನಸಭಾ ಸಭಾಂಗಣದ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು’ ಎಂದು ಕಾಗೇರಿ ಸುದ್ದಿಗಾರರಿಗೆ ತಿಳಿಸಿದರು.

ಒಂದು ವೇಳೆ ಅಧಿವೇಶನವನ್ನು ವಿಧಾನಸಭೆಯ ಸಭಾಂಗಣದಲ್ಲಿ ನಡೆಸಲು ಆಗದಿದ್ದರೆ, ಪರ್ಯಾಯವಾಗಿ ಎಲ್ಲಿ ನಡೆಸಬಹುದು, ಅಂತಹ ಸೂಕ್ತ ಸ್ಥಳಗಳು ಎಲ್ಲಿವೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದರು.

ವಿಧಾನಸಭಾ ಸಭಾಂಗಣದಲ್ಲಿ ಎಲ್ಲ ಆಸನಗಳಿಗೂ ಗಾಜಿನ ಕವಚಗಳನ್ನು ಅಳವಡಿಸುವುದು, ಸದನಕ್ಕೆ ಬರುವ ಶಾಸಕರು, ಸಚಿವರು, ಅಧಿಕಾರಿಗಳಿಗೆ ಮುಖಗವುಸು ಮತ್ತು ಮುಖ ರಕ್ಷಕಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕಲಾಪಕ್ಕೆ ಹಾಜರಾಗುವಂತೆ ವಿನಂತಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು.

ಲೋಕಸಭೆ, ರಾಜ್ಯಸಭೆ ಮತ್ತು ಇತರ ರಾಜ್ಯಗಳಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮುಂದಿನ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ಮುಖ್ಯಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ಜತೆಗೆ ಈ ಕುರಿತು ಸಮಾಲೋಚನೆ ನಡೆಸಿ ಸ್ಥಳ ನಿಗದಿ ಮಾಡುವ ಬಗ್ಗೆ ತೀರ್ಮಾನ ಮಾಡುವುದಾಗಿಯೂ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು