ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಖರೀದಿಸುವವರಿಗೆ ಒಳ್ಳೆ ಸುದ್ದಿ: ಮಾರ್ಗಸೂಚಿ ದರ ಶೇ 10ರಷ್ಟು ಕಡಿತ

ನೋಂದಣಿ ವೇಳೆ ಸಿಗಲಿದೆ ರಿಯಾಯಿತಿ
Last Updated 1 ಜನವರಿ 2022, 20:43 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ಖರೀದಿ, ಕರಾರು ಪತ್ರ, ಭೋಗ್ಯ ಪತ್ರಗಳನ್ನು ನೋಂದಣಿ ಮಾಡಿಸುವಾಗ ಪಾವತಿಸುವ ನೋಂದಣಿ ಮತ್ತು ‌ಮುದ್ರಾಂಕ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅನುವಾಗುವಂತೆ ಮಾರ್ಗಸೂಚಿ ದರವನ್ನು ಶೇ 10ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ ಈ ವಿಷಯ ತಿಳಿಸಿದರು.

‘ರಾಜ್ಯದಾದ್ಯಂತ ಈ ರಿಯಾಯಿತಿ ಅನ್ವಯವಾಗಲಿದೆ. ಶನಿವಾರದಿಂದ (ಜ. 1) ಮಾರ್ಚ್‌ 31ರವರೆಗೆ ಜಾರಿಯಲ್ಲಿ ಇರಲಿದೆ. ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ ಸೇರಿದಂತೆ ಎಲ್ಲ ವಿಧದ ಸ್ಥಿರಾಸ್ತಿಗಳ ನೋಂದಣಿ ವೇಳೆ ಕಡಿತಗೊಳಿಸಿದ ಮಾರ್ಗಸೂಚಿ ದರವನ್ನೇ ಪರಿಗಣಿಸಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ನಿಗದಿಪಡಿಸಲಾಗುವುದು’ ಎಂದರು.

‘ಆಯಾ ಪ್ರದೇಶಗಳಲ್ಲಿರುವ ಮಾರ್ಗಸೂಚಿ ದರದ ಪ್ರಕಾರ ಈ ನಿಯಮ ಅನ್ವಯವಾಗಲಿದೆ. ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಜನರಿಗೆ ಲಾಭವಾಗಲಿದೆ’ ಎಂದು ಹೇಳಿದರು.

‘ಎರಡು ವರ್ಷಗಳಿಂದ ಜಮೀನು ಮತ್ತು ಫ್ಲ್ಯಾಟ್ ಖರೀದಿಸಲು ಎದುರು ನೋಡುತ್ತಿದ್ದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

‘ಕೋವಿಡ್‌ ಕಾರಣದಿಂದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಕೂಡಾ ಕುಸಿದಿದೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

ಲೆಕ್ಕಾಚಾರ ಹೇಗೆ?

ರಾಜ್ಯದಲ್ಲಿ ಯಾವುದೇ ಸ್ಥಿರಾಸ್ತಿಯ ಖರೀದಿಗೆ ಸಂಬಂಧಿಸಿದಂತೆ ಶುದ್ಧ ಕ್ರಯಪತ್ರ, ಭೋಗ್ಯದ ಕರಾರು, ದಾನಪತ್ರ, ಅಡಮಾನ ಪತ್ರ, ಲೀಸ್ ಕಂ ಸೇಲ್ ಡೀಡ್‌, ಹಿಸ್ಸಾ ಪತ್ರಗಳನ್ನು ನೋಂದಣಿ ಮಾಡುವಾಗ ಆ ಆಸ್ತಿಯ ಮಾರ್ಗಸೂಚಿ ದರದ (ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಪಡಿಸುವ ಕನಿಷ್ಠ ಮಾರಾಟ ದರ) ಶೇ 5ರಷ್ಟು ಮುದ್ರಾಂಕ (ಸ್ಟ್ಯಾಂಪ್‌), ಶೇ 1ರಷ್ಟು ನೋಂದಣಿ ಶುಲ್ಕ ವಿಧಿಸಲಾಗುತ್ತಿದೆ.

ಸರ್ಕಾರದ ಹೊಸ ಘೋಷಣೆಯಿಂದಾಗಿ ಖರೀದಿದಾರರಿಗೆ ಲಾಭ ಸಿಗುವುದು ಹೀಗೆ. ಉದಾಹರಣೆಗೆ 30X40 ಅಳತೆ (1200 ಚದರ ಅಡಿ) ನಿವೇಶನದ ಬೆಲೆ ಮಾರ್ಗಸೂಚಿ ದರ ಅನುಸಾರ ₹30 ಲಕ್ಷ ಇರುತ್ತದೆ ಎಂದಿಟ್ಟುಕೊಳ್ಳೋಣ. ಹೊಸ ನೀತಿಯಂತೆ ಈ ದರ ಶೇ 10ರಷ್ಟು ಇಳಿಕೆಯಾದರೆ ಪರಿಷ್ಕೃತ ಮಾರ್ಗಸೂಚಿ ದರ ₹27 ಲಕ್ಷ ಆಗಲಿದೆ. ಮೊದಲು ₹30 ಲಕ್ಷ ಮೌಲ್ಯದ ಆಸ್ತಿ ಖರೀದಿಸುವವರು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಅನ್ವಯ ₹18 ಸಾವಿರ ಕಟ್ಟಬೇಕಾಗುತ್ತಿತ್ತು. ಈಗ ಈ ಮೊತ್ತದಲ್ಲಿ ₹1,800 ಕಡಿಮೆಯಾಗಲಿದೆ.

ರಾಜಸ್ವ ಸಂಗ್ರಹ ಹೆಚ್ಚಳ ನಿರೀಕ್ಷೆ:

ರಾಜ್ಯದಾದ್ಯಂತ 2019–20ನೇ ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ರಾಜಸ್ವ ಸಂಗ್ರಹದಲ್ಲಿ ₹ 2,101 ಕೋಟಿ ಕೊರತೆ ಉಂಟಾಗಿದೆ. ರಾಜಸ್ವ ಸಂಗ್ರಹ ಹೆಚ್ಚಿಲು ಹೊರ ರಾಜ್ಯಗಳು ನಾನಾ ಕ್ರಮಗಳನ್ನು ತೆಗೆದುಕೊಂಡಿದ್ದು, ದೆಹಲಿ ಸರ್ಕಾರ ನಿರ್ದಿಷ್ಟ ಅವಧಿಗೆ ಶೇ 20ರಷ್ಟು ಮಾರ್ಗಸೂಚಿ ದರ ಕಡಿಮೆಗೊಳಿಸಿದೆ. ಇದರಿಂದ ಅಲ್ಲಿ ರಾಜಸ್ವ ಸಂಗ್ರಹ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೃಷಿ ಜಮೀನು, ನಿವೇಶನಗಳು, ಕಟ್ಟಡ, ಭೂ ಪರಿವರ್ತಿತ ಜಮೀನುಗಳು, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಎಲ್ಲ ವಿಧದ ಸ್ಥಿರಾಸ್ತಿಗಳ ಖರೀದಿ, ಭೋಗ್ಯದ ಕರಾರು, ಜಂಟಿ ಅಭಿವೃದ್ಧಿ ಕರಾರು, ಸ್ವಾಧೀನಸಹಿತ ಆಧಾರ ಪತ್ರಗಳ ನೋಂದಣಿಗೆ ಮಾರ್ಗಸೂಚಿ ದರ ಆಧರಿಸಿ ಶುಲ್ಕ ಸಂಗ್ರಹಿಸಲಾಗುತ್ತದೆ. ಇದೀಗ ಮಾರ್ಗಸೂಚಿ ದರದಲ್ಲಿ ಶೇ10ರಷ್ಟು ರಿಯಾಯಿತಿ ನೀಡಿದರೆ ನೋಂದಣಿ ಹೆಚ್ಚಳಗೊಂಡು ರಾಜಸ್ವ ಸಂಗ್ರಹ ಕೂಡಾ ಹೆಚ್ಚಬಹುದೆಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT