ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ಕ್ಷೇತ್ರ: 34 ವರ್ಷಗಳಿಂದ ಸತತ ಎರಡನೇ ಬಾರಿಗೆ ಯಾರೂ ಆಯ್ಕೆಯಾಗಿಲ್ಲ‌

'ಕೈ’ ಕೋಟೆಯಲ್ಲಿ ಎಲ್ಲ ಪಕ್ಷಗಳಿಗೂ ಮಣೆ
Last Updated 28 ಮಾರ್ಚ್ 2023, 4:23 IST
ಅಕ್ಷರ ಗಾತ್ರ

ಯಳಂದೂರು: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಸಾಕಷ್ಟು ಕೂತೂಹಲ ಮತ್ತು ವಿಶೇಷತೆಗಳನ್ನು ಒಡಲೊಳಗೆ ಇಟ್ಟುಕೊಂಡಿದೆ.

ಯಳಂದೂರು, ಕೊಳ್ಳೇಗಾಲ ಹಾಗೂ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಮೂರೂವರೆ ದಶಕಗಳಿಂದ ಒಮ್ಮೆ ಗೆದ್ದವರು ಮತ್ತೊಮ್ಮೆ ಸೋತಿದ್ದಾರೆ. 1989ರಿಂದ ಈ ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಇಲ್ಲಿ ಯಾರೂ ಗೆದ್ದಿಲ್ಲ.

ಮೈಸೂರು ಅರಸರ ಕಾಲದಲ್ಲಿ 1881ರಲ್ಲಿ ಪ್ರಜಾಪ್ರತಿನಿಧಿ ಸಭೆ ನಡೆಸಲಾಗಿತ್ತು. 1896ರಲ್ಲಿ ಬ್ರಿಟಿಷರು, ‌ಬ್ರಿಟನ್‌ ಚುನಾವಣಾ ಪದ್ಧತಿ ಆರಂಭಿಸಿದರು. ಕೊಳ್ಳೇಗಾಲ ಸ್ವಾತಂತ್ರ್ಯ ನಂತರವೂ ಮದ್ರಾಸ್ ಆಳ್ವಿಕೆಗೆ ಒಳಪಟ್ಟಿದ್ದು, ಭಾಷಾವಾರು ಪ್ರಾಂತ್ಯ ರಚನೆಯಾದಾಗ ಮೈಸೂರು ರಾಜ್ಯಕ್ಕೆ ಸೇರಿತು. ನಂತರದ ವರ್ಷಗಳಲ್ಲಿ ಯಳಂದೂರು ದ್ವಿಸದಸ್ಯ ಕ್ಷೇತ್ರವಾಗಿಸಿ ಚುನಾವಣೆ ನಡೆದಿತ್ತು. ಸಂತೇಮರಹಳ್ಳಿ ಮತ್ತು ಕೊಳ್ಳೇಗಾಲ ಎರಡು ಕ್ಷೇತ್ರಗಳಾಗಿ ಹಂಚಿಕೆಯಾಗಿದ್ದು, ನಂತರ ಸಂತೇಮರಹಳ್ಳಿ ಕ್ಷೇತ್ರವನ್ನು ರದ್ದುಗೊಳಿಸಲಾಯಿತು.

ಕ್ಷೇತ್ರದ ಚುನಾವಣಾ ಇತಿಹಾಸ ನೋಡಿದರೆ ಇದು ಕಾಂಗ್ರೆಸ್‌ನ ಭದ್ರ ಕೋಟೆ. 1978ರವರೆಗೆ 5 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ನಂತರ ಬಿ.ಬಸವಯ್ಯ ಕಾಂಗ್ರೆಸ್ ಬಿಟ್ಟು, ಜನತಾ ಪಕ್ಷದಿಂದ 2 ಬಾರಿ ವಿಜೇತರಾಗಿದ್ದಾರೆ. 1989ರಲ್ಲಿ ಸಿದ್ದಮಾದಯ್ಯ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದರು. ನಂತರದ ಚುನಾವಣೆಗಳಲ್ಲಿ ಸತತ ಎರಡು ಬಾರಿ ಯಾರು ಆಯ್ಕೆಯಾಗಿಲ್ಲ. ಎಸ್.ಜಯಣ್ಣ ಜನತಾದಳ ಮತ್ತು ಕಾಂಗ್ರೆಸ್ ಪಕ್ಷದಿಂದ, ನಂಜುಂಡಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿ, ಪಕ್ಷೇತರರಾಗಿ ಎಸ್.ಬಾಲರಾಜ್, ಕಾಂಗ್ರೆಸ್ ಪಕ್ಷದಿಂದ ಧ್ರುವನಾರಾಯಣ ಮತ್ತು ಮಹೇಶ್ (ಬಿಎಸ್‌ಪಿ) ಒಂದೊಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

1999ರಿಂದ ಇಲ್ಲಿಯವರೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಜನತಾ‌ದಳದ ನಡುವೆ ನೇರ ಹಣಾಹಣಿ ನಡೆದಿದೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಇಲ್ಲಿಯವರೆಗೆ 15 ಚುನಾವಣೆಗಳನ್ನು ಕಂಡಿದೆ. ಒಮ್ಮೆ ಮಾತ್ರ ಮಹಿಳಾ ಅಭ್ಯರ್ಥಿ (ಕೆಂಪಮ್ಮ) ಆಯ್ಕೆಯಾಗಿದ್ದರು. ಉಳಿದಂತೆ ಇಲ್ಲಿ ಪುರುಷರದ್ದೇ ಪಾರಮ್ಯ. ಕಾಂಗ್ರೆಸ್‌ನವರು 9 ಬಾರಿ, ಜನತಾಪಕ್ಷ ಮತ್ತು ಜನತಾದಳದವರು ಮೂವರು, ಪಕ್ಷೇತರ, ಬಿಜೆಪಿ ಹಾಗೂ ಬಿಎಸ್‌ಪಿಯ ತಲಾ ಒಬ್ಬರು ವಿಜಯಿ ಆಗಿದ್ದಾರೆ.

1957ರಲ್ಲಿ ಕೆಂಪಮ್ಮ (ದ್ವಿಸದನ ಕ್ಷೇತ್ರ), 1962 ಮತ್ತು 1967ರಲ್ಲಿ ಬಿ.ಬಸವಯ್ಯ, 1972 ಮತ್ತು 1978ರಲ್ಲಿ ಎಂ.ಸಿದ್ದಮಾದಯ್ಯ, 1983 ಮತ್ತು 1985ರಲ್ಲಿ ಮತ್ತೆ ಬಿ.ಬಸವಯ್ಯ, 1989ರಲ್ಲಿ ಎಂ.ಸಿದ್ದಮಾದಯ್ಯ, 1994ರಲ್ಲಿ ಎಸ್.ಜಯಣ್ಣ, 1999ರಲ್ಲಿ ಜಿ.ಎನ್.ನಂಜುಂಡಸ್ವಾಮಿ, 2004ರಲ್ಲಿ ಎಸ್.ಬಾಲರಾಜ್, 2008ರಲ್ಲಿ ಆರ್.ಧ್ರುವನಾರಾಯಣ, 2009 (ಉಪ ಚುನಾವಣೆ) ಜಿ.ಎನ್.ನಂಜುಂಡಸ್ವಾಮಿ, 2013 ಎಸ್.ಜಯಣ್ಣ ಮತ್ತು 2018ರಲ್ಲಿ ಎಸ್.ಮಹೇಶ್ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

7 ದಶಕದಿಂದ ಎಸ್‌ಸಿ ಮೀಸಲು ಕ್ಷೇತ್ರ

ಕೊಳ್ಳೇಗಾಲ 66 ವರ್ಷಗಳಿಂದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿಯೇ ಮುಂದುವರಿದಿದ್ದು, ದಾಖಲೆ ಬರೆದಿದೆ. ಸ್ವಾತಂತ್ರ್ಯಾ ನಂತರ ಇತರೆ ಕ್ಷೇತ್ರಗಳಲ್ಲಿ ಆಗಾಗ ಕ್ಷೇತ್ರ ಬದಲಾಗುತ್ತಿದೆ. ಆರಂಭದಲ್ಲಿ ದ್ವಿಸದಸ್ಯ ಕ್ಷೇತ್ರದ (ಯಳಂದೂರು) ಮಾನ್ಯತೆ ಸಿಕ್ಕಿತ್ತು. ಕ್ಷೇತ್ರ ವಿಂಗಡಣೆಯ ನಂತರವೂ ಕ್ಷೇತ್ರದ ಮೀಸಲಾತಿ ಯಥಾ ಸ್ಥಿತಿ ಮುಂದುವರಿದಿದೆ.

ಮೊದಲ ಆಯ್ಕೆಯಲ್ಲೇ ಮಹೇಶ್‌ಗೆ ಮಂತ್ರಿಗಿರಿ

2018ರಲ್ಲಿ ಬಿಎಸ್‌ಪಿಯಿಂದ ಆಯ್ಕೆಯಾದ ಮಹೇಶ್‌, ಚೊಚ್ಚಲ ಶಾಸಕತ್ವದ ಅವಧಿಯಲ್ಲೇ ಸಚಿವರಾಗಿದ್ದರು. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಂಡ ನಂತರ ಬಿಎಸ್‌ಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಹಲವು ಕುತೂಹಲಗಳನ್ನು ಸೃಷ್ಟಿಸಿದೆ. ಯಾವ ಪಕ್ಷವೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.

ಹಾಲಿ ಶಾಸಕ ಎನ್‌.ಮಹೇಶ್‌ಗೆ ಬಿಜೆಪಿ ಮಣೆ ಹಾಕಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ನಿಕ್ಕಿಯಾಗಿಲ್ಲ. ಮೂವರು ಆಕಾಂಕ್ಷಿಗಳ ನಡುವೆ ಪೈಪೋಟಿ ಇದೆ. ಜೆಡಿಎಸ್‌ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಟಿಕೆಟ್‌ ಯಾರಿಗೆ ಎನ್ನುವುದು ಖಚಿತವಾಗಿಲ್ಲ. ಬಿಎಸ್‌ಪಿಯಿಂದ ಕಮಲ್‌ ನಾಗರಾಜ್‌ ಸ್ಪರ್ಧಿಸುವುದು ನಿಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT