ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಯುತ್ತಿರುವ ರಾಜ್ಯಪಾಲ: ಭಾಷೆ ಕಲಿಯಲು ನಿಘಂಟುಗಳ ಖರೀದಿ

ಅಧಿಕಾರಿ, ಸಿಬ್ಬಂದಿ ನೆರವು:
Last Updated 23 ಸೆಪ್ಟೆಂಬರ್ 2021, 16:35 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಕನ್ನಡ ಕಲಿಯಲು ಮುಂದಡಿ ಇಟ್ಟಿದ್ದಾರೆ.

ಇದೇ ವರ್ಷದ ಜುಲೈನಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕನ್ನಡ ಕಲಿಕೆಗೆ ಆಸಕ್ತಿ ವಹಿಸಿರುವ ಗೆಹಲೋತ್‌ ಅವರು, ರಾಜಭವನದ ಅಧಿಕಾರಿಗಳು,ಸಿಬ್ಬಂದಿ ಮತ್ತು ನಿಘಂಟುಗಳ ನೆರವಿನೊಂದಿಗೆ ಈ ಪ್ರಯತ್ನ ಕೈಗೊಂಡಿದ್ದಾರೆ.

ರಾಜಭವನದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿತ್ಯ ಅವರಿಗೆ ಹೊಸ ಶಬ್ದಗಳು ಮತ್ತು ವಾಕ್ಯ
ರಚನೆ ಕುರಿತು ಕನ್ನಡ ಕಲಿಸುವಪ್ರಯತ್ನದಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆಯೂ ಕನ್ನಡದಲ್ಲೇ ಮಾತನಾಡುವ ಪ್ರಯತ್ನವನ್ನು ರಾಜ್ಯಪಾಲರು ಮಾಡುತ್ತಿದ್ದಾರೆ.

ಕನ್ನಡ–ಹಿಂದಿ, ಹಿಂದಿ–ಕನ್ನಡ, ಇಂಗ್ಲಿಷ್‌–ಕನ್ನಡ ನಿಘಂಟುಗಳ ಜತೆಗೆ ಕಲಿಕೆಗೆ ಅನುಕೂಲವಾಗುವ ಪುಸ್ತಕಗಳನ್ನು ರಾಜ್ಯಪಾಲರು ಖರೀದಿಸಿದ್ದಾರೆ. ಈ ನಿಘಂಟುಗಳ ಸಹಾಯದಿಂದ ಹಲವು ಶಬ್ದಗಳನ್ನು ನಿತ್ಯ ಕಲಿಯುತ್ತಿದ್ದಾರೆ. ಮಧ್ಯಪ್ರದೇಶದ ಮೂಲದ ಗೆಹಲೋತ್ ಅವರು, ಕನ್ನಡ ಕಲಿಯುವ ಮೂಲಕ ರಾಜ್ಯ ಭಾಷೆಯ ಬಗ್ಗೆ ತಮ್ಮ ಪ್ರೇಮ ವ್ಯಕ್ತಪಡಿಸಿದ್ದಾರೆ ಎಂದು ರಾಜಭವನದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿವೇಶನದಲ್ಲಿನ ಭಾಷಣ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಹಿಂದಿಯಲ್ಲೇ ಭಾಷಣ ಮಾಡುತ್ತಿದ್ದರು. ಅಲ್ಲದೇ, ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡುತ್ತಿದ್ದ ಭಾಷಣದ ಪ್ರತಿ ಮೊದಲು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಇರುತ್ತಿತ್ತು. ವಾಲಾ ಬಂದ ಬಳಿಕ ಹಿಂದಿಯಲ್ಲಿ ಮುದ್ರಿತವಾದ ಭಾಷಣದ ಪ್ರತಿ ನೀಡುವ ಪದ್ಧತಿ ಜಾರಿಗೆ ಬಂದಿತ್ತು. ಆದರೆ, ರಾಜಭವನದಿಂದ ಹೊರಡಿಸುತ್ತಿದ್ದ ಪತ್ರಿಕಾ ಪ್ರಕಟಣೆಗಳು ಅಲ್ಲಿಯವರೆಗೆ ಇಂಗ್ಲಿಷ್‌ನಲ್ಲಿ ಇರುತ್ತಿದ್ದವು. ವಾಲಾ ಬಂದ ಬಳಿಕ ಹಿಂದಿ ಮತ್ತು ಕನ್ನಡದಲ್ಲೂ ಪ್ರಕಟಣೆಗಳನ್ನು ಹೊರಡಿಸಲಾಗುತ್ತಿತ್ತು.

ಅದಕ್ಕೂ ಮೊದಲು ರಾಜ್ಯಪಾಲ ರಾಗಿದ್ದ ಎಚ್.ಆರ್. ಭಾರದ್ವಾಜ್ ಅವರು, ಕನ್ನಡ ಕಲಿಯುವುದಾಗಿ ಹೇಳಿಕೊಂಡಿದ್ದರು. ಆದರೆ ಕಲಿತಿರಲಿಲ್ಲ. ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಕನ್ನಡದಲ್ಲೇ ಮಾತನಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT