ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಏರಿಕೆಯ ಬರೆ: ರಾಜ್ಯದಲ್ಲಿ ವಿದ್ಯುತ್‌ ದರ ಹೆಚ್ಚಳ

Last Updated 4 ಏಪ್ರಿಲ್ 2022, 19:18 IST
ಅಕ್ಷರ ಗಾತ್ರ

ಬೆಂಗಳೂರು: ಒಂದೇ ಸಮನೆ ಏರುತ್ತಿರುವ ಪೆಟ್ರೋಲ್‌, ಡೀಸೆಲ್‌, ವಾಣಿಜ್ಯ ಬಳಕೆಯ ಸಿಲಿಂಡರ್‌ ದರದ ಆಘಾತಗಳ ಮಧ್ಯೆಯೇ ರಾಜ್ಯದಲ್ಲಿ ವಿದ್ಯುತ್‌ ದರ ಹಾಗೂ ಹೋಟೆಲ್ ಆಹಾರಗಳ ದರ ಏರಿಕೆಯ ಮರ್ಮಾಘಾತವನ್ನೂ ಗ್ರಾಹಕರು ಅನುಭವಿಸಬೇಕಾಗಿದೆ.

ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂಗಳು) ಯೂನಿಟ್‌ಗೆ ಸರಾಸರಿ ₹1.85 (ಶೇ 23.83ರಷ್ಟು) ಹೆಚ್ಚಿಸುವಂತೆ ಕೋರಿ ಪ್ರಸ್ತಾವ ಸಲ್ಲಿಸಿದ್ದವು. ಈ ಬೇಡಿಕೆ ಪರಿಗಣಿಸಿರುವ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೋಮವಾರ,ಶೇ 4.33ರಷ್ಟು ದರ ಏರಿಸಲು ಒಪ್ಪಿಗೆ ಸೂಚಿಸಿದೆ. ಏಪ್ರಿಲ್ 1ರಿಂದಲೇ ಈ ದರ ಅನ್ವಯವಾಗಲಿದೆ.

ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆ ಹೆಚ್ಚಿಸಲಾಗಿದ್ದು, ಇದು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೂ (ಎಸ್ಕಾಂ) ಅನ್ವಯವಾಗಲಿದೆ. ಕಳೆದ ವರ್ಷಸರಾಸರಿ 30 ಪೈಸೆ ಹೆಚ್ಚಿಸಲಾಗಿತ್ತು.

ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಳವಾಗಿದೆ. ನಿಗದಿತ ಶುಲ್ಕ ದರವನ್ನು ಪ್ರತಿ ಎಚ್‌ಪಿ ಅಥವಾ ಕಿಲೋ ವಾಟ್‌ಗೆ ₹10 ರಿಂದ 30 (ಪ್ರತಿ ಯೂನಿಟ್‌ಗೆ 10ರಿಂದ 30 ಪೈಸೆ) ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಯೂನಿಟ್‌ ಬಳಸುತ್ತಿದ್ದವರು ಇದುವರೆಗೆ ₹523 ಪಾವತಿಸುತ್ತಿದ್ದರು. ಇನ್ನು ಮುಂದೆ
₹545 ಪಾವತಿಸಬೇಕಾಗುತ್ತದೆ. 100 ಯೂನಿಟ್‌ ಬಳಸುವವರು ₹990ರಿಂದ ₹1015 ವೆಚ್ಚ ಮಾಡಬೇಕಾಗುತ್ತದೆ.

ಗ್ರಾಮೀಣ ಪ್ರದೇಶವು ಸೇರಿದಂತೆ ಮೆಸ್ಕಾಂ, ಸೆಸ್ಕ್‌, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಗಳಲ್ಲಿ 50 ಯೂನಿಟ್‌ಗಳಿಗೆ ₹18 ಮತ್ತು 100 ಯೂನಿಟ್‌ಗಳಿಗೆ ₹20 ಹೆಚ್ಚಳವಾಗಲಿದೆ. 100ಕ್ಕಿಂತ ಹೆಚ್ಚು ಯೂನಿಟ್‌ ಬಳಸುವವರು ₹65ಕ್ಕಿಂತ ಹೆಚ್ಚು ಪಾವತಿಸಬೇಕಾಗುತ್ತದೆ.

ದರ ಏರಿಕೆಗೆ ಸಮರ್ಥನೆ: ‘ರಾಜ್ಯದಲ್ಲಿ ವಿದ್ಯುತ್‌ ಪರಿಸ್ಥಿತಿ ಉತ್ತಮವಾಗಿದ್ದರೂ ಎಲ್ಲ ಎಸ್ಕಾಂಗಳು ನಷ್ಟದಲ್ಲಿವೆ. ಆದಾಯ ಕೊರತೆ ಸರಿದೂಗಿಸಲು ವಿದ್ಯುತ್‌ ದರ ಏರಿಕೆ ಮಾಡಲಾಗಿದೆ. ಇಂಧನ ಶುಲ್ಕ ಕೇವಲ 5 ಪೈಸೆ ಹೆಚ್ಚಿಸಲಾಗಿದೆ. ಈ ಬಾರಿ ಶೇ 4.33ರಷ್ಟು ದರ ಹೆಚ್ಚಿಸಲಾಗಿದೆ. ಇಂಧನ ವೆಚ್ಚ ಸೇರಿ ಒಟ್ಟು 35 ಪೈಸೆ ಏರಿಕೆ ಮಾಡಲಾಗಿದೆ. ಎಲ್ಲ ಗ್ರಾಹಕರಿಗೂ ಸಮಾನವಾಗಿ ಹೆಚ್ಚಿಸಿಲ್ಲ’ ಎಂದು ಕೆಇಆರ್‌ಸಿ ಹಂಗಾಮಿ ಅಧ್ಯಕ್ಷ ಎಚ್‌.ಎನ್‌. ಮಂಜುನಾಥ್ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉಂಟಾಗುವ ₹2159.48 ಕೋಟಿ ಇಲಾಖಾ ರಾಜಸ್ವ ಕೊರತೆ ಪರಿಗಣಿಸಿರಾಜ್ಯದಾದ್ಯಂತ ಎಲ್ಲ ವಿದ್ಯುತ್ ಕಂಪನಿಗಳ ಏಕರೂಪ ದರ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸಲಾಗಿದೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಮೊತ್ತವು ಆರ್ಥಿಕ ವರ್ಷ 2020-21ರ ಕೊರತೆ ಮೊತ್ತ ನಿವ್ವಳ ಆದಾಯ ಕೊರತೆ ₹1700.49 ಕೋಟಿ ಒಳಗೊಂಡಿದೆ’ ಎಂದು ವಿವರಿಸಿದರು.

’ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಆರ್ಥಿಕ ವರ್ಷ 2021ರಲ್ಲಿ ವಿದ್ಯುತ್‌ ಮಾರಾಟವು 7228.65 ದಶಲಕ್ಷ ಯೂನಿಟ್‌ಗಳಷ್ಟು ಗಣನೀಯವಾಗಿ ಇಳಿಕೆಯಾಗಿತ್ತು. ಇದರ ಪರಿಣಾಮ ಅನುಮೋದಿಸಿದ ಮೊತ್ತಕ್ಕಿಂತ ₹6182.84 ಕೋಟಿಗಳಷ್ಟು ಆದಾಯದ ಕೊರತೆಯಾಗಿದೆ. ಆರ್ಥಿಕ ವರ್ಷ 2021ರಲ್ಲಿ ವಿದ್ಯುತ್‌ ಉಪಯೋಗಿಸದಿದ್ದರೂ, ಶಾಖೋತ್ಪನ್ನ ಕೇಂದ್ರಗಳಿಗೆ ನಿಗದಿತ ಶುಲ್ಕ ಪಾವತಿಯಿಂದಾಗಿ ಪ್ರತಿ ಯೂನಿಟ್ ವಿದ್ಯುತ್ ಖರೀದಿ ವೆಚ್ಚವು 31 ಪೈಸೆಗಳಷ್ಟು ಹೆಚ್ಚಾಗಿದೆ’ ಎಂದು ವಿವರಿಸಿದರು.

’ಆರ್ಥಿಕ ವರ್ಷ 2021ರ ಆದಾಯ ಕೊರತೆಯಿಂದ ಪ್ರತಿ ಯೂನಿಟ್‌ಗೆ 27 ಪೈಸೆಯಷ್ಟು ದರ ಹೆಚ್ಚಿಸಲು ಕಾರಣವಾಗಿದೆ. ಪ್ರಸಕ್ತ ಸಾಲಿನಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳ ಖರೀದಿ ವೆಚ್ಚ, ಕಾರ್ಯನಿರ್ವಹಣೆ ವೆಚ್ಚ ಮತ್ತು ಸಾಲಗಳಿಂದಾಗಿ ದರ ಏರಿಸಲಾಗಿದೆ’ ಎಂದು ವಿವರಿಸಿದರು.

‘ವಿದ್ಯುತ್‌ ಹೆಚ್ಚು ಉತ್ಪಾದನೆಯಾಗುತ್ತಿದೆ ಎನ್ನುವುದು ಸುಳ್ಳು. ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಸಂಗ್ರಹಿಸಲು ಇನ್ನೂ ಸಮರ್ಪಕ ವ್ಯವಸ್ಥೆ ಇಲ್ಲ. ಬೇಡಿಕೆಯ ಅವಧಿಯಲ್ಲಿ ಹೆಚ್ಚು ಉತ್ಪಾದನೆಯಾಗಿ ನಷ್ಟವಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಶರಾವತಿಯಲ್ಲಿ ಪಂಪ್‌ ಸ್ಟೋರೇಜ್‌ ಸ್ಥಾಪಿಸುವ ಉದ್ದೇಶವಿದೆ. ಈ ಯೋಜನೆಗೆ ಪರಿಸರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ನೀಡಬೇಕು. ಈ ರೀತಿಯ ಯೋಜನೆಗಳು ಅನುಷ್ಠಾನವಾದರೆ ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳನ್ನೇ ಮುಚ್ಚಿಸಬಹುದು’ ಎಂದರು.

ಎಂಎಸ್‌ಎಂಇಗಳಿಗೆ ರಿಯಾಯಿತಿ:

ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಒಂದು ವರ್ಷದವರೆಗೆ ಮಾಸಿಕ ಇಂಧನ ಬಳಕೆಯಲ್ಲಿ ರಿಯಾಯಿತಿ ನೀಡಲು ಆಯೋಗ ನಿರ್ಧರಿಸಿದೆ.

ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್‌ಗೆ 50 ಪೈಸೆ ರಿಯಾಯಿತಿ ದೊರೆಯಲಿದೆ. ಕೋವಿಡ್‌–19 ದುಷ್ಪರಿಣಾಮಗಳಿಂದ ಚೇತರಿಸಿಕೊಳ್ಳಲು ಈ ರಿಯಾಯಿತಿ ಪ್ರಕಟಿಸಲಾಗಿದೆ.

ಮಂಜುಗಡ್ಡೆ ಉತ್ಪಾದನಾ ಘಟಕಗಳು ಹಾಗೂ ಶೀತಲೀಕರಣ ಘಟಕಗಳಿಗೆ ವರ್ಷದಲ್ಲಿ ಇಂಧನ ಶುಲ್ಕದಲ್ಲಿ ಪ್ರತಿ ಯೂನಿಟ್‌ಗೆ ₹1ರಷ್ಟು ರಿಯಾಯಿತಿ ಘೋಷಿಸಲಾಗಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌

ರಾಜ್ಯದಲ್ಲಿ ಒಟ್ಟು 33.15 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಪ್ರಸಕ್ತ ಆರ್ಥಿಕ ವರ್ಷ ₹13,019 ಕೋಟಿ ಸಬ್ಸಿಡಿ ನೀಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಕೃಷಿ ಪಂಪ್‌ಸೆಟ್‌ಗಳಿಗೆ ತೆಲಂಗಾಣ ಮಾದರಿಯಲ್ಲಿ ಮೀಟರ್‌ ಅಳವಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆಗ ಎಷ್ಟು ಪ್ರಮಾಣದಲ್ಲಿ ವಿದ್ಯುತ್‌ ಬಳಕೆಯಾಗುತ್ತದೆ ಎನ್ನುವ ಖಚಿತ ವಿವರಗಳು ದೊರೆಯುತ್ತವೆ ಮತ್ತು ನಿಗದಿಪಡಿಸಿದ ವಿದ್ಯುತ್‌ ಬಳಕೆ ನಂತರ ಹೆಚ್ಚುವರಿಯಾಗಿ ಉಪಯೋಗಿಸಿದರೆ ಪ್ರೋತ್ಸಾಹಧನ ನೀಡಬಹುದು ಎಂದು ಎಚ್‌.ಎನ್‌. ಮಂಜುನಾಥ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT