ಶುಕ್ರವಾರ, ಮೇ 20, 2022
19 °C

Prajavani Live ಸಂವಾದ: ವಿಧಾನ ಪರಿಷತ್ ಫಲಿತಾಂಶ–ಯಾರಿಗೆ ಏನು ಲಾಭ?

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಗದಗ: ವಿಧಾನ ಪರಿಷತ್‌ಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ– ಕಾಂಗ್ರೆಸ್‌ ಸಮಬಲ ಸಾಧಿಸಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ ಎರಡು ಸ್ಥಾನ ಗೆದ್ದುಕೊಂಡಿದೆ. ಇಬ್ಬರು ಪಕ್ಷೇತರರೂ ಗೆಲುವಿನ ನಗು ಬೀರಿದ್ದಾರೆ.

‘ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ಯಾರಿಗೆ ಏನು ಲಾಭ?’ ಎನ್ನುವ ಕುರಿತು ಪ್ರಜಾವಾಣಿ ಮಂಗಳವಾರ ಆಯೋಜಿಸಿದ್ದ ಫೇಸ್‌ಬುಕ್‌ ಲೈವ್‌ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಸಂಕ್ಷಿಪ್ತ ರೂಪ ಇಲ್ಲಿದೆ.

‘ಗ್ರಾಮೀಣ ಜನರ ಬದುಕು ಹಸನುಗೊಳಿಸಿ’
ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಣ, ಕೂಪನ್‌, ವಾಷಿಂಗ್‌ ಮಷಿನ್‌, ತಿರುಪತಿ ಲಡ್ಡು ವಿತರಣೆ ಆಗಿದೆ. ಆಣೆ ಪ್ರಮಾಣ ಮಾಡಿಸಿಕೊಂಡು ಮತ ಹಾಕಿಸಿಕೊಂಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರನ್ನೂ ನೈತಿಕ ಭ್ರಷ್ಟತೆ ತಳ್ಳುತ್ತಿದ್ದಾರೆ.

ಮೂರು ಪಕ್ಷಗಳ ಅಭ್ಯರ್ಥಿಗಳಿಗೂ ನಾವು ಹಣ ಖರ್ಚು ಮಾಡಿಲ್ಲ ಎಂದು ಹೇಳುವ ಎದೆಗಾರಿಕೆ ಇದೆಯೇ? ಗೆಲ್ಲುವ ವಿಶ್ವಾಸ ಇದ್ದ ಮೇಲೆ ಲಂಗು ಲಗಾಮಿಲ್ಲದೇ ನಾಲಗೆ ಹರಿ ಬಿಟ್ಟಿದ್ದು ಏಕೆ? ಅಕ್ರಮ ಮಾರ್ಗ ಅನುಸರಿಸುವ, ಧರ್ಮದ ವಿಚಾರ ತರುವ ಅಗತ್ಯ ಏನಿತ್ತು? ಅಭಿವೃದ್ಧಿಗೆ ಕೇವಲ ಕ್ರಿಯಾಯೋಜನೆ ಮಾಡಿದರೆ ಸಾಲದು. ಗ್ರಾಮೀಣ ಜನರ ಬದುಕು ಹಸನುಗೊಳಿಸಲು ಶ್ರಮಿಸಬೇಕು.
–ಕೆ.ಎಸ್‌.ವಿಮಲಾ, ಜನವಾದಿ ಮಹಿಳಾ ಸಂಘಟನೆ, ರಾಜ್ಯ ಉಪಾಧ್ಯಕ್ಷೆ

**

‘ಜೆಡಿಎಸ್‌ ಧೃತಿಗೆಡಿಸಲು ಸಾಧ್ಯವಿಲ್ಲ’
ಬಿಜೆಪಿ–ಕಾಂಗ್ರೆಸ್‌ ಕೆಲವು ಕ್ಷೇತ್ರದಲ್ಲಿ ಒಳಒಪ್ಪಂದ ಮಾಡಿಕೊಂಡು ಒಂದೊಂದೇ ಅಭ್ಯರ್ಥಿ ಹಾಕಿ ಗೆಲುವು ಸಾಧಿಸಿವೆ. ಇನ್ನು ಕೆಲವೆಡೆ ನಮ್ಮ ಸಹಾಯ ಪಡೆದು ಗೆಲುವು ಸಾಧಿಸಿದ್ದಾರೆ.

ಕುಟುಂಬ ರಾಜಕಾರಣ ಮಾಡುತ್ತಿರುವುದು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳೇ ಹೊರತು ಜೆಡಿಎಸ್‌ ಅಲ್ಲ. ಹಾಸನದಲ್ಲಿ ಮಾತ್ರ ಸೂರಜ್‌ ರೇವಣ್ಣ ಅವರಿಗೆ, ಉಳಿದ ಕಡೆಗಳಲ್ಲಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್‌ ನೀಡಲಾಗಿದೆ.

ಚುನಾವಣೆಯಲ್ಲಿ ಹಣ ಚೆಲ್ಲುವ ಕಾರಣಕ್ಕೆ ವಿಧಾನ ಪರಿಷತ್‌ನ ಅವಶ್ಯಕತೆ ಇಲ್ಲ ಎಂದು ಹೇಳುವುದು ಸರಿಯಲ್ಲ. ಎಲ್ಲ ಪಕ್ಷಗಳು ಅಧಿಕಾರ ಹಿಡಿಯಲು ವಾಮಮಾರ್ಗ ಬಳಸುವುದನ್ನು ನಿಲ್ಲಿಸಿದರೆ ವ್ಯವಸ್ಥೆ ಸರಿ ಹೋಗುತ್ತದೆ.
ಎಲ್‌.ಗಂಗಾಧರ ಮೂರ್ತಿ, ರಾಜ್ಯ ಜೆಡಿಎಸ್‌ ವಕ್ತಾರ

**

‘ಚುನಾವಣಾ ಸುಧಾರಣೆ ಪಕ್ಷದ ಅಜೆಂಡಾ’
ಈ ಬಾರಿಯ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದೆವು. 13 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ ಎಂದು ಭಾವಿಸಿದ್ದೆವು. ಬೆಳಗಾವಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಕೆಲವು ಕಡೆಗಳಲ್ಲಿ ಕಾಂಗ್ರೆಸ್‌ ಕೋಟೆ ಭೇದಿಸಿದ್ದೇವೆ. ಎಂಟು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಿದ್ದೇವೆ.

ಕಾಂಗ್ರೆಸ್‌ನವರು ಜನತಾದಳ ಪ್ರಾಬಲ್ಯ ಇರುವ ಸ್ಥಳದಲ್ಲಿ ಮಾತ್ರ ಗೆದ್ದಿದ್ದಾರೆ. ವಿಧಾನಪರಿಷತ್‌ನಲ್ಲಿ ನಮ್ಮ ಬಲ ಆರರಿಂದ 11ಕ್ಕೆ ಏರಿಕೆಯಾಗಿರುವುದು ಸಾಮಾನ್ಯ ಏನಲ್ಲ. ಚುನಾವಣಾ ಸುಧಾರಣೆ ನಮ್ಮ ಪಕ್ಷದ ಮುಂದಿನ ಅಜೆಂಡಾ ಕೂಡ ಆಗಿದೆ. ಅಭ್ಯರ್ಥಿಗಳ ಆಯ್ಕೆಯಿಂದಲೇ ಸುಧಾರಣೆ ಆಗಬೇಕಿದೆ. ಭ್ರಷ್ಟಾಚಾರದ ಚುನಾವಣೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕು.
ಅಶ್ವತ್ಥನಾರಾಯಣಗೌಡ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

**

‘ವಿಧಾನಸಭೆ ಚುನಾವಣೆಗೆ ದಿಕ್ಸೂಚಿ’
ಈಗ ಫಲಿತಾಂಶ ಬಂದಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಕ್ಷೇತ್ರಗಳನ್ನೂ ಭೇದಿಸಿರುವ ಕಾಂಗ್ರೆಸ್‌ ತನ್ನ ಬಾವುಟ ಹಾರಿಸಿದೆ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಮತಗಳನ್ನು ಪಡೆದು ಗೆದ್ದಿದೆ. ಈ ಚುನಾವಣೆ 2023ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಆಗಿದೆ.

ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಚಾಲೆಂಜ್‌ ಮಾಡಿದ್ದರು. ಲಕ್ಷ್ಮಿ ಪಟಾಕಿ ಒಡೆಯುತ್ತೇವೆ ಎಂದು ತೊಡೆ ತಟ್ಟಿದ್ದರು. ಅವರ ನಡೆಯ ಕುರಿತು ಬಿಜೆಪಿ ತನ್ನ ನಿಲುವು ತಿಳಿಸಬೇಕು. ಅಧಿಕಾರ ಹಿಡಿಯಲು ಬಿಜೆಪಿ ಈ ಹಿಂದೆ ಅಪರೇಷನ್‌ ಕಮಲ ಮಾಡಿದೆ. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕು.
–ಎಂ.ಲಕ್ಷ್ಮಣ, ಕೆಪಿಸಿಸಿ ವಕ್ತಾರ

 

ಲೈವ್ ಇಲ್ಲಿ ನೋಡಿ

ಫೇಸ್‌ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್‌ನಲ್ಲಿ ಏಕಕಾಲಕ್ಕೆ ನೇರಪ್ರಸಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು