ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಯಾವುದಕ್ಕೂ ಅಂಜುವ ಮಗ ಅಲ್ಲ; ಮತ್ತೆ ಗುಡುಗಿದ ಶಾಸಕ ಯತ್ನಾಳ್

Last Updated 6 ಜನವರಿ 2021, 9:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಯಾವುದಕ್ಕೂ ಅಂಜುವ ಮಗ ಅಲ್ಲ. ನಾನು ಉತ್ತರ ಕರ್ನಾಟಕದವನು. ಅಭಿವೃದ್ಧಿ ಪರ ನನ್ನ ಧ್ವನಿ. ಅದನ್ನು ಯಾರೂ ನಿಲ್ಲಿಸಲು ಆಗುವುದಿಲ್ಲ. ಯಾವಾಗ ಬಾಣ ಬಿಡಬೇಕು, ಯಾವಾಗ ಮೌನವಾಗಿರಬೇಕು ನನಗೆ ಗೊತ್ತಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮತ್ತೆ ಕಿಡಿಕಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಮೊನ್ನೆ ಶಾಸಕರ ಸಭೆಯಲ್ಲಿ ಕೂಡ ಒಬ್ಬನೇ ಗಲಾಟೆ ಮಾಡಿದ್ದು. ಉಳಿದ ಶಾಸಕರು ಎಲ್ಲರೂ ಸುಮ್ಮನಿದ್ದರು. ಹಾದಿಬೀದಿಯಲಿ ಕೆಲವರು ಹೇಳಿಕೆ ಕೊಡುತ್ತಿದ್ದಾರೆ’ ಎಂದರು.

‘ಯಡಿಯೂರಪ್ಪ ಸಭೆಯಲ್ಲೊ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಎಂದು ಗೋವಿಂದ ಕಾರಜೋಳ ಹೇಳಿದ್ದು ಸತ್ಯ. ಯಡಿಯೂರಪ್ಪ ಮನೆಗೆ ನಾನು ಮಂತ್ರಿ ಸಲುವಾಗಿ ಎಂದೂ ಹೋಗಿಲ್ಲ. ಜನರ ಭಾವನೆಗಳನ್ನು ಹೇಳುವ ಕೆಲಸ ಮಾಡಿದ್ದೇನೆ. ನಾನು ಕ್ಷಮೆ ಯಾಚಿಸಿದ್ದೇನೆ ಅಂತ ಹೇಳೋನು ನಾನಲ್ಲ’ ಎಂದರು.

‘ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡುತ್ತೇನೆ. ಜನಪರ ವಿಚಾರಗಳನ್ನೇ ನಾನು ಮಾತನಾಡಿದ್ದೇನೆ. ಸರ್ಕಾರ ತಪ್ಪು ಮಾಡಿದಾಗ ನಾನು ಎಚ್ಚರಿಸಿದ್ದೇನೆ. ಅದು ಪಕ್ಷ ವಿರೋಧಿ ಕೆಲಸ ಅಲ್ಲ. ನಾನು ಮಾತನಾಡುವಾಗ ಯಾರೂ ಖಂಡಿಸಿಲ್ಲ. ಒಬ್ಬರೇ ಒಬ್ಬರು ಗಲಾಟೆ ಮಾಡಿದರು, ಬಿಟ್ಟರೆ ಬೇರೆ ಯಾರೂ ನನಗೆ ವಿರೋಧ ಮಾಡಲಿಲ್ಲ. ಅಂದರೆ, ಉಳಿದ ಶಾಸಕರಿಗೂ ನಾನು ಹೇಳಿದ್ದು ಸಹಮತ ಇದೆ ಅಂತ ಅರ್ಥ’ ಎಂದರು.

‘ಫಟ್ ಅಂತ ಸಚಿವರಾಗಬೇಕು ಎಂದು ಒಬ್ಬರು ಅತಿ ನಿಷ್ಠೆ ತೋರಿಸಿದ್ದಾರೆ. ಮುಖ್ಯಮಂತ್ರಿ ಆಗಬೇಕು ಅಂತ ಕೆಲವರಿಗೆ ಇರಬಹುದು. ಯಡಿಯೂರಪ್ಪಗೆ ನಾನು ಮಾತಾಡಿದಾಗ ಬೇಜಾರಾಯ್ತೋ ಇಲ್ಲೋ ನನಗೆ ಗೊತ್ತಿಲ್ಲ’ ಎಂದೂ ಹೇಳಿದರು.

ಮಾಧ್ಯಮಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ, ‘ನನ್ನ ಮೇಲೆ ಇನ್ನೂ ಶಿಸ್ತು ಸಮಿತಿಗೆ ಶಿಫಾರಸು ಆಗಿಲ್ಲ. ಮಾಧ್ಯಮದವರಿಗೆ ಎಲ್ಲಿಂದಲೋ ಸೂಚನೆ ಬರುತ್ತದೆ. ಶಿವಾನಂದ ಸರ್ಕಲ್ ಅಕ್ಕಪಕ್ಕ ಇದ್ದವರಿಂದ ಸೂಚನೆ ಬರತ್ತದೆ. ಬೆಳಿಗ್ಗೆ ಯತ್ನಾಳ್ ಸರಿಯಾಗಿ ಹೇಳಿದ್ದಾರೆ ಅಂತೀರಿ. ಸಂಜೆ ನಾಲಿಗೆ ಹರಿಬಿಟ್ಟ ಯತ್ನಾಳ್ ಅಂತ ಹಾಕ್ತೀರಿ. ಸಂಜೆ ಆ ಹುಲಿ ಈ ಹುಲಿ ಅಂತ ಹೇಳ್ತೀರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT