ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KCET 2022 results: ಐದು ವಿಭಾಗದಲ್ಲೂ ಬೆಂಗಳೂರಿನ ವಿದ್ಯಾರ್ಥಿಗಳೇ ಪ್ರಥಮ

Last Updated 30 ಜುಲೈ 2022, 12:25 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜೂನ್‌ 16 ಮತ್ತು 17ರಂದು ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಎಂಜಿನಿಯರಿಂಗ್ ಸೇರಿದಂತೆ ಎಲ್ಲ ಐದೂ ವಿಭಾಗಗಳಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಮೊದಲ ರ್‍ಯಾಂಕ್‌ ಗಳಿಸಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಯಲಹಂಕ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಅಪೂರ್ವ್‌ ಟಂಡನ್‌, ಪಶುವೈದ್ಯ ಹಾಗೂ ನ್ಯಾಚುರೋಪಥಿ, ಯೋಗ ವಿಜ್ಞಾನ ಕೋರ್ಸ್‌ಗಳಲ್ಲಿ ನ್ಯಾಷನಲ್‌ ಸೆಂಟರ್ ಫಾರ್ ಎಕ್ಸಲೆನ್ಸ್‌ ಕಾಲೇಜಿನ ರಿಷಿಕೇಶ್‌ ನಾಗಭೂಷಣ್‌, ಬಿಎಸ್ಸಿ (ಕೃಷಿ)ಯಲ್ಲಿ ಹಾಲ್‌ ಪಬ್ಲಿಕ್‌ ಸ್ಕೂಲ್‌ನ ಅರ್ಜುನ್‌ ರವಿಶಂಕರ್, ಬಿ- ಫಾರ್ಮಾದಲ್ಲಿ ನಾರಾಯಣ ಇ– ಟೆಕ್ನೋ ಸ್ಕೂಲ್‌ನ ಆರ್‌.ಕೆ.ಶಿಶಿರ್‌ ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ.

ಐದೂ ವಿಭಾಗಗಳಲ್ಲಿ ಮೊದಲ 10 ರ್‍ಯಾಂಕ್‌ಗಳ ಸಿಂಹಪಾಲು ಬೆಂಗಳೂರಿನ ವಿದ್ಯಾರ್ಥಿಗಳು ಪಡೆದರೆ, ನಂತರ ಸ್ಥಾನ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪಾಲಾಗಿವೆ. ಒಂದು ಸ್ಥಾನ ತುಮಕೂರು ಪಡೆದರೆ ಇತರೆ ಯಾವ ಜಿಲ್ಲೆಗಳು 10ರ ಒಳಗೆ ಸ್ಥಾನ ಪಡೆದಿಲ್ಲ. ರ್‍ಯಾಂಕ್‌ಗಳಲ್ಲಿ ಸಿಬಿಎಸ್‌ಇ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಪ್ರಕಟಿಸಿದರು.

‌‘ಪ್ರಶ್ನೆ ಪತ್ರಿಕೆಯ ಮುದ್ರಣ, ತಾಂತ್ರಿಕ ಲೋಪದ ಕಾರಣ ಸಿಇಟಿಯಲ್ಲಿ ಈ ಬಾರಿ ಗಣಿತ ವಿಷಯದಲ್ಲಿ 5, ಭೌತವಿಜ್ಞಾನ, ರಸಾಯನಶಾಸ್ತ್ರ ವಿಷಯದಲ್ಲಿ ತಲಾ 1 ಅಂಕ ಕೃಪಾಂಕ ನೀಡಲಾಗಿದೆ. ಒಟ್ಟು 7 ಅಂಕಗಳು ಅಭ್ಯರ್ಥಿಗಳಿಗೆ ಸಿಕ್ಕಿವೆ’ ಎಂದು ಮಾಹಿತಿ ನೀಡಿದರು.

2,10,829 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೆರಿಟ್‌ ಪಟ್ಟಿ ಸಿದ್ಧಪಡಿಸಿದ ನಂತರ ಎಂಜಿನಿಯರಿಂಗ್‌ ಕೋರ್ಸ್‌ಗೆ 1.71,656 ವಿದ್ಯಾರ್ಥಿಗಳು, ಕೃಷಿಗೆ 1.39,968, ಪಶುಸಂಗೋಪನೆಗೆ 1,42,820 ಯೋಗ ಮತ್ತು ನ್ಯಾಚುರೋಪತಿಗೆ 1,42,750 ಹಾಗೂ ಬಿ.ಫಾರ್ಮಾಗೆ 1,74,568 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ವೈದ್ಯಕೀಯ ಕೋರ್ಸ್‌ ಪ್ರವೇಶ: ‘ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) ಫಲಿತಾಂಶ ಬಂದ ನಂತರ ಅದರ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗು ಹೋಮಿಯೋಪಥಿ ಕೋರ್ಸುಗಳ ಪ್ರವೇಶಕ್ಕೆ ಪರಿಗಣಿಸಲಾಗುವುದು. ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ಎನ್‍ಎಟಿಎ-2022) ಪರೀಕ್ಷೆಯ ಅಂಕಗಳ ಆಧಾರದಲ್ಲಿ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರ‍್ಯಾಂಕ್‌ ಪ್ರಕಟಿಸಲಾಗುವುದು’ ಎಂದೂ ಸಚಿವರು ಮಾಹಿತಿ ನೀಡಿದರು

ಸಿಇಟಿ ಫಲಿತಾಂಶಕ್ಕೆ http://kea.kar.nic.in ಮತ್ತು http://karresults.nic.in. ಸಂಪರ್ಕಿಸಬಹುದು.

ಆ.5ರಿಂದ ದಾಖಲೆಗಳ ಪರಿಶೀಲನೆ ಆರಂಭ

ಸಿಇಟಿ ಪಟ್ಟಿಯಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ದಾಖಲೆ ಪರಿಶೀಲನಾ ಕಾರ್ಯ ಆ.5ರಿಂದ ಆರಂಭವಾಗಲಿದೆ. ಪೂರ್ಣ ವಿವರಗಳನ್ನು ಪ್ರಾಧಿಕಾರ ಆ.1ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.

ದಾಖಲಾತಿಯನ್ನು ಆನ್‌ಲೈನ್‌ ಮುಖಾಂತರ ಪರಿಶೀಲನೆ ನಡೆಸಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ, ಸೀಟು ಹಂಚಿಕೆಯೂ ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ತಪ್ಪು ಮಾಹಿತಿಗಳ ತಿದ್ದುಪಡಿಗೆ ಮತ್ತೆ ಅವಕಾಶ ಇಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT