ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ ಪ್ಯಾಕೇಜ್ ನೆಪಕ್ಕೆ ಮಾತ್ರ: ಡಿ.ಕೆ.ಶಿವಕುಮಾರ್

Last Updated 19 ಮೇ 2021, 9:17 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ನಿಂದ ಸಂತ್ರಸ್ತರಾದವರ ನೆರವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿರುವ ₹ 1,215 ಕೋಟಿಯ ಪ್ಯಾಕೇಜ್ ನೆಪಕ್ಕೆ ಮಾತ್ರ. ಬಡವರಿಗೆ ನೆರವಾಗುವ ಉದ್ದೇಶ ಇದರಲ್ಲಿ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕೊರೊನಾ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಕಳೆದ ಬಾರಿಯೂ ಇದೇ ರೀತಿ ಪರಿಹಾರ ಘೋಷಿಸಿದ್ದರು. ಚಾಲಕರು, ನೇಕಾರರು, ಸವಿತಾ ಸಮಾಜದವರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ತಲುಪಲೇ ಇಲ್ಲ’ ಎಂದರು.

‘ಬಡವರಿಗೆ ನೆರವಾಗಲು ಸರ್ಕಾರ ಬಯಸುವುದಾರೆ ಕನಿಷ್ಠ ತಲಾ ₹10 ಸಾವಿರ ನೀಡಬೇಕು. ಪರಿಹಾರ ವಿತರಿಸುವ ಜವಾಬ್ದಾರಿಯನ್ನು ಪಂಚಾಯ್ತಿಗೆ ನೀಡಲಿ. ತಮ್ಮ ವ್ಯಾಪ್ತಿಯಲ್ಲಿರುವ ಸಾಂಪ್ರದಾಯಿಕ ವೃತ್ತಿ ಅವಲಂಬಿತರನ್ನು ಪಂಚಾಯಿತಿಯವರು, ಪಾಲಿಕೆಯವರು ಗುರುತಿಸಿ ಚೆಕ್ ಮೂಲಕ ಹಣ ನೀಡಲಿ. ಅದು ಬಿಟ್ಟು ಆ್ಯಪ್‌ನಲ್ಲಿ ನೋಂದಣಿ ಮಾಡಿಸಿ, ಬ್ಯಾಂಕ್ ಮೂಲಕ ಪಾವತಿಸುತ್ತೇವೆಂಂದರೆ ಆಗದ ಕೆಲಸ. ಶಿಕ್ಷಕರು, ಪಂಚಾಯಿತಿಯವರನ್ನು ಬಳಸಿಕೊಂಡು ಹಣ ಹಂಚಲಿ. ಇಲ್ಲದಿದ್ದರೆ ಇದು ಕೇವಲ ಕಾಗದದ ಮೇಲಿನ ಘೋಷಣೆಯಾಗಿ ಉಳಿಯಲಿದೆ’ ಎಂದರು.

‘ನಾವು ಒತ್ತಡ ಹಾಕಿದ್ದೇವೆ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಈ ಪ್ಯಾಕೇಜ್ ಘೋಷಿಸಲಾಗಿದೆ. ಜನರ ಹಿತಕ್ಕಾಗಿ ಘೋಷಿಸಿದ ಪ್ಯಾಕೇಜ್ ಅಲ್ಲ. ರೈತರಿಗೆ ಬೆಂಬಲ ಬೆಲೆ ಏನಾದರೂ ಘೋಷಣೆ ಮಾಡಿದ್ದಾರಾ. ಬ್ಯಾಂಕ್ ಜತೆ ನೇರವಾಗಿ ಮಾತನಾಡಿದ್ದಾರಾ. ಬಡ್ಡಿ ಮನ್ನಾ ಮಾಡಿಸಿದ್ದಾರಾ. ಕಳೆದ ವರ್ಷ ಹೂ ಬೆಳೆಗಾರರಿಗೆ ಘೋಷಿಸಿದ ₹ 25 ಸಾವಿರ ಯಾರಿಗೆ ತಲುಪಿದೆಯೆಂದು ಲೆಕ್ಕ ಕೊಡಲಿ. ಈಗ ಅದನ್ನು ₹ 10 ಸಾವಿರಕ್ಕೆ ಕುಗ್ಗಿಸಿದ್ದಾರೆ’ ಎಂದರು.

‘ಕೆಲಸ ಕಳೆದುಕೊಂಡವರ ಬಗ್ಗೆ ಸಮೀಕ್ಷೆ ಮಾಡಲಿ. ಕಟ್ಟಡ ಕಾರ್ಮಿಕರಿಗೂ ಘೋಷಿಸಿರುವುದು ಏನೇನೂ ಸಾಲದು. ಕಳೆದ ವರ್ಷದ ಪ್ಯಾಕೇಜ್ ವಿಫಲವಾಗಿದೆ. ಕಳೆದ ವರ್ಷ 7.5 ಲಕ್ಷ ಚಾಲಕರಲ್ಲಿ ಕೇವಲ ಒಂದು ಲಕ್ಷದಷ್ಟು ಮಂದಿಗೆ ಮಾತ್ರ ಕೊಟ್ಟಿದ್ದಾರೆ’ ಎಂದರು.

‘ಇಂದಿರಾ ಕ್ಯಾಂಟೀನ್‌ನಲ್ಲಿ ಗುರುತಿನ ಚೀಟಿ ಕೊಟ್ಟು ಆಹಾರ ಪಡೆಯಲು ಹೇಳುತ್ತಾರೆ. ನಾವು ವಿರೋಧಿಸಿದ ನಂತರ ಅದನ್ನು ರದ್ದು ಮಾಡಿದರು. ಈಗ ಮತ್ತೆ ಗುರುತಿನ ಚೀಟಿ ಕೇಳುತ್ತಿದ್ದಾರೆ. ಸರ್ಕಾರದ ನಿರ್ವಹಣೆಯಲ್ಲಿ ನಮಗೆ ಸಮಾಧಾನ ಇಲ್ಲ. ನಂಬಿಕೆಯೂ ಇಲ್ಲ. ಪರಿಹಾರ ನೀಡುವುದಾದರೆ ವ್ಯವಸ್ಥಿತವಾಗಿ ಕೊಡಲಿ’ ಎಂದು ಆಗ್ರಹಿಸಿದರು.

‘ಅಸಂಘಟಿತ ಕಾರ್ಮಿಕರು, ಹಳ್ಳಿಯಲ್ಲಿ ಕೆಲಸ ಮಾಡುವವರಿಗೆ ಏನೂ ಕೊಟ್ಟಿಲ್ಲ. ಗ್ರಾಮೀಣ ಭಾಗದಲ್ಲಿ ಕೋವಿಡ್‌ ವಾರಿಯರ್ಸ್‌ಗಳಾಗಿ ಕೆಲಸ ಮಾಡುತ್ತಿರುವವರು, ವಾಟರ್ ಮನ್, ಲೈನ್ ಮನ್, ಮುನ್ಸಿಪಾಲಿಟಿ ಕಾರ್ಮಿಕರನ್ನು ವಾರಿಯರ್ಸ್ ಎಂದು ಪರಿಗಣಿಸಿ ವಿಮೆ ನೀಡಬೇಕು. ಒಂದೊಮ್ಮೆ ಅವರು ಮೃತಪಟ್ಟರೆ ಕುಟುಂಬದವರಿಗೆ ಪರಿಹಾರ ನೀಡಬೇಕು’ ಎಂದೂ ಒತ್ತಾಯಿಸಿದರು.

‘ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಪರೀಕ್ಷೆ ನಡೆಸಬೇಕು. ಅತಿ ಹೆಚ್ಚು ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳನ್ನು ಇಟ್ಟುಕೊಂಡು ಪರೀಕ್ಷೆ ನಡೆಸಲು ಆಗುವುದಿಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT