ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿಗೆ ಪ್ರತಿಕ್ರಿಯಿಸುವ ನೆಪದಲ್ಲಿ ಹಲಾಲ್‌, ಹಿಜಾಬ್‌ ಘಟನೆ ಟೀಕಿಸಿದ ಕೆಟಿಆರ್‌

Last Updated 4 ಏಪ್ರಿಲ್ 2022, 16:08 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಆರೋಗ್ಯಕರ ಸ್ಪರ್ಧೆ ನಡೆಸಬೇಕು. ಆದರೆ ಹಲಾಲ್ ಮತ್ತು ಹಿಜಾಬ್ ವಿಚಾರದ ಮೇಲೆ ಅಲ್ಲ’ ಎಂದು ತೆಲಂಗಾಣ ನಗರಾಭಿವೃದ್ಧಿ ಮತ್ತು ಐಟಿ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ಸೋಮವಾರ ಹೇಳಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ ಶಿವಕುಮಾರ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸುವ ವೇಳೆ ಕೆಟಿಆರ್‌ ಅವರಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ.

ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಯ ಬಗ್ಗೆ ರವೀಶ್‌ ನರೇಶ್‌ ಎಂಬುವವರು ಮಾರ್ಚ್‌ 30ರಂದು ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೆಟಿಆರ್‌, ನೀವು ಗಂಟು ಮೂಟೆ ಕಟ್ಟಿಕೊಂಡು ಹೈದರಾಬಾದ್‌ಗೆ ಬನ್ನಿ. ಇಲ್ಲಿ ಮೂಲಸೌಕರ್ಯ, ಸಾಮಾಜಿಕ ವ್ಯವಸ್ಥೆ ಚನ್ನಾಗಿದೆ’ ಎಂದು ಹೇಳಿದ್ದರು.

ಕೆಟಿಆರ್‌ ಅವರ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಡಿಕೆಶಿ, ‘ಆತ್ಮೀಯ ಕೆಟಿಆರ್‌ ಅವರೇ, ನಿಮ್ಮ ಸವಾಲನ್ನು ನಾನು ಸ್ವೀಕರಿಸಿದ್ದೇನೆ. 2023ರ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಭಾರತದ ಉತ್ತಮ ನಗರ ಎಂಬ ಬೆಂಗಳೂರಿನ ‘ವೈಭವ‘ ಮರುಸ್ಥಾಪನೆಯಾಗಲಿದೆ’ ಎಂದು ಟ್ವಿಟರ್‌ನಲ್ಲಿ ಹೇಳಿದ್ದರು.

ಇದಕ್ಕೆ ಉತ್ತರಿಸಿರುವ ಕೆಟಿಆರ್‌, ‘ಆತ್ಮೀಯ ಡಿ.ಕೆ ಶಿವಕುಮಾರ್‌ ಅಣ್ಣ, ನನಗೆ ಕರ್ನಾಟಕದ ರಾಜಕೀಯದ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ ಮತ್ತು ಯಾರು ಗೆಲ್ಲುತ್ತಾರೆ ಎಂಬುದೂ ತಿಳಿದಿಲ್ಲ. ಆದರೆ, ಸವಾಲನ್ನು ಒಪ್ಪಿದ್ದೇನೆ. ನಮ್ಮ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ನಮ್ಮ ರಾಷ್ಟ್ರದ ಸಮೃದ್ಧಿಗಾಗಿ ಹೈದರಾಬಾದ್ ಮತ್ತು ಬೆಂಗಳೂರು ಆರೋಗ್ಯಕರವಾಗಿ ಸ್ಪರ್ಧಿಸಲಿ. ಮೂಲಸೌಕರ್ಯ, ಐಟಿ ಬಿಟಿ ಕಡೆಗೆ ಗಮನಹರಿಸೋಣ. ಆದರೆ, ಹಲಾಲ್‌ ಮತ್ತು ಹಿಜಾಬ್‌ ಕಡೆಗೆ ಅಲ್ಲ’ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ವಾದ ವಿವಾದಕ್ಕೆ ಕಾರಣವಾಗಿದ್ದು ಈ ಟ್ವೀಟ್‌

ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲದಲ್ಲಿ ಸ್ಟಾರ್ಟ್‌ಅಪ್‌ಗಳು ಈಗಾಗಲೇ ಶತಕೋಟಿ ಡಾಲರ್‌ನಷ್ಟು ತೆರಿಗೆ ನೀಡುತ್ತಿವೆ. ಆದರೂ ನಮ್ಮಲ್ಲಿ ರಸ್ತೆಗಳು ಹದಗೆಟ್ಟಿವೆ. ಬಹುತೇಕ ದಿನನಿತ್ಯ ವಿದ್ಯುತ್ ಕಡಿತವಾಗುತ್ತಿದೆ, ಕಲುಷಿತ ನೀರು ಪೂರೈಕೆಯಾಗುತ್ತಿದೆ, ಬಳಸಲಾಗದ ಪಾದಚಾರಿ ಮಾರ್ಗಗಳಿವೆ, ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲ ಸೌಕರ್ಯವನ್ನು ಹೊಂದಿವೆ ಎಂದು ರವೀಶ್‌ ನರೇಶ್‌ ಎಂಬುವವರು ಟ್ವೀಟ್‌ ಮಾಡಿದ್ದರು. ಸದ್ಯ ಈ ಟ್ವೀಟ್‌ ಇಷ್ಟು ವಾದ ವಿವಾದಗಳನ್ನು ಹುಟ್ಟು ಹಾಕಿದೆ. ಪ್ರತ್ಯುತ್ತರಗಳ ಸರಣಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT