ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಗೌಡ– ಪಂಚಮಸಾಲಿ ಎರಡೂ ಒಂದೇ: ಹಿಂದುಳಿದ ವರ್ಗಗಳ ಆಯೋಗದ ಎದುರು ವಾದ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ವಾದ ಮಂಡನೆ
Last Updated 28 ಡಿಸೆಂಬರ್ 2021, 17:05 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತ ಪಂಚಮಸಾಲಿ, ಮಲೆಗೌಡ ಮತ್ತು ಲಿಂಗಾಯತಗೌಡ ಎಂದು ಕರೆಯಲ್ಪಡುವ ಸಮಾಜಗಳನ್ನು ಪಂಚಮಸಾಲಿಗಳ ಪರ್ಯಾಯ ನಾಮಗಳೆಂದು ಪರಿಗಣಿಸಿ 2ಎ ಮೀಸಲಾತಿ ಕಲ್ಪಿಸಬೇಕು’ ಎಂದು ಲಿಂಗಾಯತ ಪಂಚಮಸಾಲಿಗೌಡ ಮಹಾಸಭಾದ ಕಾನೂನು ಘಟಕವುಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ವಾದ ಮಂಡಿಸಿತು.

ಆಯೋಗದ ಕಚೇರಿಯಲ್ಲಿ ಮಂಗಳವಾರ ನಡೆದ ವಿಚಾರಣೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮೈಸೂರು ಹೊಸಮಠದ ಚಿದಾನಂದಸ್ವಾಮೀಜಿ, ಪಂಚಮಸಾಲಿಗೌಡ ಲಿಂಗಾಯತ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ ನೇತೃತ್ವದ ನಿಯೋಗ ಹಾಜರಾಗಿ ವಿವರಣೆ ನೀಡಿತು. ನಿಯೋಗದ ಪ‍ರವಾಗಿ ಕಾನೂನು ಘಟಕದ ಅಧ್ಯಕ್ಷ ದಿನೇಶ್ ಪಾಟೀಲ ವಾದ ಮಂಡಿಸಿದರು.

‘ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪಂಚಮಸಾಲಿ, ಮಲೆನಾಡಿನಲ್ಲಿ ಮಲೆಗೌಡ ಹಾಗೂ ಮೈಸೂರು ಪ್ರಾಂತ್ಯದ 14 ಜಿಲ್ಲೆಗಳಲ್ಲಿ ಲಿಂಗಾಯತಗೌಡ ಎಂದು ಕರೆಯಲಾಗುತ್ತಿದೆ. ಮೈಸೂರು ಗೆಜೆಟ್, ಪಂಚಮಸಾಲಿ ದಾಖಲೆಗಳು, ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಪುಸ್ತಕಗಳಲ್ಲಿ ಇದನ್ನೇ ಉಲ್ಲೇಖಿಸಲಾಗಿದೆ’ ಎಂದು ದಿನೇಶ್ ಪಾಟೀಲ ಅವರು ಆಯೋಗಕ್ಕೆ ವಿವರ ಸಲ್ಲಿಸಿದರು.

‘ಲಿಂಗಾಯತ ಗೌಡ ಹಾಗೂ ಪಂಚಮಸಾಲಿಗಳ ಜೀವನ ಕ್ರಮ, ಧಾರ್ಮಿಕ ಮತ್ತು ಕೃಷಿ ಪದ್ಧತಿಗಳು ಒಂದೇ ರೀತಿ ಇವೆ. ಆದ್ದರಿಂದ ಪರ್ಯಾಯ ನಾಮ ಎಂದು ಪರಿಗಣಿಸಿ ಅವರಿಗೂ ನ್ಯಾಯ ಒದಗಿಸಬೇಕು’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.

ವಾದ ಆಲಿಸಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ, ‘ಚಾಮರಾಜನಗರ, ಮೈಸೂರು ಹಾಗೂ ಕೆಲವು ಜಿಲ್ಲೆಗಳಲ್ಲಿ ಸರ್ವೆ ಮಾಡಿಸಿ ಮಾಹಿತಿ ಸಂಗ್ರಹಿಸಲಾಗುವುದು’ ಎಂದು ತಿಳಿಸಿದರು.

ಯುಗಾದಿ ವೇಳೆಗೆ ಮೀಸಲಾತಿಯ ವಿಶ್ವಾಸ

‘ಈ ಹಿಂದೆ ಮುಖ್ಯಮಂತ್ರಿ ಮನೆ ಬಾಗಿಲಿಗೆ ನಾವೇ ಹೋಗಬೇಕಿತ್ತು. ಈಗ ಮುಖ್ಯಮಂತ್ರಿ ಅವರೇ ಹುಬ್ಬಳ್ಳಿಯಲ್ಲಿ ನಮ್ಮ ಸಭೆಗೆ ಬಂದು ಅಹವಾಲು ಆಲಿಸಿದ್ದಾರೆ. ಯುಗಾದಿ ವೇಳೆಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವ ವಿಶ್ವಾಸ ಇದೆ’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಆಯೋಗದ ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ, ‘ಉತ್ತರ ಕರ್ನಾಟಕ ಮಾತ್ರವಲ್ಲದೇ ಹಳೇ ಮೈಸೂರು ಭಾಗದಲ್ಲೂ ಪಂಚಮಸಾಲಿ ಲಿಂಗಾಯತ ಗೌಡರಿದ್ದಾರೆ ಎಂಬುದು ಅರಿವಿಗೆ ಬಂದಿದೆ. ಲಿಂಗಾಯತಗೌಡ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಗ ವಿಚಾರಣೆ ನಡೆಸಿರುವುದು ಸಂತಸದ ವಿಷಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT