ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮಾಜಕ್ಕೆ ದಿಕ್ಸೂಚಿಯಾಗಲಿ: ಬಸವರಾಜ ಬೊಮ್ಮಾಯಿ

66ನೇ ರಾಜ್ಯೋತ್ಸವ ಅಂಗವಾಗಿ 66 ಕನ್ನಡ ಪುಸ್ತಕಗಳ ಲೋಕಾರ್ಪಣೆ
Last Updated 27 ನವೆಂಬರ್ 2021, 19:54 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾಷೆ ಮತ್ತು ಸಾಹಿತ್ಯಕ್ಕೆ ಜಾತಿ, ಧರ್ಮದ ಸೋಂಕು ಇಲ್ಲ. ಇಂದಿನ ಜಾಗತೀಕರಣ, ಉದಾರೀಕರಣದ ಯುಗದಲ್ಲಿ ಅಂತಃಕರಣ ಹೊಂದಿರುವ ಸಾಹಿತ್ಯ ರಚಿಸುವ ಅಗತ್ಯ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಸಪ್ನ ಬುಕ್‌ ಹೌಸ್‌ ಶನಿವಾರ 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ 66 ಕನ್ನಡ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ನಡುವೆ ಬಾಂಧವ್ಯ ಬೆಳೆಸಿ ಕನ್ನಡ ನಾಡಿಗೆ ಹೊಸ ದಿಕ್ಸೂಚಿ ತೋರಿಸಬೇಕು. ಈ ವಿಷಯದಲ್ಲಿ ಸರ್ಕಾರ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಹೇಳಿದರು.

‘ಕನ್ನಡ ನಾಡು ಕೇವಲ ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಸಾಲದು. ಸಾಹಿತ್ಯಿಕವಾಗಿಯೂ ಶ್ರೀಮಂತವಾಗಬೇಕು. ಸಾಹಿತ್ಯದ ಮೂಲಕ ಸತ್ಯದರ್ಶನ ಪಡೆಯಲು ಸಾಧ್ಯ’ ಎಂದು ಪ್ರತಿಪಾದಿಸಿದರು.

‘ದೇಶದಲ್ಲಿ 90ರ ದಶಕದಲ್ಲಿ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ಪ್ರಕ್ರಿಯೆ ಆರಂಭವಾಯಿತು. ಹೆಚ್ಚಿದ ಆರ್ಥಿಕ ವಹಿವಾಟಿನ ಪರಿಣಾಮ ಅಂತಃಕರಣ ಮರೆಯಾಯಿತು. ಮಾರುಕಟ್ಟೆ ಶಕ್ತಿಗಳ ಪ್ರಾಬಲ್ಯ ಇದ್ದಾಗ ಅಂತಃಕರಣ ಇರುವುದಿಲ್ಲ. ಕೇವಲ ಲಾಭ ಮತ್ತು ನಷ್ಟದ ವಿಷಯ ಮಾತ್ರ ಮುಖ್ಯವಾಗುತ್ತದೆ.ಇಂತಹ ಸನ್ನಿವೇಶದಲ್ಲಿ ಜನರ ಮನ ಪರಿವರ್ತನೆಯಲ್ಲಿ ಸಾಹಿತ್ಯಪರಿಣಾಮ ಬೀರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಮತ್ತು ಪುಸ್ತಕ ಲೋಕಕ್ಕೆ ಸಪ್ನ ಬುಕ್‌ ಹೌಸ್‌ ತನ್ನದೇ ಆದ ಕೊಡುಗೆ ನೀಡಿದೆ. ಇಂದಿನ ಡಿಜಿಟಲ್‌ ಯುಗದಲ್ಲಿ ಮುದ್ರಣ ಮಾಧ್ಯಮವೂ ತನ್ನದೇ ಆದ ಮಹತ್ವ ಉಳಿಸಿಕೊಂಡು ಬೆಳೆಯುತ್ತಿದೆ. ಅದೇ ರೀತಿ ಪುಸ್ತಕಗಳಿಗೂ ಮಹತ್ವ ದೊರೆಯುತ್ತಿದೆ’ ಎಂದರು.

ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

‘₹400 ಕೋಟಿ ಪಾವತಿ ಬಾಕಿ’

‘ಗ್ರಂಥಾಲಯ ಇಲಾಖೆಗೆ ಬಿಬಿಎಂಪಿ ₹400ಕೋಟಿಗೂ ಹೆಚ್ಚು ಮೊತ್ತ ಪಾವತಿಸಬೇಕಾಗಿದೆ. 10 ವರ್ಷಗಳಿಂದ ಈ ಬಾಕಿ ಮೊತ್ತವನ್ನು ಉಳಿಸಿಕೊಂಡಿದೆ’ ಎಂದು ವಿಮರ್ಶಕ ಡಾ.ಸಿ.ಎನ್‌. ರಾಮಚಂದ್ರನ್‌ ತಿಳಿಸಿದರು.

‘ಈ ವಿಷಯದ ಬಗ್ಗೆ ಪ್ರಕಾಶಕರು ನ್ಯಾಯಾಲಯದ ಮೊರೆ ಸಹ ಹೋಗಿದ್ದರು. ಈ ಬಾಕಿ ಹಣ ಪಾವತಿಯಾದರೆ ಪ್ರಕಾಶಕರು ಮತ್ತು ಲೇಖಕರಿಗೆ ಅನುಕೂಲವಾಗುತ್ತದೆ’ ಎಂದರು. ‘ಇಂದು ಓದುಗ ವೃಂದ ಬದಲಾಗಿದೆ. ಅವರ ಅಪೇಕ್ಷೆಗಳು ಮತ್ತು ನಿರೀಕ್ಷೆಗಳು ಮಾರ್ಪಾಡಾಗಿವೆ. ಕಥಾ ಪ್ರಕಾರವು ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಾವ್ಯ, ಸಣ್ಣ ಕಥೆಗಳು ಇಂದು ವಿಜೃಂಭಿಸುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT