ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಡಸ್‌: ಹಲವೆಡೆ ಜಿಟಿ ಜಿಟಿ ಮಳೆ

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಇಂದು ಶಾಲಾ–ಕಾಲೇಜುಗಳಿಗೆ ರಜೆ
Last Updated 11 ಡಿಸೆಂಬರ್ 2022, 19:33 IST
ಅಕ್ಷರ ಗಾತ್ರ
ADVERTISEMENT

ಶಿರಸಿ/ಹುಬ್ಬಳ್ಳಿ: ಮ್ಯಾಂಡಸ್ ಚಂಡಮಾರುತದ ಪ್ರಭಾವ ಕಡಲ ತೀರದ ಜಿಲ್ಲೆ ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೂ ಪ್ರಭಾವ ಬೀರಿದೆ. ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಆವರಿಸಿದ್ದು, ಹಲವೆಡೆ ಜಿಟಿಜಿಟಿ ಮಳೆ ಸುರಿದಿದೆ. ಚಳಿಯೂ ಹೆಚ್ಚಾಗಿದೆ.

ಶಿರಸಿ, ಭಟ್ಕಳ, ಕಾರವಾರ ಸಿದ್ದಾಪುರ, ಕುಮಟಾದಲ್ಲಿ ಮಳೆಯಾಗಿದೆ. ಭತ್ತ, ಅಡಿಕೆ ಕೊಯ್ಲಿನ ಅವಧಿ ಇದಾಗಿರುವ ಕಾರಣ ಅಕಾಲಿಕ ಮಳೆಯಿಂದ ರೈತರು ಕಂಗೆಟ್ಟಿದ್ದಾರೆ. ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲು ಆರಂಭಗೊಂಡಿದ್ದು ಅಡಿಕೆ ಒಣಗಿಸಲು ರೈತರು ಪಾಲಿಹೌಸ್, ಡ್ರೈಯರ್ ಮೊರೆ ಹೋಗುತ್ತಿದ್ದಾರೆ. ಬನವಾಸಿ ಭಾಗದಲ್ಲಿ ಭತ್ತ ಕಟಾವು ಮಾಡಿ ಗದ್ದೆಯಲ್ಲಿ ಬಿಟ್ಟಿರುವ ರೈತರು ಅವುಗಳನ್ನು ಮಳೆ ಯಿಂದ ರಕ್ಷಿಸಲು ತಾಡಪತ್ರಿ ಬಳಸಿದ್ದಾರೆ.

ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯನಗರದಲ್ಲಿ ಮಳೆಯಾಗಿದೆ.ಜನ ಛತ್ರಿ ಹಿಡಿದು ಓಡಾಡುತ್ತಿದ್ದರೆ, ಕೆಲವೆಡೆ ದ್ವಿಚಕ್ರ ವಾಹನ ಸವಾರರು ನೆನೆದುಕೊಂಡೇ ಹೋಗುತ್ತಿದ್ದ ದೃಶ್ಯ ಕಂಡು ಬಂತು.

ಮಳೆ ಇರುವ ಕಾರಣ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಸೋಮವಾರ (ಡಿ.12) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತಗ್ಗಿದ ಪ್ರಭಾವ, ಮಳೆ ಇಳಿಮುಖ ಸಾಧ್ಯತೆ

ಹುಬ್ಬಳ್ಳಿಯಲ್ಲಿ ಸುರಿದ ತುಂತುರು ಮಳೆಗೆ ಸ್ಕೂಟರ್‌ನ ಹಿಂಬದಿ ಸವಾರರು ಛತ್ರಿ ಹಿಡಿದು ಸಾಗಿದರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಸುರಿದ ತುಂತುರು ಮಳೆಗೆ ಸ್ಕೂಟರ್‌ನ ಹಿಂಬದಿ ಸವಾರರು ಛತ್ರಿ ಹಿಡಿದು ಸಾಗಿದರು
– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮ್ಯಾಂಡಸ್‌’ ಚಂಡಮಾರುತ ಪ್ರಭಾವ ತಗ್ಗಿದ್ದು, ಸೋಮವಾರದಿಂದ ಮಳೆ ಇಳಿಮುಖವಾಗುವ ಸಾಧ್ಯತೆಯಿದೆ. ಆದರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 40ರಿಂದ 50 ಕಿ.ಮೀ ಇರಲಿದ್ದು, 55 ಕಿ.ಮೀಗೆ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಚಂಡಮಾರುತ ಪ್ರಭಾವದಿಂದ ಎರಡು ದಿನಗಳಿಂದಲೂ ಹಲವು ಜಿಲ್ಲೆಗಳಲ್ಲಿ ಜಿಟಿಜಿಟಿ ಮಳೆಯಾಗಿದೆ. ಬೆಂಗಳೂರಿನಲ್ಲೂ ಭಾನುವಾರ ಬೆಳಿಗ್ಗೆಯಿಂದಲೇ ತುಂತುರು ಮಳೆಯಾಗಿದೆ. ರಾಜಧಾನಿಯಲ್ಲಿ ಇನ್ನು ಎರಡು ದಿನ ಇದೇ ಸ್ಥಿತಿ ಇರಲಿದೆ ಎಂದು ತಿಳಿಸಿದೆ.

24 ಗಂಟೆಗಳಲ್ಲಿ ಕೋಲಾರ, ಚಿಂತಾಮಣಿಯಲ್ಲಿ 7 ಸೆಂ.ಮೀ, ಹೊಸಕೋಟೆ, ದೇವನಹಳ್ಳಿ ಹಾಗೂ ಗೌರಿಬಿದನೂರಿನಲ್ಲಿ 5 ಸೆಂ.ಮೀ ಮಳೆಯಾಗಿದೆ. ಬೆಂಗಳೂರು ನಗರ, ಯಲಹಂಕ, ಪಾವಗಡ ಹಾಗೂ ಮಧುಗಿರಿಯಲ್ಲಿ 4 ಸೆಂ.ಮೀ.ನಷ್ಟು ಮಳೆಯಾಗಿದೆ.

ಅಕಾಲಿಕ ಮಳೆ: ಬೆಳೆ ಹಾನಿ ಭೀತಿ

ಮೈಸೂರು: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮ್ಯಾಂಡಸ್’ ಚಂಡಮಾರುತದ ಪ್ರಭಾವವು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲೂ ಉಂಟಾಗಿದೆ.

ಭಾನುವಾರವೂ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆಗಾಗ ತುಂತುರು ಮಳೆ ಬಿದ್ದಿತು. ಶನಿವಾರ ರಾತ್ರಿ ಜೋರು ಮಳೆ ಸುರಿಯಿತು. ಚಾಮರಾಜನಗರ ಹಾಗೂ ಯಳಂದೂರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ.

ಪ್ರವಾಹ ಮತ್ತು ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರಿಗೆ ಚಂಡಮಾರುತವು ಸೃಷ್ಟಿಸಿರುವ ಪ್ರತಿಕೂಲ ವಾತಾವರಣವು ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಭತ್ತದ ಬೆಳೆ ಕೊಯ್ಲು ಹಾಗೂ ಒಕ್ಕಣೆಗೆ
ಅಡ್ಡಿಯಾಗಿದೆ. ಇದೇ ಪರಿಸ್ಥಿತಿ ಇನ್ನೂ ಕೆಲವು ದಿನ ಮುಂದುವರಿಯುವ ಮುನ್ಸೂಚನೆ ಇದ್ದು, ಬೆಳೆಗಳು ಇನ್ನಷ್ಟು ಹಾಳಾಗುವ ಆತಂಕ ಕೃಷಿಕರನ್ನು ಕಾಡತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT