ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಸಮಾರಂಭಗಳಲ್ಲಿ ಮಾರ್ಷಲ್ ನಿಯೋಜನೆ: ಸಚಿವ ಡಾ. ಕೆ. ಸುಧಾಕರ್

Last Updated 22 ಫೆಬ್ರುವರಿ 2021, 11:40 IST
ಅಕ್ಷರ ಗಾತ್ರ

ಬೆಂಗಳೂರು: ಮದುವೆ ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮ ಪಾಲಿಸಲು ಮಾರ್ಷಲ್ ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದುವೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ. ನಾನೇ ಸಮಾರಂಭಕ್ಕೆ ಹೋದರೆ ಮಾಸ್ಕ್ ತೆಗೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳಲ್ಲಿ ಒಬ್ಬ ಮಾರ್ಷಲ್ ನೇಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. 500 ಕ್ಕಿಂತ ಹೆಚ್ಚು ಜನರಿರಬಾರದು, ಎಲ್ಲರೂ ಮಾಸ್ಕ್ ಧರಿಸುವ ನಿಯಮವನ್ನು ಪಾಲಿಸಲು ಈ ಕ್ರಮ ವಹಿಸಲಾಗುವುದು. ಆಹಾರ ಪೂರೈಕೆ ಮಾಡುವವರಿಗೂ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ ಎಂದರು.

ಕೋವಿಡ್ ಮಾರ್ಗಸೂಚಿಗೆ ವಿರುದ್ಧವಾಗಿ ಸಭೆ, ಸಮಾರಂಭ, ಹೋರಾಟ ನಡೆಯುತ್ತಿದೆ. ಇದನ್ನು ಪಾಲಿಸದೇ ಕೋವಿಡ್ ಸೋಂಕು ಹೆಚ್ಚಾದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗಿದ್ದು, ಆ ಪರಿಸ್ಥಿತಿ ರಾಜ್ಯಕ್ಕೆ ಬರಬೇಕೆ ಎಂದು ಆಲೋಚಿಸಬೇಕು ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಇಲಾಖೆಗಳಲ್ಲಿ 2,90,000 ಮಂದಿ ಇದ್ದು, ಆರೋಗ್ಯ ಇಲಾಖೆಯ 4,24,573 ಮಂದಿಗೆ ಮೊದಲ ಕೋವಿಡ್ ಡೋಸ್ ನೀಡಲಾಗಿದೆ. 1,20,176 ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎರಡು ಬಾರಿ ನೋಂದಣಿ ಮಾಡಿಸಿಕೊಂಡಿದ್ದು, ಅದನ್ನು ತೆಗೆದುಹಾಕಲಾಗುತ್ತಿದೆ. ಇದರಿಂದಾಗಿ ನಾವು ಮುಟ್ಟಿದ ಗುರಿ ಇನ್ನೂ ಹೆಚ್ಚಾಗಲಿದೆ. ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಸಿಬ್ಬಂದಿಯಲ್ಲಿ ಶೇ.80 ರಿಂದ ಶೇ.90 ಮಂದಿಗೆ ಫೆಬ್ರವರಿ 28 ರೊಳಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿದೆ. ಮುಂಚೂಣಿ ಸಿಬ್ಬಂದಿಗೆ ಫೆಬ್ರವರಿ 22, 23, 24 ಲಸಿಕೆ ಅಭಿಯಾನ ಮಾಡಲಾಗುತ್ತಿದೆ. ಎಲ್ಲ ಅಧಿಕಾರಿಗಳಿಗೆ ಲಸಿಕೆ ಪಡೆಯಲು ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಸಿಕೆ ಅಭಿಯಾನ ಕುರಿತು ಮಾಹಿತಿ ಪಡೆಯುತ್ತಿದ್ದು, ವಾರದೊಳಗೆ ಈ ಕುರಿತು ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಲಿದ್ದಾರೆ. ಆರೋಗ್ಯ ಸಿಬ್ಬಂದಿಯ ಲಸಿಕೆ ಅಭಿಯಾನದಲ್ಲಿ ಬೆಂಗಳೂರು ಹಿಂದುಳಿದಿದೆ. ಬಾಗಲಕೋಟೆ, ದಾವಣಗೆರೆ, ಬೆಂಗಳೂರು ನಗರ, ಧಾರವಾಡ ಜಿಲ್ಲೆಗಳು ಶೇ.50 ಕ್ಕಿಂತ ಕಡಿಮೆ ಇದೆ. ಚಿಕ್ಕಬಳ್ಳಾಪುರ (79%), ತುಮಕೂರು (78%), ಉತ್ತರ ಕನ್ನಡ (73%), ಗದಗ (71%), ಚಿಕ್ಕಮಗಳೂರು (70%), ಚಾಮರಾಜನಗರ (70%) ಜಿಲ್ಲೆಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಸಾಧನೆಯಾಗಿದೆ. ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡುವಲ್ಲಿ ಗದಗ (84%) ತುಮಕೂರು (71%) ಮುಂದಿದೆ. ಬಾಗಲಕೋಟೆ (23%), ಬೆಂಗಳೂರು ನಗರ (26%), ಚಾಮರಾಜನಗರ (27%) ಹಿಂದುಳಿದಿದ್ದು, 80% ಗುರಿ ಸಾಧಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

* ಕೇರಳ, ಮಹಾರಾಷ್ಟ್ರ ಜನರ ಪ್ರಯಾಣಕ್ಕೆ ನಿರ್ಬಂಧ ಹೇರಲಿಲ್ಲ. ಆದರೆ ರಾಜ್ಯದೊಳಗೆ ಬರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ.

* ಶಾಲೆಗಳನ್ನು ಹಂತಹಂತವಾಗಿ ತೆರೆಯುತ್ತಿದ್ದು, ಕೋವಿಡ್ ಸೋಂಕು ಹೆಚ್ಚಳದ ಸಮಸ್ಯೆಯಾಗಿಲ್ಲ.

* ಕೋವಿಡ್ 2 ನೇ ಅಲೆ ಬಾರದಂತೆ ಕ್ರಮ ವಹಿಸಲಾಗುತ್ತಿದೆ. ಮಾರ್ಚ್ ನಿಂದ ಸಾಮಾನ್ಯ ಜನರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT