ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಪಾದಯಾತ್ರೆ: 'ಅಧಿಕಾರಕ್ಕಾಗಿ ಅಲ್ಲ, ನೀರಿಗಾಗಿ', ಕಾಂಗ್ರೆಸ್‌ ನಗಾರಿ

ಅಧಿಕಾರಕ್ಕಾಗಿ ಅಲ್ಲ, ನೀರಿಗಾಗಿ: ಕಾಂಗ್ರೆಸ್‌ l ಕೋವಿಡ್‌ ನಿಯಮ ಗಾಳಿಗೆ ತೂರಿದ ನಾಯಕರು
Last Updated 9 ಜನವರಿ 2022, 21:30 IST
ಅಕ್ಷರ ಗಾತ್ರ

ಸಂಗಮ (ರಾಮನಗರ ಜಿಲ್ಲೆ): ‘ಮೇಕೆದಾಟು ಜೈ’ ಎಂದು ಗರ್ಜಿಸಿ, ಅಧಿಕಾರಕ್ಕಾಗಿ ಅಲ್ಲ, ನೀರಿಗಾಗಿ ಎನ್ನುತ್ತಲೇ ‘ಕೈ’ ನಾಯಕರು ಬಿಜೆಪಿ, ಜೆಡಿಎಸ್‌ ವಿರುದ್ಧ ತೊಡೆತಟ್ಟಿ ಇಲ್ಲಿ ಹೋರಾಟದ ‘ನಗಾರಿ’ ಬಾರಿಸಿದರು.

ಆ ಮೂಲಕ, ಇನ್ನೂ ಒಂದು ವರ್ಷ ಮೂರು ತಿಂಗಳು ದೂರ ಇರುವ ರಾಜ್ಯ ವಿಧಾನಸಭೆ ಚುನಾವಣೆಗೆ ಜನಾಭಿಪ್ರಾಯ ರೂಪಿಸಲು ‘ರಾಜಕೀಯ ಅಸ್ತ್ರ’ವಾಗಿ ಮೇಕೆದಾಟು ಪಾದಯಾತ್ರೆಯನ್ನು ಬಳಸುವ ಮುನ್ಸೂಚನೆ ನೀಡಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾವೇರಿ–ಅರ್ಕಾವತಿಯ ‘ಸಂಗಮ’ದಿಂದ ಭಾನುವಾರ ಆರಂಭಿಸಿದ 10 ದಿನಗಳ ಪಾದಯಾತ್ರೆಯನ್ನು ನಾಡಿನ ಅಭಿವೃದ್ಧಿಗಾಗಿ ಪಕ್ಷಾತೀತ ಹೋರಾಟ ಎಂದು ಘೋಷಿಸಿದಕಾಂಗ್ರೆಸ್‌ ನಾಯಕರು, ಯೋಜನೆ ವಿಳಂಬಕ್ಕೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣವೆಂದು ಗುಡುಗಿದರು.

ಅದರ ಜೊತೆಯಲ್ಲೇ, ಕೋವಿಡ್‌ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ ಎಂದು ಮಾತು ನೀಡಿದ್ದ ಈ ನಾಯಕರು, ಸರ್ಕಾರ ವಿಧಿಸಿರುವ ಎಲ್ಲ ನಿರ್ಬಂಧಗಳನ್ನೂ ಗಾಳಿಗೆ ತೂರಿದರು. ಕಾರ್ಯಕ್ರಮಕ್ಕೆ ಬಂದ ನಾಯಕರು ಸೇರಿದಂತೆ ಸಾವಿರಾರು ಜನರು ಮಾಸ್ಕ್‌ ಇಲ್ಲದೆ, ಅಂತರ ಕಾಪಾಡದೆ ನಿಯಮಗಳನ್ನು ಉಲ್ಲಂಘಿಸಿದರು. ಪಾದಯಾತ್ರೆಯ ಅಬ್ಬರಕ್ಕೆ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರು ಮೂಕಪ್ರೇಕ್ಷಕರಾದರು.

ಸಂಗಮದಲ್ಲಿ ನಿರ್ಮಿಸಿದ್ದ ಬೃಹತ್‌ ವೇದಿಕೆಯಲ್ಲಿ, ಎಐಸಿಸಿ ಪ್ರತಿನಿಧಿಯಾಗಿ ಬಂದಿದ್ದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಗಾರಿ
ಬಾರಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಸಿದ್ದರಾಮಯ್ಯ ಅವರ ಕೈಹಿಡಿದು ಡಿ.ಕೆ. ಶಿವಕುಮಾರ್‌ ನಗಾರಿ ಬಾರಿಸಿದ್ದು ಗಮನ
ಸೆಳೆಯಿತು.

ನಾವು ಹೆದರುವ ಮಕ್ಕಳಲ್ಲ. ತಾಕತ್ತಿದ್ದರೆ ವೇದಿಕೆಯಲ್ಲಿರುವ ಸ್ವಾಮೀಜಿಗಳು, ಪಕ್ಷದ ನಾಯಕರನ್ನು ಬಂಧಿಸಿ. ಮೇಕೆದಾಟು ಧ್ವಜ ಮುಟ್ಟಲು ನಿಮ್ಮಿಂದ ಸಾಧ್ಯವಿಲ್ಲ.

- ಡಿ.ಕೆ.ಶಿವಕುಮಾರ್‌, ಅಧ್ಯಕ್ಷ, ಕೆಪಿಸಿಸಿ

ತಮಿಳುನಾಡಿಗೆ ಕಾನೂನಿನ‌ ಬಲ ಇಲ್ಲ. ನೀವ್ಯಾಕೆ ಅವರ ಜೊತೆ ಸೇರಿಕೊಂಡಿರಿ. ಇದು ಕನ್ನಡಿಗರಿಗೆ ಮಾಡುವ ದ್ರೋಹ ಅಲ್ಲವೇ ಮಿ. ಕಾರಜೋಳ್, ಮಿ. ಬೊಮ್ಮಾಯಿ’?

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ.

ನಮಗೆ ಛಲ ಇರಬೇಕು. ಆ ಛಲ ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು, ಪಕ್ಷದ ಕಾರ್ಯಕರ್ತರಿಗಿದೆ. ಪಾದಯಾತ್ರೆ ವಿಫಲಗೊಳಿಸಲು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ.

- ಮಲ್ಲಿಕಾರ್ಜುನ ಖರ್ಗೆ, ವಿರೋಧಪಕ್ಷದ ನಾಯಕ, ರಾಜ್ಯಸಭೆ.

‘ಸಂಗಮ’ದಲ್ಲಿ ಮಿಂದೆದ್ದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳಿಗ್ಗೆ ಸಂಗಮದಲ್ಲಿ ತೆಪ್ಪದಲ್ಲಿ ತೆರಳಿ, ಸ್ನಾನ ಮಾಡಿ ಪೂಜೆ ಸಲ್ಲಿಸಿದರು. ಸ್ನಾನಕ್ಕೆ ಇಳಿಯುವ ಸಂದರ್ಭದಲ್ಲಿ ಶಿವಕುಮಾರ್ ಜಾರಿ ಬಿದ್ದರು. ಸಹೋದರ, ಸಂಸದ ಡಿ.ಕೆ. ಸುರೇಶ್‌ ಇಡೀ ಕಾರ್ಯಕ್ರಮದ ರೂವಾರಿಯಾಗಿದ್ದರು.

ಅವರ ಜೊತೆ, ಬೃಹತ್‌ ವೇದಿಕೆಯಲ್ಲಿ ಓಡಾಡುತ್ತಲೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದ ಶಿವಕುಮಾರ್‌, ‘ಮುಂಚೂಣಿ’ಯಲ್ಲಿ ಕಾಣಿಸಿಕೊಂಡರು. ಆ ಮೂಲಕ, ತಮ್ಮ ನಾಯಕತ್ವದ ವರ್ಚಸ್ಸಿಗೆ ಕಳೆ ತಂದುಕೊಂಡರು. ‘ಸಂಗಮದ ನೀರಿನ‌ ಮೇಲೆ ಕುಳಿತಿದ್ದು ಇತಿಹಾಸ. ಹಿಂದೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡಿದ್ದರೆ, ಈಗ ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಿದೆ’ ಎಂದರು.

‘ಟೀಕೆ ಮಾಡುತ್ತೀರಾ, ಅಡಚಣೆ ಮಾಡುತ್ತೀರಾ, ನಿಮ್ಮ ಟೀಕೆ, ಅಡಚಣೆಗೆ ನಾವು ಹೆದರಲ್ಲ. ಸೊಪ್ಪು ಹಾಕಲ್ಲ. ಗೃಹ ಸಚಿವರೇ ಪಾದಯಾತ್ರೆಯ ವಿಡಿಯೊ ಕಳುಹಿಸಿ ಕೊಡುತ್ತೇನೆ. ನೀವು ಕೋವಿಡ್‌ ನಿರ್ಬಂಧ ವಿಧಿಸಿರುವುದೇ ಅನ್ಯಾಯ‌. ಈ‌ ನಡಿಗೆ ನೀರಿಗಾಗಿ, ಪಕ್ಷಕ್ಕಾಗಿ ಅಲ್ಲ. ಬೆಂಗಳೂರಿನ‌ ಜನರಿಗಾಗಿ’ ಎಂದು ಸರ್ಕಾರದ ವಿರುದ್ಧ ಶಿವಕುಮಾರ್‌ ಗುಡುಗಿದರು.

ಹೆಜ್ಜೆ ಹಾಕುತೇವೆ ಹೆಜ್ಜೆ...

ಚಿತ್ರನಟ ‘ದುನಿಯಾ’ ವಿಜಯ್‌ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲ ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಿದರು. ಜೊತೆಗೆ ನಟಿ, ಕಾಂಗ್ರೆಸ್‌ ನಾಯಕಿ ಉಮಾಶ್ರೀ ಕೂಡಾ ಇದ್ದರು. ಸಾಧು ಕೋಕಿಲಾ ನಿರ್ದೇಶನದ ಸಮೂಹ ಹಾಡು ‘ಹೆಜ್ಜೆ ಹಾಕುತೇವೆ... ಹೆಜ್ಜೆ ಹೆಜ್ಜೆ... ಕಾವೇರಿಗಾಗಿ ಹೆಜ್ಜೆ’ ಉದ್ಘಾಟನೆಗೆ ಹುರುಪು ನೀಡಿತು. ಡಾ. ರಾಜ್‌ಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಚಿತ್ರ ನಿರ್ಮಾಪಕ ಎನ್‌.ಎಂ. ಸುರೇಶ್‌ ಕೂಡಾ ಇದ್ದರು.

ವೇದಿಕೆಯಲ್ಲಿದ್ದ ಸ್ವಾಮೀಜಿಗಳು ಗಿಡಕ್ಕೆ ನೀರೆರೆದರೆ, ಶಾಸಕಿಯರು ಮತ್ತು ಕೆಪಿಸಿಸಿ ಮಹಿಳಾ ಪದಾಧಿಕಾರಿಗಳು ಕಲಶ ಹೊತ್ತು ಸಾಂಕೇತಿಕವಾಗಿ ಹೆಜ್ಜೆ ಹಾಕಿ ಹಂಡೆಗಳಿಗೆ ನೀರು ತುಂಬಿಸಿದರು. ತಮಟೆ, ವೀರಗಾಸೆ, ಪಟ ಕುಣಿತ, ಡೊಳ್ಳು, ಯಕ್ಷಗಾನ, ವೀರಗಾಸೆ, ತೊಗಲುಗೊಂಬೆ ತಂಡಗಳು ಪಾದಯಾತ್ರೆಗೆ ಸಾಂಸ್ಕೃತಿಕ ಸ್ಪರ್ಶ ನೀಡಿದವು. ವೇದಿಕೆಯಲ್ಲೇ ನಿಂತು ಜನಪದ ಕಲಾ ತಂಡಗಳ ವಾದ್ಯದ ಸದ್ದಿಗೆ ಡಿ.ಕೆ. ಶಿವಕುಮಾರ್‌ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತು ತಂಡದವರಿಂದ ಗಂಗೆ ಪೂಜೆ, ಉಮಾಶ್ರೀ ಅವರಿಂದ ಕಲಶಪೂಜೆ ನಡೆಯಿತು. ರೈತ ಗೀತೆ ಹಾಡುವಾಗ ಹಸಿರು ಶಾಲು ತಿರುಗಿಸಿ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT