ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ನೆರೆ ಸಂತ್ರಸ್ತರಿಗೆ ಸಿಗದ ನೆಲೆ

Last Updated 15 ಆಗಸ್ಟ್ 2020, 21:09 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯು ಮೂರು ವರ್ಷಗಳಿಂದ ನೆರೆ, ಭೂಕುಸಿತದ ಸಂಕಷ್ಟದಿಂದ ನಲುಗುತ್ತಿದೆ. 2018ರ ಸಂತ್ರಸ್ತರಿಗೆ ಮದೆ, ಕರ್ಣಂಗೇರಿ ಹಾಗೂ ಜಂಬೂರಿನಲ್ಲಿ ಒಟ್ಟು 600 ಮನೆಗಳನ್ನು ವಿತರಣೆ ಮಾಡಿರುವುದು ಬಿಟ್ಟರೆ, ಉಳಿದವರಿಗೆ ಸೂರು ಸಿಕ್ಕಿಲ್ಲ. ಅದೇ ವರ್ಷ ಸಂತ್ರಸ್ತರಾದ 500 ಮಂದಿಗೆ ಇನ್ನೂ ಮನೆ ಸಿಗಬೇಕಿದೆ.

ಕಳೆದ ವರ್ಷದ ಸಂತ್ರಸ್ತರ ನೋವು ಹೇಳತೀರದಾಗಿದೆ. ಸಿದ್ದಾಪುರ, ನೆಲ್ಯಹುದಿಕೇರಿ ಸುತ್ತಮುತ್ತಲ ಸಂತ್ರಸ್ತರಿಗೆ ಮನೆ ನಿರ್ಮಿಸಲು ಅಭ್ಯತ್‌ ಮಂಗಲದಲ್ಲಿ ಜಿಲ್ಲಾಡಳಿತವು ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿ ಸುಮ್ಮನಾಗಿದೆ. ನೂರಾರು ಸಂತ್ರಸ್ತರು ಬಾಡಿಗೆ ಮನೆಗಳಲ್ಲೇ ದಿನ ದೂಡುತ್ತಿದ್ದಾರೆ. ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿರುವ ಸಂತ್ರಸ್ತರಿಗೆ ಮೂರನೇ ಕಂತಿನ ಹಣ ಬಿಡುಗಡೆ ಆಗಿಲ್ಲ. ಮನೆ ನಿರ್ಮಾಣ ಕಾರ್ಯವೂ ಅರ್ಧಕ್ಕೆ ನಿಂತಿದೆ.

ವರ್ಷ ಕಳೆದರೂ ಸೂರಿನ ಭಾಗ್ಯವಿಲ್ಲ: ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಕಟ್ಟೇಮನುಗನಹಳ್ಳಿ, ಬಿದರಹಳ್ಳಿ, ನಾಗನಹಳ್ಳಿ, ಹೆಗ್ಗಡಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡವರು ಇಂದಿಗೂ ಸೂರಿನ ಭಾಗ್ಯವಿಲ್ಲದೆ ಶೆಡ್‌ಗಳಲ್ಲೇ ವಾಸಿಸುತ್ತಿದ್ದಾರೆ.

ಕಬಿನಿಯಿಂದ ಹೆಚ್ಚು ನೀರು ಬಿಟ್ಟಿದ್ದರಿಂದ 42 ಮನೆಗಳು ಪೂರ್ಣವಾಗಿ ಕುಸಿದಿದ್ದವು. ನಿರ್ಮಿತಿ ಕೇಂದ್ರದಿಂದ ಮನೆಗಳ ನಿರ್ಮಾಣ ಕೆಲಸವೂ ಆರಂಭವಾಗಿತ್ತು. ಆದರೆ ಸರ್ಕಾರದಿಂದ ಹಣ ಬಿಡುಗಡೆ ಆಗದೆ ಕಾಮಗಾರಿ ನನೆಗುದಿಯಲ್ಲಿದೆ.

‘ಮನೆ ಕಟ್ಟಿಸಲು ಗುರುತಿಸಿರುವ ಜಾಗ ನೀರಾವರಿ ಇಲಾಖೆಗೆ ಸೇರಿದ್ದಾಗಿದೆ. ಅದು ಕಂದಾಯ ಇಲಾಖೆಗೆ ಹಸ್ತಾಂತರವಾಗದೆ ಹಣ ಬಿಡುಗಡೆ ಆಗುವುದಿಲ್ಲ’ ಎಂದು ಎಚ್‌.ಡಿ.ಕೋಟೆ ತಹಶೀಲ್ದಾರ್‌ ಆರ್‌.ಮಂಜುನಾಥ್‌ ಹೇಳುತ್ತಾರೆ.

ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಒಟ್ಟು 95 ಶಾಲೆಗಳ ಕೊಠಡಿಗಳನ್ನು ದುರಸ್ತಿ ಮಾಡಬೇಕಿದ್ದು, 51 ಶಾಲೆಗಳಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಇದರ ಜೊತೆಗೆ 75 ಶಾಲೆಗಳ 146 ಕೊಠಡಿಗಳನ್ನು ನೆಲಸಮಗೊಳಿಸಿ ಮರುನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಆದರೆ ಒಂದು ಕಡೆಯೂ ಕಾಮಗಾರಿ ಆರಂಭವಾಗಿಲ್ಲ.

ನಂಜನಗೂಡು ಪಟ್ಟಣ ವ್ಯಾಪ್ತಿಯಲ್ಲಿ 55 ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 44 ಮನೆಗಳು ಸಂಪೂರ್ಣ ಕುಸಿದುಬಿದ್ದಿದ್ದವು. ಸೂಕ್ತ ದಾಖಲೆ ಒದಗಿಸಿಲ್ಲ ಎಂಬ ಕಾರಣಕ್ಕೆ ಹಲವರಿಗೆ ಪರಿಹಾರದ ಹಣ ಮಂಜೂರಾಗಿಲ್ಲ.

ದುರಸ್ತಿಯಾಗದ ನಾಲೆ: ಹುಣಸೂರು ತಾಲ್ಲೂಕಿನ ಹನಗೋಡು ಮುಖ್ಯನಾಲೆ ಕಳೆದ ಸಾಲಿನ ನೆರೆಗೆ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ದುರಸ್ತಿಯಾಗಿಲ್ಲ.

ಜೋಪಡಿಯಲ್ಲೇ ವಾಸ: ಹಾಸನ ಜಿಲ್ಲೆಯ ಜಾವಗಲ್ ಹೋಬಳಿಯ ಗಾಂಧಿನಗರದ ಈರಯ್ಯ ಅವರ ಮನೆ ಕುಸಿದು ವರ್ಷ ಕಳೆದಿದೆ.

‘ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ತಾತ್ಕಾಲಿಕವಾಗಿ ನೀಡಿದ ₹ 90 ಸಾವಿರ ಪರಿಹಾರಹೊಸ ಮನೆಯ ಪಾಯ ತೆಗೆಯಲು ಖರ್ಚಾಗಿದೆ. ಚೆಕ್‌ ಬಂದಾಗ ಕೊಡುವುದಾಗಿ ಅಧಿಕಾರಿಗಳು ಹೇಳಿ ಕಳುಹಿಸುತ್ತಾರೆ. ಪಾಯದ ಮೇಲೆ ಈಗ ಸೋಗೆ ಗುಡಿಸಲು ಹಾಕಿಕೊಂಡಿದ್ದೇನೆ’ ಎಂದು ಈರಯ್ಯ ಅಳಲು ತೋಡಿಕೊಂಡರು.

ಬೇಲೂರು ತಾಲ್ಲೂಕಿನ ಅಗಸರಹಳ್ಳಿಯಲ್ಲಿ ಕೊಚ್ಚಿ ಹೋಗಿದ್ದ ಸೇತುವೆ ದುರಸ್ತಿ ಕಂಡಿಲ್ಲ. ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬಡಿ- ಸೂಳ್ಳಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಕಟ್ಟಡವೂ ದುರಸ್ತಿ ಕಂಡಿಲ್ಲ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಪ್ರವಾಹದಿಂದ 9 ಗ್ರಾಮಗಳ ಪೈಕಿ 527 ಮನೆಗಳಿಗೆ ನೀರು ನುಗ್ಗಿತ್ತು. ಅದರಲ್ಲಿ 27 ಮನೆಗಳು ಸಂಪೂರ್ಣ ಹಾಳಾಗಿದ್ದವು. ಹಣ ಹಂತಹಂತವಾಗಿ ಬಿಡುಗಡೆಯಾಗುತ್ತಿರುವುದರಿಂದ ಮನೆಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ.

*
ಕಳೆದ ವರ್ಷ ಪ್ರವಾಹದಲ್ಲಿ ನಮ್ಮ ಮನೆ ಪೂರ್ಣವಾಗಿ ನಾಶವಾಗಿತ್ತು. ಸರಿಯಾದ ದಾಖಲೆಗಳನ್ನು ನೀಡಿಲ್ಲ ಎಂದು ನಮಗೆ ಪರಿಹಾರದ ಹಣ ಮಂಜೂರು ಮಾಡಿಲ್ಲ.
–ಗಣೇಶ್, ಕುರುಬಗೇರಿ, ನಂಜನಗೂಡು

*
ಇದ್ದ ಹಣವೆಲ್ಲಾ ಮನೆ ದುರಸ್ತಿಗೆ ಖರ್ಚಾಯಿತು. ಸರ್ಕಾರ ₹50 ಸಾವಿರ ಪರಿಹಾರ ನೀಡಿದ್ದರೆ ಅನುಕೂಲ ಆಗುತ್ತಿತ್ತು.
–ರೇವಮ್ಮ, ಬಿದರಹಳ್ಳಿ ಸರ್ಕಲ್‌, ಎಚ್‌.ಡಿ.ಕೋಟೆ

*
ಸರ್ಕಾರ ನಮ್ಮನ್ನು ಮರೆತೇ ಬಿಟ್ಟಿದೆ. ಮತ್ತೊಂದು ಮಳೆಗಾಲ ಕಳೆಯುತ್ತಾ ಬಂದಿದ್ದರೂ ಮನೆ ಸಿಕ್ಕಿಲ್ಲ. ನಮ್ಮ ಕಣ್ಣೀರು ನಿಂತಿಲ್ಲ.
–ಪಾರ್ವತಿ ನೆಲ್ಯಹುದಿಕೇರಿಯ ಸಂತ್ರಸ್ತೆ, ಕೊಡಗು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT