ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ತಿಕ್ಕಾಟ: ಟ್ವಿಟರ್‌ನಲ್ಲಿ ಡಾ.ಯತೀಂದ್ರ –ಸಂಸದ ಪ್ರತಾಪ ಸಿಂಹ ಜಟಾಪಟಿ

ಅಕ್ಷರ ಗಾತ್ರ

ಬೆಂಗಳೂರು: ವರ್ಗಾವಣೆಗೊಂಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಅವರ ನಡುವಿನ ತಿಕ್ಕಾಟ ಇದೀಗ ರಾಜಕೀಯ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ.

ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಪ್ರತಾಪ್‌ ಸಿಂಹ ಟ್ವಿಟರ್‌ನಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

‘ಮೈಸೂರು ಜಿಲ್ಲೆಯ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆಡಿಎಸ್‌ನ ಸಾ.ರಾ ಮಹೇಶ್ ಕಾರಣ. ಸಂಸದ ಪ್ರತಾಪ್‌ ಸಿಂಹ ಅವರು ಮೊದಲು ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದ್ದರು. ಈಗ ಶಿಲ್ಪಾನಾಗ್ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಬ್ಬರನ್ನೂ ಎತ್ತಿಕಟ್ಟಿ ಜಗಳ ತಂದಿಟ್ಟಿದ್ದಾರೆ’ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

ಇದಕ್ಕೆ ತಿರುಗೇಟು ಕೊಟ್ಟಿದ್ದ ಪ್ರತಾಪ್‌ ಸಿಂಹ, ‘ಸಿದ್ದರಾಮಯ್ಯ ಗಾರು, ಈ ವರದಿಗಳನ್ನು ವಸಿ ಓದುವಿರಾ?! ಅಂದಹಾಗೆ, ನೀವು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮ ಶಿಷ್ಯ ಮರಿಗೌಡ ಡಿಸಿ ಶಿಖಾರನ್ನು ಅವಾಚ್ಯ ಪದಗಳಿಂದ ಸಾರ್ವಜನಿಕವಾಗಿ ನಿಂದಿಸಿದಾಗ ಶಿಷ್ಯನಿಗೆ ಬುದ್ಧಿ ಹೇಳುವುದು ಬಿಟ್ಟು ಶಿಖಾರನ್ನೇ ನೀವು ಎತ್ತಂಗಡಿ ಮಾಡಿದ್ದು ಮರೆತುಹೋಯಿತೇ?' ಎಂದು ವಾಗ್ದಾಳಿ ನಡೆಸಿದ್ದರು.

ಪ್ರತಾಪ್‌ ಸಿಂಹ ಆರೋಪ ಕುರಿತು ಪ್ರತಿಕ್ರಿಯಿಸಿರುವ ಡಾ.ಯತೀಂದ್ರ ಸಿದ್ದರಾಮಯ್ಯ, ‘ಶಿಖಾ ಅವರು ಡಿಸಿಯಾಗಿ ಮೂರು ವರ್ಷಗಳ ಅವಧಿ ಪೂರೈಸಿ ನಂತರ ವರ್ಗಾವಣೆಗೊಂಡಿದ್ದರು. ಈಗಿನ ಹಾಗೆ 8 ತಿಂಗಳಿಗೇ ಎತ್ತಂಗಡಿಯಾಗಿರಲಿಲ್ಲ. ಕೊರೊನಾ ಸಂಕಷ್ಟದಲ್ಲೂ ನೀವು ಹಾಗೂ ಡಿಸಿ ಮಾಧ್ಯಮಗಳಲ್ಲಿ ಬಡಿದಾಡಿಕೊಂಡಿದ್ದು ಹಾಗೂ ಉನ್ನತ ಅಧಿಕಾರಿಗಳು ಬೀದಿರಂಪ ಮಾಡಿಕೊಂಡಿದ್ದು ಆಡಳಿತಯಂತ್ರದ ಮೇಲಿನ ನಿಮ್ಮ ಹಿಡಿತ ತಪ್ಪಿದ್ದನ್ನು ತೋರುತ್ತದೆ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT