ಶನಿವಾರ, ಫೆಬ್ರವರಿ 4, 2023
28 °C
8ರಂದು ಹಂಪಿ ಕನ್ನಡ ವಿ.ವಿ. ‘ನುಡಿಹಬ್ಬ’

ಡಾ. ಮಂಜುನಾಥ್‌, ಷಡಕ್ಷರಿ ಹಾಗೂ ಕೃಷ್ಣಪ್ಪ ಅವರಿಗೆ ‘ನಾಡೋಜ‘ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, ಸಾಹಿತಿ ಕೃಷ್ಣಪ್ಪ ಜಿ. ಹಾಗೂ ಲೇಖಕ ಎಸ್‌. ಷಡಕ್ಷರಿ ಅವರನ್ನು ಪ್ರಸಕ್ತ ಸಾಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

ಡಿ. 8ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನುಡಿಹಬ್ಬ’ (ಘಟಿಕೋತ್ಸವ) ನಡೆಯಲಿದ್ದು, ಆ ದಿನ ಮೂವರಿಗೂ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ‘ನಾಡೋಜ‘ ಪ್ರದಾನ ಮಾಡುವರು. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಡಿ.ಲಿಟ್‌ ಹಾಗೂ ಪಿಎಚ್‌.ಡಿ ಪದವಿ ಪ್ರದಾನ ಮಾಡುವರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಚೋಳೇನಹಳ್ಳಿಯ ಡಾ.ಸಿ.ಎನ್‌. ಮಂಜುನಾಥ್‌ ಅವರಿಗೆ ವೈದ್ಯಕೀಯ ಕ್ಷೇತ್ರ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

‘ಬೇಂದ್ರೆ ಕೃಷ್ಣಪ್ಪ’ ಎಂದೇ ಹೆಸರಾಗಿರುವ ಬೆಂಗಳೂರು ಸಮೀಪದ ಚೋಳನಾಯಕನಹಳ್ಳಿಯ ಕೃಷ್ಣಪ್ಪ ಜಿ. ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ತುಳವನೂರು ಗ್ರಾಮದ ಎಸ್‌. ಷಡಕ್ಷರಿ ಅವರಿಗೆ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ನಾಡೋಜ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿ.ವಿ. ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ದೃಢಪಡಿಸಿವೆ. 

47 ತಿಂಗಳ ಫೆಲೋಶಿಪ್‌ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು ಭಾನುವಾರದಿಂದ ವಿ.ವಿ. ಕ್ರಿಯಾಶಕ್ತಿ ಭವನದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ವಿ.ವಿ. ಆಡಳಿತವು ನುಡಿಹಬ್ಬಕ್ಕೆ ಭರದ ಸಿದ್ಧತೆ ನಡೆಸುತ್ತಿದೆ. ಇದೇ ವರ್ಷದ ಏಪ್ರಿಲ್‌ 12ರಂದು ‘ನುಡಿಹಬ್ಬ’ ನಡೆದಿತ್ತು. ಎಂಟು ತಿಂಗಳೊಳಗೆ ಮತ್ತೊಂದು ನುಡಿಹಬ್ಬಕ್ಕೆ ವಿ.ವಿ. ಸಾಕ್ಷಿಯಾಗುತ್ತಿದೆ.

ಘಟಿಕೋತ್ಸವಕ್ಕೆ ಮೂರ್ನಾಲ್ಕು ದಿನಗಳಿರುವಾಗಲೇ ವಿಶ್ವವಿದ್ಯಾಲಯದ ಆಡಳಿತವು ನುಡಿಹಬ್ಬದ ಬಗ್ಗೆ ಮಾಧ್ಯಮದವರಿಗೆ ತಿಳಿಸುತ್ತಿತ್ತು. ಆದರೆ, ಈ ಸಲ ತಿಳಿಸಿಲ್ಲ. ವಿದ್ಯಾರ್ಥಿಗಳು ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸುತ್ತಿರುವುದರಿಂದ ಮಾಧ್ಯಮದವರನ್ನು ಕರೆದು ವಿಷಯ ಹಂಚಿಕೊಳ್ಳಲು ವಿ.ವಿ. ಆಡಳಿತ ಹಿಂದೇಟು ಹಾಕುತ್ತಿದೆ ಎಂದು ಗೊತ್ತಾಗಿದೆ. ‘ಡಿ.8ರಂದು ನುಡಿಹಬ್ಬ ನಿಗದಿಯಾಗಿದೆ’ ಎಂದಷ್ಟೇ ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು