ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 612 ಕೋಟಿ ಟೆಂಡರ್; ರೂಪಾ–ನಿಂಬಾಳ್ಕರ್ ಜಟಾಪಟಿ

ಬೆಂಗಳೂರು ನಗರ ಕಮಿಷನರ್ ನೇತೃತ್ವದಲ್ಲಿ ತನಿಖೆ
Last Updated 25 ಡಿಸೆಂಬರ್ 2020, 20:00 IST
ಅಕ್ಷರ ಗಾತ್ರ
ADVERTISEMENT
"ಡಿ. ರೂಪಾ"

ಬೆಂಗಳೂರು: ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಮೀಸಲಿಟ್ಟಿರುವ ‘ನಿರ್ಭಯಾ ನಿಧಿ’ ಯೋಜನೆಯಡಿ ₹ 612 ಕೋಟಿ ವೆಚ್ಚದಲ್ಲಿ ‘ಸುರಕ್ಷ ನಗರ’ ಕೆಲಸದ ಟೆಂಡರ್ ವಿಚಾರವಾಗಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಮಧ್ಯೆ ಜಟಾಪಟಿ ಶುರುವಾಗಿದೆ.

‘ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ಡಿ. ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೇಮಂತ್‌ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿ ಅವರಿಗೆ ಡಿ. 7ರಂದು ಪತ್ರ ಬರೆದಿದ್ದಾರೆ.

ಪತ್ರಕ್ಕೆ ಪ್ರತಿಕ್ರಿಯಿಸಿರುವ ಡಿ. ರೂಪಾ, ‘ಸರ್ಕಾರದ ಹಣ ಉಳಿಸಲು ಯತ್ನಿಸಿದ್ದಕ್ಕೆ ದುಷ್ಟರ ಕೂಟ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಹಿತಾಸಕ್ತಿ ಹಾಗೂ ಅವರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಏನಿದು ಪ್ರಕರಣ: ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಹಾಗೂ ತುರ್ತು ಸಹಾಯವಾಣಿ ನಿಯಂತ್ರಣ ಕೊಠಡಿ ಸ್ಥಾಪಿಸಲು ನಿರ್ಭಯಾ ನಿಧಿಯಡಿ ಹಣ ಮೀಸಲಿಡಲಾಗಿದೆ. ಆ ಪೈಕಿ ₹ 612 ಕೋಟಿ ಮೊತ್ತದ ಕೆಲಸವನ್ನು ಗುತ್ತಿಗೆ ನೀಡುವ ಸಂಬಂಧ ಪ್ರಕ್ರಿಯೆ ಆರಂಭಿಸಲಾಗಿತ್ತು.

ಗುತ್ತಿಗೆ ಪ್ರಕ್ರಿಯೆಗೆ ಸಂಬಂಧಿಸಿದ ತಾಂತ್ರಿಕ ದಾಖಲೆಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ‘ಇ ಅಂಡ್ ವೈ’ ಕಂಪನಿಗೆ ಹೆಚ್ಚುವರಿ ಪೊಲೀಸ್ ಕಮಿಷನರ್‌ (ಆಡಳಿತ) ಹೇಮಂತ್ ನಿಂಬಾಳ್ಕರ್ ನೇತೃತ್ವದ ಟೆಂಡರ್ ಆಹ್ವಾನ ಸಮಿತಿ ಹೇಳಿತ್ತು. ಕಂಪನಿಯಿಂದ ತಾಂತ್ರಿಕ ವರದಿ ಪಡೆದಿದ್ದ ಸಮಿತಿ, ನವೆಂಬರ್ 14ರಂದು ಟೆಂಡರ್ ಹರಾಜಿಗೆ ಸಾರ್ವಜನಿಕ ಪ್ರಕಟಣೆ ನೀಡಲು ಮುಂದಾಗಿತ್ತು.

ಆದರೆ, ನವೆಂಬರ್ 9ರಂದೇ ‘ಇ ಅಂಡ್ ವೈ’ ಕಂಪನಿ ಅಧಿಕಾರಿಗಳಿಗೆ ಡಿ. ರೂಪಾ ಅವರು ಕರೆ ಮಾಡಿದ್ದರು ಎನ್ನಲಾಗಿದೆ. ಸಾರ್ವಜನಿಕ ಪ್ರಕಟಣೆಗೂ ಮುನ್ನವೇ ತಾಂತ್ರಿಕ ವರದಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು ಎಂಬ ಆರೋಪ ಇದೀಗ ಕೇಳಿಬಂದಿದೆ.

‘ರೂಪಾ ಅವರು ಕರೆ ಮಾಡಿದ್ದ ಸಂಗತಿಯನ್ನು ಕಂಪನಿ ಪ್ರತಿನಿಧಿಗಳು, ಟೆಂಡರ್ ಆಹ್ವಾನ ಸಮಿತಿ ಗಮನಕ್ಕೆ ತಂದಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಹೇಮಂತ್ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆಗೆ ಸೂಚನೆ: ನಿರ್ಭಯಾ ನಿಧಿ ಬಳಕೆ ವಿಚಾರದಲ್ಲಿ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಸೂಚಿಸಿದ್ದಾರೆ.

ಅಲ್ಲದೇ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಪ್ರಕರಣದ ತನಿಖೆ ನಡೆಸುವಂತೆ ಹೇಳಿದ್ದಾರೆ. ತನಿಖೆ ಹೊಣೆಯನ್ನು ನಗರ ಪೊಲೀಸ್ ಕಮಿಷನರ್ ಕಮಲ್‌ ಪಂತ್ ಅವರಿಗೆ ವಹಿಸಿ ಗುರುವಾರ ಆದೇಶ ಹೊರಡಿಸಲಾಗಿದೆ.

ಮೊದಲ ಗುತ್ತಿಗೆ ರದ್ದುಪಡಿಸಿದ್ದು ಏಕೆ?
‘₹1,067 ಕೋಟಿ ಮೊತ್ತದ ನಿರ್ಭಯಾ ನಿಧಿ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡರದ್ದೂ ಪಾಲಿದೆ. ಯೋಜನೆಯ ಮೊದಲ ಹಂತದಲ್ಲಿ ₹612 ಕೋಟಿ ಮೊತ್ತದ ಕೆಲಸ ಮಾಡಲು ಯೋಜಿಸಲಾಗಿದೆ’ ಎಂದು ಡಿ.ರೂಪಾ ಹೇಳಿದ್ದಾರೆ.

ಡಿ. ರೂಪಾ

ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಟೆಂಡರ್‌ಗೆ ಅಗತ್ಯವಾದ ತಾಂತ್ರಿಕ ದಾಖಲೆಗಳನ್ನು ಸಿದ್ದಪಡಿಸಲು ಇ ಅಂಡ್ ವೈ ಕಂಪನಿಗೆ ₹ 2 ಕೋಟಿ ಸಂದಾಯವಾಗಿದೆ. ಒಂದೇ ಕಂಪನಿಗೆ ಅನುಕೂಲವಾಗುವ ರೀತಿಯಲ್ಲಿ ಕಂಪನಿಯು ದಾಖಲೆ ಸಿದ್ಧಪಡಿಸಿರುವುದಾಗಿ ಆರೋಪಿಸಿ ಪ್ರಧಾನ ಮಂತ್ರಿಗಳಿಗೆ ನವರತ್ನ ಕಂಪನಿ ದೂರು ಸಲ್ಲಿಸಿತ್ತು. ನಿಗದಿಪಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು ಚೀನಾ ದೇಶದ್ದಾಗಿದ್ದು, ಅಸುರಕ್ಷಿತವಾಗಿವೆ ಎಂದು ನವರತ್ನ ಕಂಪನಿ ಆರೋಪಿಸಿತ್ತು. ಹೀಗಾಗಿ, ಮೊದಲ ಗುತ್ತಿಗೆಯನ್ನು ರದ್ದುಪಡಿಸಲಾಗಿತ್ತು’ ಎಂದೂ ತಿಳಿಸಿದರು.

‘ಅದಾದ ನಂತರವೂ ಇ ಅಂಡ್ ವೈ ಕಂಪನಿಗೆ ದಾಖಲೆಗಳನ್ನು ಸಿದ್ದಪಡಿಸಲು ಎರಡನೇ ಬಾರಿಗೆ ಸೂಚಿಸಲಾಗಿತ್ತು. ನಾನು ಗೃಹ ಕಾರ್ಯದರ್ಶಿ ಆಗಿರುವ ಕಾರಣ ಗುತ್ತಿಗೆ ಸಂಬಂಧಿಸಿದ ಕಡತ ನನ್ನ ಪರಿಶೀಲನೆಗೆ ಬಂದಿತ್ತು. ಆಗ ನಾನೇ ಕಂಪನಿಯ ಅಧಿಕಾರಿಗೆ ಕರೆ ಮಾಡಿ ವಿವರ ಕೇಳಿದ್ದು ನಿಜ. ಆದರೆ, ಮೊದಲ ಬಾರಿಯ ಟೆಂಡರ್ ರದ್ದುಪಡಿಸಿದ್ದು ಏಕೆ? ಆ ಟೆಂಡರ್ ಸಮಿತಿಯ ಅಧ್ಯಕ್ಷರು ಯಾರ ಪರ ಕೆಲಸ ಮಾಡಿದ್ದರು? ಎಂಬುದೂ ಹೊರಬರಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT