ಗುರುವಾರ , ಆಗಸ್ಟ್ 11, 2022
20 °C

ಹೊಸ ವರ್ಷ ಸಾರ್ವಜನಿಕ ಆಚರಣೆಗೆ ಅವಕಾಶವಿಲ್ಲ: ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸಾರ್ವಜನಿಕವಾಗಿ ವರ್ಷದ ಕೊನೆ ದಿನ ಹಾಗೂ ಹೊಸ ವರ್ಷಾಚರಣೆಗೆ ಈ ಬಾರಿ ಅವಕಾಶ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೋವಿಡ್ 2ನೇ ಅಲೆಯ ಕಾರಣದಿಂದಾಗಿ ವಿಜ್ಞಾನಿಗಳ ಸಲಹೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಅವರೊಂದಿಗೆ ನಾನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಚರ್ಚೆ ಮಾಡಿದ್ದೇವೆ. ಅದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಈ ವಿಷಯದಲ್ಲಿ ಆದೇಶ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು’ ಎಂದು ಹೇಳಿದರು.

ಹೋಟೆಲ್‌ಗಳಲ್ಲಿ ಪಾರ್ಟಿ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ‌ ಕೋವಿಡ್ ಮಾರ್ಗಸೂಚಿ ಪ್ರಕಾರ ಇರಬೇಕು. ಒಟ್ಟು ಸಾಮರ್ಥ್ಯದ ಶೇ 50ರಷ್ಟು ಆಸನಗಳಿಗೆ ಮಾತ್ರ ಅವಕಾಶ ಇರುತ್ತದೆ. ಅಂತರ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ. ಹಿಂದೆಲ್ಲಾ ಅದ್ಧೂರಿಯಾಗಿ ‌ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಿದ್ದೇವೆ. ಈ ಬಾರಿ ಕೊರೊನಾ ಕಾರಣದಿಂದಾಗಿ ಸರ್ಕಾರಕ್ಕೆ ಸಹಕಾರ ನೀಡಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೋರಿದರು.

ನಮ್ಮ ಸರ್ಕಾರ ಬೀಳಿಸಿದ್ದು ಬಿಜೆಪಿಯವರು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದರು. ಇಂದು ಸಿದ್ದರಾಮಯ್ಯ ಎನ್ನುವ ನಿಜವನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸಹವಾಸ ಮಾಡಿದರೆ ವನವಾಸ ಎನ್ನುವುದು ಸಾಬೀತಾಗಿದೆ. ಮುಂದೆಯಾದರೂ ಕಾಂಗ್ರೆಸ್ ಸಹವಾಸ ಮಾಡದಿರಲಿ. ಕಾಂಗ್ರೆಸ್ ಕೆಟ್ಟದ್ದು ಎನ್ನುವುದು ಈಗಲಾದರೂ ಅವರಿಗೆ ಗೊತ್ತಾಗಿದೆ ಎಂದರು.

ನಮ್ಮ ಸರ್ಕಾರ ಸುಭದ್ರವಾಗಿದೆ. ಯಾರ ಅಗತ್ಯವೂ ಇಲ್ಲ. ಯಾರೊಂದಿಗೂ‌ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಬರುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಹೊರಗಿನವರ ಅಗತ್ಯ ನಮಗಿಲ್ಲ. ನಮ್ಮಲ್ಲೇ ಹೆಚ್ಚುವರಿ ಆಗಿದ್ದಾರೆ ಎಂದು ತಿಳಿಸಿದರು.

ಲವ್ ಜಿಹಾದ್ ಅಲ್ಲ ಅದು ಡವ್ ಜಿಹಾದ್. ಅದನ್ನು ಹಾಗೂ ಗೋಹತ್ಯೆ ತಡೆಗೆ ಈ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು