ಗುರುವಾರ , ಜುಲೈ 7, 2022
23 °C

ಶಿಕ್ಷಕರನ್ನು ನೇಮಿಸಿದ್ದು ಸಂಸಾರ ನೋಡಿಕೊಳ್ಳಲು ಅಲ್ಲ: ಶಿಕ್ಷಣ ಸಚಿವ ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಕೋವಿಡ್‌ ಕಾರಣಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 35 ದಿನಗಳು ಕಡಿಮೆಯಾಗಿವೆ. ದಸರಾ ರಜೆ ಸಂದರ್ಭದಲ್ಲಿ ಐದು ದಿನ ಸರಿದೂಗಿಸಲಾಗಿದೆ. ಶಿಕ್ಷಕರು ಒಪ್ಪಿಕೊಂಡರೆ ಶನಿವಾರವು ಪೂರ್ಣ ಅವಧಿ ತರಗತಿ ನಡೆಸುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಷ್ಟೇ ಕಷ್ಟವಾದರೂ ಪಠ್ಯಬೋಧನೆ ಪೂರ್ಣಗೊಳಿಸುವುದಾಗಿ ಹಲವು ಶಿಕ್ಷಕರು ಉತ್ಸಾಹದಿಂದ ಹೇಳುತ್ತಿದ್ದಾರೆ. ಸದ್ಯ, ಪಠ್ಯವನ್ನು ಕಡಿತಗೊಳಿಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಎನ್‌ಇಪಿ ಜಾರಿಗೆ ಸಿದ್ಧತೆ: ‘ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಇಚ್ಛೆ ಇದ್ದು, ತಯಾರಿ ಶುರುಮಾಡಿದ್ದೇವೆ. ಈಗಾಗಲೇ ಮದನ್‌ಗೋಪಾಲ್‌ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ್ದೇವೆ‘ ಎಂದರು.

‘ಶಿಕ್ಷಣ ತಜ್ಞರು, ಎನ್‌ಜಿಒಗಳ ಜೊತೆಗೂಡಿ ಶಿಕ್ಷಣದ ರೀತಿ–ನೀತಿ ಹೇಗಿರಬೇಕು ಎಂಬ ಬಗ್ಗೆ ಯೋಚಿಸಲಾಗುವುದು. ಪಠ್ಯ ಚಟುವಟಿಕೆಗಳು ಸಿದ್ಧಗೊಂಡು, ಶಿಕ್ಷಕರಿಗೆ ತರಬೇತಿ ಕೊಡಲು ಸಾಧ್ಯವಾದರೆ ಮುಂದಿನ ವರ್ಷ ‘0’, ‘–1’, ‘3’ ಹಾಗೂ ‘9’ನೇ ತರಗತಿಗಳಲ್ಲಿ ಜಾರಿಗೊಳಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸದ್ಯಕ್ಕಿಲ್ಲ ಶಾಲೆ ಬಂದ್‌: ‘ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. ಮಡಿಕೇರಿ ಸಮೀಪದ ಗಾಳಿಬೀಡು ನವೋದಯ ಶಾಲೆಯಲ್ಲಿ 31 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಉಳಿದ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗಿದೆ. ಇಬ್ಬರನ್ನು ಹೊರತುಪಡಿಸಿ ಉಳಿದವರಲ್ಲಿ ರೋಗ ಲಕ್ಷಣಗಳಿಲ್ಲ. ಕೋವಿಡ್‌ ಶಾಲೆಯಿಂದ ಹಬ್ಬಿರುವುದಲ್ಲ’ ಎಂದರು.

‘ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ರೇಟ್‌ ಶೂನ್ಯಕ್ಕೆ ಇಳಿದಿದೆ. ಮಕ್ಕಳನ್ನು ನಾವು ಪಾನಿಪೂರಿ ತಿನ್ನಲು, ಮದುವೆ ಸಮಾರಂಭಗಳಿಗೆ ಕಳುಹಿಸುತ್ತೇವೆ. ಹೀಗಿರುವಾಗ ಶಾಲೆಗೆ ಕಳುಹಿಸಲು ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಶಿಕ್ಷಕರನ್ನು ನೇಮಿಸಿದ್ದು ಸಂಸಾರ ನೋಡಿಕೊಳ್ಳಲು ಅಲ್ಲ’
‘ನಾವು ಶಿಕ್ಷಕರನ್ನು ನೇಮಿಸಿದ್ದು ಪಾಠ ಮಾಡಲಿ ಎಂದೇ ಹೊರತು ಅವರ ಸಂಸಾರವನ್ನು ನೋಡಿಕೊಳ್ಳಲಿ ಎಂದಲ್ಲ. ಶಿಕ್ಷಕರ ಸಮಸ್ಯೆಗಳು ನಮಗೆ ಅರ್ಥವಾಗುತ್ತದೆ. ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಿ, ಆ ಬಳಿಕ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ತಿಳಿಹೇಳಿದ್ದೇವೆ’ ಎಂದು ಸಚಿವ ನಾಗೇಶ್‌ ಅವರು ಶಿಕ್ಷಕರ ವರ್ಗಾವಣೆ ಕುರಿತ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

‘ಕೆಲ ಶಿಕ್ಷಕರ ವೈಯಕ್ತಿಕ ಸಮಸ್ಯೆಗಳನ್ನು ಸಾಮೂಹಿಕ ಸಮಸ್ಯೆ ಎಂದು ಬಿಂಬಿಸಬಾರದು. ಜಿಲ್ಲಾವಾರು ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ ಎಂದು ಆಗ ಗೊತ್ತಿರಲಿಲ್ಲವೇ, ರಾಯಚೂರು ದೂರವಾಗಲಿದೆ ಎಂಬುದು ತಿಳಿದಿರಲಿಲ್ಲವೇ’ ಎಂದು ಪ್ರಶ್ನಿಸಿದ ಸಚಿವರು, ‘ಮೂರು ವರ್ಷಗಳ ಬಳಿಕ ಇದೀಗ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಸುಗಮವಾಗಿ ನಡೆಯುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು