ಬುಧವಾರ, ಜನವರಿ 20, 2021
17 °C
ಡಿಸೆಂಬರ್‌ ಮೂರನೇ ವಾರದಲ್ಲಿ ನಿರ್ಧಾರ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಗೆ ಪರೀಕ್ಷೆ ಉಂಟು

ಶಾಲೆ, ಪಿಯು ಕಾಲೇಜು ಆರಂಭ ಇಲ್ಲ: ಡಿಸೆಂಬರ್‌ ಮೂರನೇ ವಾರದಲ್ಲಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ 2020ರ ಡಿಸೆಂಬರ್‌ ಅಂತ್ಯದವರೆಗೆ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಆರಂಭಿಸದಿರಲು ಸರ್ಕಾರ ನಿರ್ಧರಿಸಿದೆ.

ಕೋವಿಡ್‌ ಕಾರಣದಿಂದ ಎಂಟು ತಿಂಗಳುಗಳಿಂದ ಮುಚ್ಚಿರುವ ಶಾಲೆ–ಪದವಿಪೂರ್ವ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಕೋವಿಡ್‌ ಪರಿಸ್ಥಿತಿಯನ್ನು ಡಿಸೆಂಬರ್‌ ಮೂರನೇ ವಾರದಲ್ಲಿ ಮತ್ತೊಮ್ಮೆ ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

‘ಯಾವುದೇ ಸನ್ನಿವೇಶದಲ್ಲಿ ಕೋವಿಡ್‌ ಜಾಸ್ತಿ ಆಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಲೆಗಳನ್ನು ಆರಂಭಿಸಿದರೆ ಮಕ್ಕಳಿಗೆ ತೊಂದರೆ ಆಗಬಹುದು. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, ‘ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳನ್ನು ಆರಂಭಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕೊರೊನಾ ಹರಡುವಿಕೆಯ ಏರಿಳಿತದ ಕಾರಣ ತರಗತಿಗಳನ್ನು ಆರಂಭಿಸುವ ಕುರಿತು ಡಿಸೆಂಬರ್ ಕೊನೆಯವರೆಗೆ ಕಾದು ನೋಡಬೇಕೆಂದು ಆರೋಗ್ಯ ತಜ್ಞರ ಸಲಹಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಭೆಯ ಗಮನಕ್ಕೆ ತಂದರು’ ಎಂದು ಹೇಳಿದರು.

‘ಶಾಲೆಗಳನ್ನು ಆರಂಭಿಸಲೇಬೇಕೆಂಬ ಬಗ್ಗೆ ಹಟ ಇಲ್ಲ. ಮಕ್ಕಳ ಜೀವವೇ ಪ್ರಮುಖವಾದ್ದರಿಂದ ಸದ್ಯಕ್ಕೆ ಶಾಲೆ ಆರಂಭಿಸುವುದು ಬೇಡವೆಂಬ ತೀರ್ಮಾನಕ್ಕೆ ಬರಲಾಗಿದೆ. ಶಾಲಾ ಕಾಲೇಜುಗಳು ಆರಂಭವಾಗದೇ ಇರುವುದರಿಂದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯಂಥ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿವೆ. ಹೀಗಾಗಿ, ಕೆಲವು ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವ ಕುರಿತು ಚರ್ಚೆ ನಡೆಯಿತು. ಒಂದರಿಂದ 7ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಯೋಚನೆಯೇ ಮಾಡಿಲ್ಲ’ ಎಂದು ಅವರು ಹೇಳಿದರು.

ಇದು ಕಲಿಕಾ‌‌ರಹಿತ ವರ್ಷವಲ್ಲ: ‘ಕಲಿಕಾ‌‌ರಹಿತ ವರ್ಷದ (ಶೂನ್ಯ ವರ್ಷ) ಪ್ರಸ್ತಾವನೆ ಸರ್ಕಾರದ‌ ಮುಂದೆ‌ ಸದ್ಯಕ್ಕೆ ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಶಾಲಾ ವಾತಾವರಣದಲ್ಲಿ‌ ಶೈಕ್ಷಣಿಕ‌ ಚಟುವಟಿಕೆ ನಡೆಸಲು ಸರ್ಕಾರ‌ ಮುಕ್ತವಾಗಿದೆ‌’ ಎಂದು ಸಚಿವ ಎಸ್‌. ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

‘ಎಲ್ಲ ತರಗತಿಗಳ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಪರ್ಯಾಯ ಬೋಧನಾ‌ ಕ್ರಮಗಳಿಗೆ ಚಾಲನೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಎಲ್ಲ‌ ತರಗತಿಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಶಾಲೆಗಳಲ್ಲಿ ಶಿಕ್ಷಕರು ಹಾಜರಾಗುವ ಮೂಲಕ ವಿದ್ಯಾರ್ಥಿಗಳ‌‌ ಕಲಿಕೆಯನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಖಚಿತ ಜವಾಬ್ದಾರಿಯನ್ನು ನಿರ್ವಹಿಸಿ, ಎಲ್ಲ ತರಗತಿಗಳ ಮಕ್ಕಳನ್ನು ಕಲಿಕೆಗೆ ಅವರು ಪ್ರೇರೇಪಿಸಲಿದ್ದಾರೆ. ಯಾವ ವಿದ್ಯಾರ್ಥಿಯೂ ಕಲಿಕಾ ಅವಕಾಶದಿಂದ ವಂಚಿತವಾಗದ ಕಾರಣ ಈ ವರ್ಷವನ್ನು ಕಲಿಕಾ‌ರಹಿತ ವರ್ಷ ಎನ್ನಲು‌‌ ಸಾಧ್ಯವಿಲ್ಲ’ ಎಂದೂ ಹೇಳಿದ್ದಾರೆ.

‘ಪಠ್ಯ ಕಡಿತ: ಅಂತಿಮ ತೀರ್ಮಾನ ಆಗಿಲ್ಲ’
‘ಶಾಲಾ ಪಠ್ಯಗಳನ್ನು ಕಡಿತಗೊಳಿಸಿರುವ ಪಠ್ಯ ಪುಸ್ತಕ ರಚನಾ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸಮಿತಿಯ ಜತೆ ಸಚಿವ ಸುರೇಶ್‌ ಕುಮಾರ್‌ ಈಗಾಗಲೇ ಚರ್ಚಿಸಿದ್ದು, ಕೆಲವು ಸಲಹೆ ನೀಡಿದ್ದಾರೆ. ಶೇ 35ರಿಂದ 40ರಷ್ಟು ಪಠ್ಯ ಕಡಿತಗೊಳ್ಳಲಿದ್ದು, ಅಂತಿಮ ತೀರ್ಮಾನ ಆಗಿಲ್ಲ’ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ವಿಜ್ಞಾನ ವಿಷಯಗಳನ್ನು ಬಿಟ್ಟು, ಇತರ 33 ವಿಷಯಗಳಲ್ಲಿ ಶೇ 30ರಷ್ಟು ಪಠ್ಯವನ್ನು ಕಡಿತಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಿಜ್ಞಾನ ವಿಷಯಗಳ ಪಠ್ಯ ಕಡಿತವನ್ನು ಸಿಬಿಎಸ್‌ಇ ಶಿಕ್ಷಣ ಮಂಡಳಿ ನಿಗದಿಪಡಿಸಿದಂತೆ ಅಳವಡಿಸಲಾಗಿದೆ.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳೇನು?
* ಕೋವಿಡ್ ಹರಡುವಿಕೆ ಕಾರಣ ಡಿಸೆಂಬರ್‌ನಲ್ಲೂ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ
* ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ದೆಹಲಿ, ಹರಿಯಾಣ, ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಸೋಂಕು ಹರಡುವಿಕೆ ವೇಗ ಪಡೆದಿದೆ
* ಚಳಿಗಾಲ ಇರುವುದರಿಂದ ಕೋವಿಡ್ ಹರಡುವಿಕೆ, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಬಾಧಿಸಲಿದೆ
* ಸೆಪ್ಟೆಂಬರ್‌ನಲ್ಲಿ ನಡೆದ ಸಮೀಕ್ಷೆ ಪ್ರಕಾರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು