ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಲ್ಕ ಇಳಿಕೆಯಷ್ಟೆ ಅಲ್ಲ, ನಿಯಮ ಸಡಿಲಿಸಿ: ರುಪ್ಸ ಆಗ್ರಹ

ಕಟ್ಟಡ ಶುಲ್ಕ ಇಳಿಸಿದ ಲೋಕೋಪಯೋಗಿ ಇಲಾಖೆ l ರುಪ್ಸ ಆಗ್ರಹ
Last Updated 20 ನವೆಂಬರ್ 2021, 21:01 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳು ಹಳೆಯ ‘ಕಟ್ಟಡಗಳಿಗೆ ಸುಸ್ಥಿರತೆ’ ಪ್ರಮಾಣಪತ್ರ ಪಡೆಯಲು ವಿಧಿಸಿದ ಕಟ್ಟಡದ ಮೌಲ್ಯಮಾಪನ ಶುಲ್ಕ ಇಳಿಸಿದರಷ್ಟೆ ಸಾಲದು, ವಿಧಿಸಿರುವ ನಿಯಮಗಳನ್ನೂ ಸಡಿಲಿಸಬೇಕು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆಗ್ರಹಿಸಿವೆ.

ಲೋಕೋಪಯೋಗಿ ಇಲಾಖೆ ನ. 10ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಕಟ್ಟಡದ ಮೌಲ್ಯದ ಶೇ 0.5ರಷ್ಟು ಮೊತ್ತವನ್ನು ಶುಲ್ಕವಾಗಿ ಕಟ್ಟಬೇಕು ಎಂದು ಸೂಚಿಸಿತ್ತು. ಇದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಈ ಬಗ್ಗೆ ‘ಪ್ರಜಾವಾಣಿ’ಯ ನ. 20ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೆ, ಈ ಮೊತ್ತವನ್ನು ಶೇ 0.05ಕ್ಕೆ ಇಳಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಲಾಗಿದೆ.

‘ಪ್ರಮಾಣಪತ್ರಕ್ಕಾಗಿ ಸಲ್ಲಿಸುವ ಅರ್ಜಿಯ ಜೊತೆಗೆ ಸಲ್ಲಿಸಬೇಕಾದ ಇತರ ದಾಖಲೆಗಳ ವಿಷಯದಲ್ಲೂ ಸರ್ಕಾರ ವಿನಾಯಿತಿ ನೀಡದಿದ್ದರೆ, ಶೇ 80ರಷ್ಟು ಶಾಲೆಗಳು ಮುಚ್ಚಬೇಕಾದೀತು’ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೇಳಿವೆ.

‘ಕಟ್ಟಡದ ಸುಸ್ಥಿರ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸುವಾಗ ಒಂಬತ್ತು ನಿಯಮಗಳನ್ನು ಅನುಸರಿಸುವಂತೆ ಖಾಸಗಿ ಶಾಲಾ, ಕಾಲೇಜುಗಳಿಗೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ. ಈ ನಿಯಮಗಳಿಂದ ಸರ್ಕಾರಿ ಶಾಲೆ, ಕಾಲೇಜುಗಳನ್ನು ಹೊರಗಿಡಲಾಗಿದೆ. ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ಕಲಿಯುವವರು ಸುರಕ್ಷಿತ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ರಕ್ಷಣೆಯ ಅವಶ್ಯಕತೆಯಿದೆ ಎಂಬ ಸರ್ಕಾರದ ಈ ಧೋರಣೆ ಖಂಡನೀಯ’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ (ರುಪ್ಸ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಆಕ್ರೋಶ ವ್ಯಕ್ತಪಡಿಸಿದರು.

‘ಖಾಸಗಿ ಶಾಲೆಗಳು ಈಗಾಗಲೇ ಸಂಕಷ್ಟದಲ್ಲಿವೆ. ಇದೀಗ ಅನುಸರಿಸುವ ಇಬ್ಬಗೆ ನೀತಿಯಿಂದ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರ ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ರಾಜ್ಯದಾದ್ಯಂತ ಶಾಲೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

‘ಸದ್ಯ ವಿಧಿಸಿರುವ ನಿಯಮಗಳಡಿ ನಿರಾಕ್ಷೇಪಣಾ ಪತ್ರ ಪಡೆಯಲು ಕೆಲವು ವರ್ಷಗಳೇ ಹಿಡಿಯಬಹುದು. ಬೆಂಗಳೂರಿನಂಥ ನಗರಗಳಲ್ಲಿ ಅಭಿವೃದ್ಧಿ ಶುಲ್ಕ ಪಡೆಯುತ್ತಿಲ್ಲ. ಅಭಿವೃದ್ಧಿ ಶುಲ್ಕ ಪಡೆಯದೆ ಅನುಮೋದಿತ ನಕ್ಷೆ ದೊರೆಯುವುದಿಲ್ಲ. ಇದ್ಯಾವುದೂ ಇಲ್ಲದೆ ಸ್ವಾಧೀನಾನುಭವ ಪ್ರಮಾಣಪತ್ರ ದೊರೆಯುವುದಿಲ್ಲ. ಅಕ್ರಮ– ಸಕ್ರಮ ಪ್ರಕ್ರಿಯೆಗೆ ಅನುಮತಿ ದೊರೆಯದೆ ಈ ನಿಯಮಗಳ ಕುರಿತು ನಿರಾಕ್ಷೇಪಣಾ ಪತ್ರ ಪಡೆಯಲು ಸಾಧ್ಯವೇ ಇಲ್ಲ’ ಎಂದರು.

‘ಪ್ರಮಾಣಪತ್ರ ಪಡೆಯಲು ಸರ್ಕಾರ ಕೇಳಿದ ದಾಖಲೆಗಳನ್ನು ನೀಡಲು ಯಾವುದೇ ಶಾಲೆಗಳ ಆಡಳಿತ ಮಂಡಳಿಗಳಿಗೆ ಸಾಧ್ಯವೇ ಇಲ್ಲ. ಮೌಲ್ಯಮಾಪನ ಶುಲ್ಕ ಇಳಿಸಿರುವ ಜೊತೆಗೆ ಇತರ ದಾಖಲೆಗಳನ್ನು ಸಲ್ಲಿಸಲೇಬೇಕೆಂಬ ವಿಷಯದಲ್ಲೂ ವಿನಾಯಿತಿ ನೀಡಬೇಕು’ ಎಂದು ಖಾಸಗಿ ಶಾಲೆಗಳ ಒಕ್ಕೂಟದ (ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT