ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ: ಕೋವಿಡ್‌ ಸೋಂಕಿತರಿಗೂ ಸ್ಪರ್ಧೆಗೆ ಅವಕಾಶ

ಮಾರ್ಗದರ್ಶಿ ಸೂತ್ರ ಪ್ರಕಟ
Last Updated 4 ಸೆಪ್ಟೆಂಬರ್ 2020, 15:14 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಕೋವಿಡ್‌–19 ಸೋಂಕಿತರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನದಲ್ಲಿ ಭಾಗವಹಿಸಲು ಅವಕಾಶ ನೀಡಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದವರು ವಿಜಯೋತ್ಸವ ನಡೆಸುವಂತಿಲ್ಲ.

ಗ್ರಾಮ ಪಂಚಾಯಿತಿ ಚುನಾವಣೆಗೆ ಅಂತಿಮ ಹಂತದ ಸಿದ್ಧತೆ ಆರಂಭಿಸಿರುವ ರಾಜ್ಯ ಚುನಾವಣಾ ಆಯೋಗ, ಚುನಾವಣಾ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಪಿ) ಗುರುವಾರ ಪ್ರಕಟಿಸಿದೆ. ಆರೋಗ್ಯ ಇಲಾಖೆಯ ತಜ್ಞರೊಂದಿಗೆ ಚರ್ಚೆ ನಡೆಸಿರುವ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಚುನಾವಣೆಯ ವಿವಿಧ ಹಂತಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದಾರೆ.

ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ, ಮತದಾನ, ಮತ ಎಣಿಕೆ, ಮತಗಟ್ಟೆ ಸಿಬ್ಬಂದಿ ಹಾಗೂ ಮತ ಎಣಿಕೆ ಸಿಬ್ಬಂದಿಯ ತರಬೇತಿ ಕೇಂದ್ರಗಳಲ್ಲಿ ಹಾಜರಿರುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮತಗಟ್ಟೆ ಸಿಬ್ಬಂದಿ ಹಾಗೂ ಮತ ಎಣಿಕೆ ಸಿಬ್ಬಂದಿಯ ತರಬೇತಿಯಲ್ಲಿ ಅಂತರ ಕಾಯ್ದುಕೊಳ್ಳುವುದು ಮತ್ತು ವೆಬಿನಾರ್‌ಗಳ ಮೂಲಕ ತರಬೇತಿ ನೀಡುವುದಕ್ಕೆ ಆದ್ಯತೆ ನೀಡುವಂತೆ ಆಯೋಗ ಸೂಚಿಸಿದೆ.

ಸೂಚಕರ ಬಳಕೆಗೆ ಅವಕಾಶ: ಚುನಾವಣೆಗೆ ಸ್ಪರ್ಧಿಸುವವರು ಖುದ್ದಾಗಿ ಅಥವಾ ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದು. ಅಭ್ಯರ್ಥಿಗಳು ಕೋವಿಡ್‌ ಸೋಂಕಿತರಾಗಿದ್ದರೆ ಸೂಚಕರ ಮೂಲಕವೇ ನಾಮಪತ್ರ ಸಲ್ಲಿಸಬೇಕು. ನಾಮಪತ್ರ ಪರಿಶೀಲನೆ ಮತ್ತು ಚಿಹ್ನೆಗಳ ವಿತರಣೆ ಪ್ರಕ್ರಿಯೆಯಲ್ಲೂ ಇದೇ ನಿಯಮ ಅನ್ವಯವಾಗುತ್ತದೆ.

ಒಬ್ಬ ಅಭ್ಯರ್ಥಿಯು ಐವರು ಬೆಂಬಲಿಗರ ಜೊತೆಗೂಡಿ ಚುನಾವಣಾ ಪ್ರಚಾರ ನಡೆಸಬಹುದು. ಕೋವಿಡ್ ಮಾರ್ಗಸೂಚಿಗಳ ಅನ್ವಯ ಸಭೆ ನಡೆಸಬಹುದು. ಕೋವಿಡ್‌ ಸೋಂಕಿತ ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮಗಳ ಮೂಲಕವೇ ಪ್ರಚಾರ ನಡೆಸಬೇಕು.

ಕೋವಿಡ್‌ ಸೋಂಕಿತರಾಗಿದ್ದು, ಮನೆಯಲ್ಲೇ ಪ್ರತ್ಯೇಕವಾಸದಲ್ಲಿ ಇರುವವರಿಗೆ ಮತ ಚಲಾಯಿಸಲು ಅಂಚೆ ಮತಪತ್ರ ನೀಡಲು ಆಯೋಗ ನಿರ್ಧರಿಸಿದೆ. ಈ ಸಂಬಂಧ ಶೀಘ್ರದಲ್ಲಿ ಪ್ರತ್ಯೇಕ ಆದೇಶ ಹೊರಡಿಸುವುದಾಗಿ ಆಯೋಗ ಪ್ರಕಟಿಸಿದೆ.

ಮಾಸ್ಕ್ ಕಡ್ಡಾಯ

ಮಾಸ್ಕ್ ಧರಿಸಿದವರಿಗೆ ಮಾತ್ರ ಮತಗಟ್ಟೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತಗಟ್ಟೆ ಏಜೆಂಟರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಬಳಸಿ ಜ್ವರ ತಪಾಸಣೆ ನಡೆಸಬೇಕು. ಕೋವಿಡ್‌ ಲಕ್ಷಣಗಳು ಕಂಡುಬಂದರೆ ಅಂತಹವರನ್ನು ಹೆಚ್ಚಿನ ತಪಾಸಣೆಗಾಗಿ ಸಮೀಪದ ಆರೋಗ್ಯ ಕೇಂದ್ರಕ್ಕೆ ಕಳುಹಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಸ್ಟರಿಂಗ್‌ ಮತ್ತು ಡಿ– ಮಸ್ಟರಿಂಗ್‌ ಕೇಂದ್ರಗಳು, ಮತಗಟ್ಟೆ, ಮತ ಎಣಿಕೆ ಕೇಂದ್ರಗಳಲ್ಲೂ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತದೆ. ಮತಗಟ್ಮಟೆಗಳು ಹಾಗೂ ಮತ ಎಣಿಕೆ ಕೇಂದ್ರಗಳ ಸಮೀಪ ಜನರು ಗುಂಪುಗೂಡುವಂತಿಲ್ಲ. ಚುನಾವಣೆಯಲ್ಲಿ ಜಯ ಗಳಿಸಿದವರು ವಿಜಯೋತ್ಸವ ಆಚರಿಸುವಂತಿಲ್ಲ ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT