ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಆನೆ ಅಭಿಮನ್ಯು ಸಾರಥ್ಯ: ಮತ್ತೆ ಪುಂಡಾನೆ ಸೆರೆಗೆ ಸಜ್ಜು

Last Updated 6 ನವೆಂಬರ್ 2022, 19:37 IST
ಅಕ್ಷರ ಗಾತ್ರ

ರಾಮನಗರ: ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಗಜಪಡೆ ಸೆರೆ ಹಿಡಿಯಲು ಇಲ್ಲವೇ ಮರಳಿ ಕಾಡಿಗಟ್ಟಲು ಎರಡನೇ ಹಂತದ ಕಾರ್ಯಾಚರಣೆ ಶೀಘ್ರ ಆರಂಭಗೊಳ್ಳಲಿದೆ. ಈ ಬಾರಿ ದಸರಾ ಆನೆ ಅಭಿಮನ್ಯು ಸಾರಥ್ಯ ವಹಿಸಲಿದ್ದಾನೆ.

ಈ ಬಾರಿಯ ಕಾರ್ಯಾಚರಣೆಯಲ್ಲಿ ಮತ್ತಿಗೋಡು ಶಿಬಿರದಿಂದ ನಾಲ್ಕು ಸಾಕಾನೆಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದರೊಟ್ಟಿಗೆ ಆನೆತಜ್ಞರು, ಅರಿವಳಿಕೆ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗಿ ಆಗಲಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಈ ಕಾರ್ಯಾಚರಣೆ ಆರಂಭ ಆಗಲಿದ್ದು, ಕನಿಷ್ಠ 4–5 ದಿನಗಳ ಕಾಲ ನಡೆಯುವ ಸಾಧ್ಯತೆ ಇದೆ.

ಚನ್ನಪಟ್ಟಣ ತಾಲ್ಲೂಕು ಹಾಗೂ ರಾಮನಗರ–ಕನಕಪುರ ಗಡಿಭಾಗದಲ್ಲಿ ಕಾಡಾನೆಗಳ ದಾಳಿ ನಿರಂತರವಾಗಿದೆ. ಇದರಿಂದಾಗಿ ಬೆಳೆ ಹಾನಿ ಜೊತೆಗೆ ಜನ–ಜಾನುವಾರುಗಳ ಪ್ರಾಣ ಹಾನಿಯಾಗುತ್ತಿದೆ. ಆಗಸ್ಟ್‌ನಲ್ಲಿ ನಡೆದ ಮೊದಲ ಹಂತದ ಕಾರ್ಯಾಚರಣೆಯಲ್ಲಿ ಐದು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆದಿತ್ತು. ಎರಡು ಗಜಗಳನ್ನು ಸೆರೆ ಹಿಡಿಯಲಾಗಿತ್ತು.

ಆದಾಗ್ಯೂ ಚನ್ನಪಟ್ಟಣ ಭಾಗದಲ್ಲಿ ಮತ್ತೆ ಕಾಡಾನೆ ದಾಳಿ ನಿರಂತರವಾಗಿದೆ. ಒಂದೆಡೆ ಒಂಟಿ ಸಲಗಗಳು ಕಾಡಿಗೆ ನುಗ್ಗುತ್ತಿದ್ದರೆ, ಮತ್ತೊಂದೆಡೆ ನಾಲ್ಕಾರು ಆನೆಗಳ ಹಿಂಡು ಚನ್ನಪಟ್ಟಣ ಹಾಗೂ ರಾಮನಗರದ ಚಿಕ್ಕಮಣ್ಣುಗುಡ್ಡೆ, ತೆಂಗಿನಕಲ್ಲು ಅರಣ್ಯದ ಆಸುಪಾಸಿನ ಗ್ರಾಮಗಳಲ್ಲಿ ದಾಂದಲೆ ನಡೆಸುತ್ತಿವೆ. ಹೀಗಾಗಿ ಮತ್ತೆ ಆನೆಗಳ ಸೆರೆಗೆ ಸಾರ್ವಜನಿಕರಿಂದ ಒತ್ತಾಯ ಹೆಚ್ಚುತ್ತಿದೆ.

‘ದಸರಾ ಅಂಬಾರಿ ಹೊರುವ ಅಭಿಮನ್ಯು ಸಾರಥ್ಯದಲ್ಲಿ ಈ ಬಾರಿ ಆನೆ ಸೆರೆ ಕಾರ್ಯಾಚರಣೆ ನಡೆಯಲಿದೆ. ಜಿಲ್ಲೆಯಲ್ಲಿ 20–25 ಆನೆಗಳ ಗುಂಪು ಓಡಾಡುತ್ತಿದ್ದು, ಇವುಗಳ ಪೈಕಿ ಸಾಕಷ್ಟು ಆನೆಗಳನ್ನು ಆಗಸ್ಟ್‌ನಲ್ಲಿ ಕಾಡಿಗೆ ಅಟ್ಟಲಾಗಿತ್ತು. ಇನ್ನೂ 5–6 ಆನೆಗಳು ಗ್ರಾಮಗಳ ಆಸುಪಾಸು ತಿರುಗಾಡುತ್ತಿದ್ದು, ಅವುಗಳನ್ನು ಓಡಿಸಲು ಹಾಗೂ ಅಗತ್ಯಬಿದ್ದಲ್ಲಿ ಸೆರೆ ಹಿಡಿಯಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

*
ಎರಡನೇ ಸುತ್ತಿನ ಕಾಡಾನೆ ಸೆರೆ ಕಾರ್ಯಾಚರಣೆ ಶೀಘ್ರವೇ ಆರಂಭ ಆಗಲಿದೆ. ದಸರಾ ಆನೆ ಅಭಿಮನ್ಯು ಸಾರಥ್ಯದಲ್ಲಿ ನಾಲ್ಕು ಸಾಕಾನೆಗಳು ಇಲ್ಲಿಗೆ ಬರಲಿವೆ.
–ದೇವರಾಜು, ಡಿಸಿಎಫ್‌, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT